ಹುಬ್ಬಳ್ಳಿ: ಮಾರ್ಚ್ 9ರಂದು ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿರುವ ಕಾಂಗ್ರೆಸ್ (Congress) ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಿಡಿಕಾರಿದ್ದಾರೆ. ಸಿಎಂ ಆಗಿದ್ದಾಗ ಸಿದ್ದರಾಮಯ್ಯ (Siddaramaiah) ಸಚಿವರಿಗೇ ಟಾರ್ಗೆಟ್ ಫಿಕ್ಸ್ ಮಾಡಿದ್ದರು. ನಮ್ಮ ಭ್ರಷ್ಟಾಚಾರದ (Corruption) ವಿರುದ್ಧ ಬಂದ್ ಮಾಡೋಕೆ ಇವರಿಗೇನು ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ನವರ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ. ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು ಎಂದು ಸಿಎಂ ತಿರುಗೇಟು ನೀಡಿದರು.
ಕಾಂಗ್ರೆಸ್ನವರು ದಿಂಬು ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಎಷ್ಟು ಟಾರ್ಗೆಟ್ ನೀಡಿದ್ದರು ಅನ್ನೋದನ್ನು ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪ ಅವರಿಗೆ ಕೇಳಬೇಕು. ಭ್ರಷ್ಟಾಚಾರದ ಕೂಪದಲ್ಲಿರುವವರು ಆಪಾದನೆ ಮಾಡಿದ್ರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಕರ್ಮಕಾಂಡ ಒಂದಾ? ಎರಡಾ?
ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ? ಎರಡಾ? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ, ಜನರೇ ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಕರೆ ನೀಡಿರುವ ಬಂದ್ಗೆ ತಿರುಗೇಟು ನೀಡಿದರು.
ಹೆಬ್ಬಾಳ್ಕರ್ ಒಣ ಪ್ರತಿಷ್ಠೆ
ಇದೇ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಮತ್ತೊಮ್ಮೆ ಶಿವಾಜಿ ಮೂರ್ತಿ ಉದ್ಘಾಟನೆಗೆ ಕಿಡಿಕಾರಿದ ಸಿಎಂ ಬೊಮ್ಮಾಯಿ, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಹಣ ಖರ್ಚು ಮಾಡಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಿ ಉದ್ಘಾಟನೆ ಮಾಡಿದೆ. ಉದ್ಘಾಟನೆ ಮಾಡಿದ ಬಳಿಕ ಈ ರೀತಿ ಮಾಡೋದು ಸರಿಯಲ್ಲ. ಶಾಸಕರು ತಮ್ಮ ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಈಗ ಏನ್ ಹೇಳ್ತಾರೆ?
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್ಕೆಪಿ ಹೊಣೆ ಹೊತ್ತ ವಿಚಾರಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏನು ಹೇಳ್ತಾರೆ ಕೇಳಬೇಕು. ಸ್ಫೋಟ ನಡೆದಾಗ ಬರೀ ಸಾದಾ ಕುಕ್ಕರ್ ಅಂತಾ ಡಿಕ ಶಿವಕುಮಾರ್ ಹೇಳಿದರು. ಬಿಜೆಪಿಯವರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದ್ದರು. ಈಗ ಈ ವಿಚಾರಕ್ಕೆ ಡಿಕೆಶಿ ಏನು ಹೇಳ್ತಾರೆ ಪ್ರಶ್ನೆ ಕೇಳಿ ಎಂದರು.
ವಚನಾನಂದ ಸ್ವಾಮೀಜಿ ಹೇಳಿಕೆ
ಇಂದು ಸಿಎಂ ಭೇಟಿಗಾಗಿ ಹುಬ್ಬಳ್ಳಿಗೆ ಆಗಮಿಸಿದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿದರು. ನಿರಂತರವಾಗಿ ಸಿಎಂ ಅವರನ್ನ ಭೇಟಿಯಾಗುತ್ತಿರುತ್ತೇನೆ ಇದೇನು ಹೊಸದಲ್ಲ. ಶಿಗ್ಗಾವಿಯಲ್ಲಿ ಇದೇ ಮಾರ್ಚ್ 19 ರಂದು ಕಲ್ಯಾಣಮಂಟಪ ಉದ್ಘಾಟನೆ ಬಗ್ಗೆ ಚರ್ಚೆ ಮಾಡೋಕೆ ಬಂದಿದ್ದೆ ಎಂದು ಹೇಳಿದರು.
ಪಂಚಮಸಾಲಿ 2 ಎ ಮೀಸಲಾತಿಗಾಗಿ ಹೋರಾಟ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವಂತೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಸಿಎಂ ಕೂಡ ಈ ವಿಚಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಭವಿಷ್ಯ ನುಡಿದರು.
ಸಾಮಾಜಿಕ ನ್ಯಾಯ ಸಿಗಬೇಕು
ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯದಿಂದ ಹೋರಾಟಕ್ಕೆ ಯಾವುದೇ ಹಿನ್ನಡೆ ಇಲ್ಲ. ಅದು ಅವರವರ ಕಲ್ಪನೆ ಅಷ್ಟೇ. ಅದರ ಬಗ್ಗೆ ಹೆಚ್ಚಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಸಾಮಾಜಿಕ ನ್ಯಾಯ ಸಿಗಬೇಕು ಅನ್ನೋದು ನಮ್ಮ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ: Belagavi Politics: ಹೆಬ್ಬಾಳ್ಕರ್ ಆಯ್ತು, ಈಗ ಜೊಲ್ಲೆ; ಬಿಜೆಪಿಗೆ ಬಿಸಿತುಪ್ಪವಾದ್ರಾ ರಮೇಶ್ ಜಾರಕಿಹೊಳಿ?
ನಮ್ಮ ನಂಬಿಕೆ ಕಾನೂನಾತ್ಮಕ ಹಾಗೂ ಭಾವನಾತ್ಮಕವಾಗಿದೆ. ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ತೊಡಕುಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಸರ್ಕಾರ ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ