ವಿಧಾನಸೌಧ ಸೇರಿ ಸರ್ಕಾರಿ ಕಟ್ಟಡಗಳ ಸೇವಾ ಶುಲ್ಕ ವಸೂಲಿ ಮಾಡದ ಬಿಬಿಎಂಪಿ! ಪಾಲಿಕೆಗೆ ಬರಬೇಕಿದೆ ಬರೋಬ್ಬರಿ 106 ಕೋಟಿ

ಸಾಮಾನ್ಯ ಜನರು ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲಿಲ್ಲ ಅಂದ್ರೆ ನೋಟಿಸ್, ವಾರೆಂಟ್, ಚರಾಸ್ತಿ ಜಪ್ತಿ ಮಾಡ್ತೀನಿ ಅನ್ನೋ ಪಾಲಿಕೆ ಸರ್ಕಾರಿ ಆಸ್ತಿ, ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಂದಲೂ ಸೇವಾಶುಲ್ಕ ಕಲೆಕ್ಟ್ ಮಾಡಿದ್ರೆ ವರ್ಷಕ್ಕೆ ಕಡಿಮೆ ಅಂದ್ರೂ 900 ಕೋಟಿ ಪಾಲಿಕೆಗೆ ಆದಾಯ ರೂಪದಲ್ಲಿ ಬರುತ್ತೆ ಅಂತಿದೆ ಬಿಜೆಪಿ.

news18
Updated:February 21, 2019, 7:02 PM IST
ವಿಧಾನಸೌಧ ಸೇರಿ ಸರ್ಕಾರಿ ಕಟ್ಟಡಗಳ ಸೇವಾ ಶುಲ್ಕ ವಸೂಲಿ ಮಾಡದ ಬಿಬಿಎಂಪಿ! ಪಾಲಿಕೆಗೆ ಬರಬೇಕಿದೆ ಬರೋಬ್ಬರಿ 106 ಕೋಟಿ
ವಿಧಾನ ಸೌಧ
  • News18
  • Last Updated: February 21, 2019, 7:02 PM IST
  • Share this:
- ಶ್ಯಾಮ್​

ಬೆಂಗಳೂರು: ಸಾಮಾನ್ಯ ಜನರು ‘ಸರ್ಕಾರಕ್ಕೆ ಆಸ್ತಿ ತೆರಿಗೆ ಕಟ್ಟಲಿಲ್ಲ ಅಂದರೆ ಕಾನೂನು ಬಳಸಿ ಚರಾಸ್ತಿಗಳನ್ನು ಜಪ್ತಿ ಮಾಡಲಾಗುತ್ತದೆ. ಆದರೆ, ಸರ್ಕಾರದ ಅಂಗ ಸಂಸ್ಥೆಗಳಿಗೆ ಸರ್ಕಾರವೇ ಕಟ್ಟಬೇಕಿರುವ ಸೇವಾ ತೆರಿಗೆ ಕಟ್ಟದಿದ್ದರೂ ಆ ಬಗ್ಗೆ ಕೇಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಕಾನೂನು ಮಾಡುವ ಸರ್ಕಾರವೇ ಕಾನೂನು ಪಾಲನೆ ಮಾಡಲಿಲ್ಲ ಅಂದರೆ ಹೇಗೆ?

ವಿಧಾನಸೌಧ, ವಿಕಾಸ ಸೌಧ, ಇಸ್ರೋ ಸೇರಿದಂತೆ ನಗರದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡ ಹಾಗೂ ಆಸ್ತಿಗಳಿಂದ ಪಾಲಿಕೆಗೆ ನೂರಾರು ಕೋಟಿ ರೂಪಾಯಿ ಸೇವಾ ಶುಲ್ಕ ಬಾಕಿ ಇದೆ. ಅದನ್ನು ವಸೂಲಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.

1.3 ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಣ ಇಲ್ಲ ಅಂತ ಬಿಬಿಎಂಪಿ ಬೊಂಬೆ ಹಾಕುತ್ತಿದೆ. ಇನ್ನೊಂದು ಕಡೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಾಕಿ ಬಿಲ್ ಕೊಡದೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಆದರೆ, ತನ್ನದೇ ಸ್ವತ್ತನ್ನು ಒಂದು ರೂಪಾಯಿ, ಎರಡು ರೂಪಾಯಿಗೆ ಗುತ್ತಿಗೆ ಕೊಡುತ್ತಿದೆ. ಇನ್ನೊಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟಬೇಕಿರುವ ಬರೋಬ್ಬರಿ 106 ಕೋಟಿ ರೂಪಾಯಿ ಸರ್ವೀಸ್ ಚಾರ್ಜ್​ ಅನ್ನು ವಸೂಲಿ ಮಾಡದೆ ಹಾಗೆ ಬಿಟ್ಟುಕೊಂಡಿದೆ. ಸರ್ಕಾರಿ ಸಂಸ್ಥೆಗಳು ಬಾಕಿ ಕಟ್ಟೋಕೆ ಮುಂದಾಗುತ್ತಿಲ್ಲ. ಅಂತಹ ಶುಲ್ಕ ಕಟ್ಟದ ಪ್ರಮುಖ ಕಟ್ಟಡಗಳ ವಿವರ ಇಲ್ಲಿದೆ.

ರಾಜ್ಯ ಸರ್ಕಾರಿ ಕಟ್ಟಡಗಳು         ಬಾಕಿ

ವಿಧಾನಸೌಧ                                        1.15 ಕೋಟಿ ರೂ.
ವಿಕಾಸಸೌಧ                                        2.91 ಕೋಟಿ ರೂ.ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್       1.93 ಕೋಟಿ ರೂ.
ಕೆಎಸ್ ಆರ್ ಟಿಸಿ                               1.94 ಕೋಟಿ ರೂ.
ಸಿಎಆರ್ (ಪೊಲೀಸ್ ಇಲಾಖೆ)       6.81 ಕೋಟಿ ರೂ.
ಬೆಂಗಳೂರು ಜಲಮಂಡಳಿ           4.75 ಕೋಟಿ ರೂ.

ಕೇಂದ್ರ ಸರ್ಕಾರದ ಕಟ್ಟಡಗಳು        ಬಾಕಿ

ಕೇಂದ್ರ ಅಬಕಾರಿ ಇಲಾಖೆ ಕ್ವಾಟ್ರಸ್   48 ಲಕ್ಷ ರೂ.
ಎನ್ಎಎಲ್                                              3.36 ಲಕ್ಷ ರೂ.
ಇಸ್ರೋ                                                       3.29 ಲಕ್ಷ ರೂ.

ರಾಜ್ಯದ ಶಕ್ತಿಸೌಧ ಹಾಗೂ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧವೇ ಬಿಬಿಎಂಪಿಗೆ ಬರೋಬ್ಬರಿ 1 ಕೋಟಿ 15 ಲಕ್ಷ ರೂಪಾಯಿ ಶುಲ್ಕ ಬಾಕಿಯನ್ನು ಉಳಿಸಿಕೊಂಡಿದೆ. ಇದರ ನಂತರ ಪಕ್ಕದಲ್ಲೇ ಇರುವ ವಿಕಾಸ ಸೌಧದಿಂದ ಪಾಲಿಕೆಗೆ 2 ಕೋಟಿ 91 ಲಕ್ಷ ರೂಪಾಯಿ ಬಾಕಿ ಕಟ್ಟಿಲ್ಲ. ಇನ್ನು ಪಾಲಿಕೆ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿರೋ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡ 1 ಕೋಟಿ 93 ಲಕ್ಷ ರೂಪಾಯಿ ಶುಲ್ಕವನ್ನು ಪಾಲಿಕೆಗೆ ನೀಡಿಲ್ಲ. ಇನ್ನು ಸಾರಿಗೆ ಇಲಾಖೆಯ ಯಶವಂತಪುರದ ಕೆಎಸ್​ಆರ್​ಟಿಸಿ ಕಟ್ಟಡದಿಂದ 1 ಕೋಟಿ 94 ಲಕ್ಷ ರೂಪಾಯಿ, ಯಲಹಂಕದಲ್ಲಿರುವ ಪೊಲೀಸ್ ಇಲಾಖೆಯ ಸಿಎಆರ್ ಆಸ್ತಿಯಿಂದ 6 ಕೋಟಿ 81 ಲಕ್ಷ ರೂಪಾಯಿ ಸೇವಾ ಶುಲ್ಕ ಪಾಲಿಕೆಗೆ ಕಟ್ಟಬೇಕಿದೆ. ಬೆಂಗಳೂರು ಜಲಮಂಡಳಿ ಬರೋಬ್ಬರಿ 4 ಕೋಟಿ 75 ಲಕ್ಷ ರೂಪಾಯಿ ಪಾಲಿಕೆಗೆ ಕೊಡಬೇಕು.

ಕೇಂದ್ರ ಅಬಕಾರಿ ಇಲಾಖೆಯ ಕ್ವಾಟ್ರಸ್ ನಿಂದ 48 ಲಕ್ಷ ರೂಪಾಯಿ, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ನ್ಯಾಷನಲ್ ಏರೊನಾಟಿಕಲ್ ಲಿಮಿಟೆಡ್ ನಿಂದ 3 ಲಕ್ಷ 36 ಸಾವಿರ, ಚೊಕ್ಕಸಂದ್ರದ ಇಸ್ರೋ ಸಂಸ್ಥೆಯಿಂದ 3 ಲಕ್ಷದ 29 ಸಾವಿರ ರೂಪಾಯಿ ಸೇವಾ ಶುಲ್ಕ ಪಾಲಿಕೆಗೆ ಬಾಕಿ ಬರಬೇಕಿದೆ.

ಜನಕ್ಕೆ ಕಾನೂನನ್ನು ಪಾಲನೆ ಮಾಡಬೇಕು ಅನ್ನೋ ಸರ್ಕಾರಿ ಸಂಸ್ಥೆಗಳೇ ಹೀಗೆ ಮಾಡಿದರೆ ಹೇಗೆ? ಪಾಲಿಕೆ ವ್ಯಾಪ್ತಿಯಲ್ಲಿನ 544 ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು 1995-96ನೇ ಇಸವಿಯಿಂದ 2018-19ನೇ ಸಾಲಿನ ತನಕ ಬರೋಬ್ಬರಿ 106 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಪಾಲಿಕೆ ಅಭಿವೃದ್ಧಿಪಡಿಸಿದ ರಸ್ತೆ, ಲೈಟು, ಕಸ ನಿರ್ವಹಣೆಯಂತಹ ಮೂಲಭೂತ ಸೌಕರ್ಯವನ್ನು ಬಳಸಿಕೊಂಡ ಸಂಸ್ಥೆಗಳು ಸೇವಾ ಶುಲ್ಕವನ್ನಾದ್ರೂ ಸರಿಯಾದ ಸಮಯದಲ್ಲಿ ಕಟ್ಟದೆ ಬೇಜವಾಬ್ದಾರಿ ತೋರಿವೆ.

ಬಿಬಿಎಂಪಿ ವ್ಯಾಪ್ತಿಯು ನಗರದ 800 ಚದರ ಕಿಲೋ ಮೀಟರ್ ನಷ್ಟಿದೆ. ಆದ್ರೆ ಅದ್ರಲ್ಲಿ ಶೇಕಡ 40ರಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಸ್ತಿಗಳಿವೆ. ಸರ್ಕಾರಿ ಕಟ್ಟಡ ಮತ್ತು ಆಸ್ತಿ ಆಗಿರೋ ಕಾರಣ ಇವುಗಳಿಗೆ ಪಾಲಿಕೆಯು ಆಸ್ತಿ ತೆರಿಗೆಯಿಂದ ಕೆಎಂಸಿ ಕಾಯ್ದೆ ಸೆಕ್ಷನ್ 110ರ ಪ್ರಕಾರ ವಿನಾಯಿತಿ ನೀಡಿದೆ. ಆದ್ರೆ ಇಲಾಖೆ ಅಥವಾ ಸಂಸ್ಥೆಗಳು ಆಸ್ತಿ ತೆರಿಗೆ ಮೌಲ್ಯ ಮಾಪನದ ಶೇಕಡ 25ರಷ್ಟು ಸೇವಾ ಶುಲ್ಕ ಕಟ್ಟಬೇಕು. ಆದ್ರೆ ಸರಿಯಾಗಿ ಶುಲ್ಕ ಪಾವತಿಸುತ್ತಿಲ್ಲ. ಇನ್ಮುಂದೆ ರಕ್ಷಣಾ ಇಲಾಖೆ ಹಾಗೂ ರೈಲ್ವೆ ಇಲಾಖೆಯಿಂದಲೂ ಸೇವಾ ಶುಲ್ಕ ವಸೂಲಿ ಮಾಡ್ತೀವಿ ಅಂತಿದ್ದಾರೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್.

ಆದ್ರೆ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ ನೀಡಿರೋ ಮಾಹಿತಿ ತಪ್ಪಿದ್ದು, ವಾರ್ಷಿಕ 600 ಕೋಟಿ ರೂಪಾಯಿ ಪಾಲಿಕೆಗೆ ಬರಬೇಕಿದ್ದು, ಹಲವು ಸಂಸ್ಥೆಗಳು ಶುಲ್ಕ ಕಟ್ಟದೆ ರೂಲ್ಸ್ ಬ್ರೇಕ್ ಮಾಡಿದೆ ಅಂತ ಆರೋಪಿಸಿದ್ದಾರೆ. ಅಲ್ಲದೆ ಸ್ಕೂಲ್, ಕಾಲೇಜು, ಟ್ರಸ್ಟ್‌ ಗಳಿಂದಲೂ ಸೇವಾ ಶುಲ್ಕ ವಸೂಲಿ ಮಾಡಿದ್ರೆ ಅವುಗಳಿಂದಲೇ ಪಾಲಿಕೆಗೆ ಕನಿಷ್ಠ 200 ರಿಂದ 300 ಕೋಟಿ ರೂಪಾಯಿ ಆದಾಯ ಬರುತ್ತೆ. ಹೀಗಾಗಿ ಅವರಿಂದಲೂ ಸೇವಾ ಶುಲ್ಕ ವಸೂಲಿ ಮಾಡ್ಬೇಕು ಅಂತ ಪಾಲಿಕೆ ಆಡಳಿತವನ್ನು ಆಗ್ರಹಿಸಿದ್ದಾರೆ.

ಸಾಮಾನ್ಯ ಜನರು ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲಿಲ್ಲ ಅಂದ್ರೆ ನೋಟಿಸ್, ವಾರೆಂಟ್, ಚರಾಸ್ತಿ ಜಪ್ತಿ ಮಾಡ್ತೀನಿ ಅನ್ನೋ ಪಾಲಿಕೆ ಸರ್ಕಾರಿ ಆಸ್ತಿ, ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಂದಲೂ ಸೇವಾಶುಲ್ಕ ಕಲೆಕ್ಟ್ ಮಾಡಿದ್ರೆ ವರ್ಷಕ್ಕೆ ಕಡಿಮೆ ಅಂದ್ರೂ 900 ಕೋಟಿ ಪಾಲಿಕೆಗೆ ಆದಾಯ ರೂಪದಲ್ಲಿ ಬರುತ್ತೆ ಅಂತಿದೆ ಬಿಜೆಪಿ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
First published: February 21, 2019, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading