ಯಾದಗಿರಿ: ನಾಳೆ ಯಾದಗಿರಿಯಲ್ಲಿ (Yadagiri) ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Prajadhwani Yatra) ನಡೆಯಲಿದ್ದು, ಈ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, (Siddaramaiah) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಚಾರ, ಅಧಿಕಾರ ದುರ್ಬಳಕೆ, ಜನವಿರೋಧಿ ನಡೆಗಳ ಕುರಿತು ಕಾಂಗ್ರೆಸ್ ನಾಯಕರು ಯಾದಗಿರಿಯಲ್ಲಿ ಅಬ್ಬರಿಸಲಿದ್ದು, ಆ ಮೂಲಕ ಜನತೆಗೆ ಜಾಗೃತಿ ಮೂಡಿಸಲಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಾಳಯ ಆಕ್ಟೀವ್ ಆಗಿದ್ದು ಜನರನ್ನು ಓಲೈಸಲು ಅಧಿಕೃತವಾಗಿ ಫೀಲ್ಡ್‌ಗಿಳಿದಿದ್ದಾರೆ.
ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಯಾದಗಿರಿಗೆ ಆಗಮಿಸಲಿದ್ದು, ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಜಿಲ್ಲೆಗೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಮುನ್ನವೇ ಅಭಿಮಾನಿಗಳು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಕುರಿತ ಕರಪತ್ರ ಹಂಚಿಕೆ ಮಾಡಿದ್ದಾರೆ.
'ಸಿದ್ದರಾಮಯ್ಯ ಒಬ್ಬ ನಾಮ ಹಲವು'
ಕಲ್ಯಾಣ ಕರ್ನಾಟಕ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ವತಿಯಿಂದ ಯಾದಗಿರಿ ನಗರದಲ್ಲಿ ಕರಪತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ‘ದೇವರು ಒಬ್ಬ ನಾಮ ಹಲವು - ಶ್ರೀ ಸಿದ್ದರಾಮಯ್ಯ ಒಬ್ಬ ನಾಮ ಹಲವು’ ಘೋಷಣೆಯೊಂದಿಗೆ ಕರಪತ್ರಗಳನ್ನು ಹಂಚಲಾಗಿದೆ. ಈ ಕರಪತ್ರದಲ್ಲಿ ಅನ್ನರಾಮಯ್ಯ, ಶಾಶ್ವತ ಮುಖ್ಯಮಂತ್ರಿ ರಾಮಯ್ಯ, ಕಲಿಯುಗದ ರಾಮಯ್ಯ ಸೇರಿದಂತೆ ಹಲವು ಘೋಷಣೆಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯರನ್ನು ಹೊಗಳಲಾಗಿದೆ.
ನಗರದ ಹಳೆಯ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಣೆ ಮಾಡಲಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಡಲಾಗಿದ್ದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾರ್ಯಕರ್ತರು ಪ್ಲಾನ್ ರೂಪಿಸಿದ್ದಾರೆ. ಜೊತೆಗೆ ಬಸ್ ನಿಲ್ದಾಣ ಸೇರಿದಂತೆ ಮೊದಲಾದ ಕಡೆ ಗೋಡೆಗಳ ಮೇಲೂ ಕರಪತ್ರಗಳನ್ನು ಅಂಟಿಸಲಾಗಿದೆ.
ಸಿದ್ದರಾಮಯ್ಯಗೆ ಬಿಜೆಪಿ ನಾಯಕನ ಆಫರ್
ಯಾದಗಿರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಇತ್ತೀಚೆಗೆ ತಾನು ಕೋಲಾರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರೂ, ಅಲ್ಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗದು. ಯಾಕೆಂದರೆ ಹೈಕಮಾಂಡ್ ಎಲ್ಲಿ ಸೀಟ್ ಕೊಡುತ್ತೋ ಅಲ್ಲಿ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ. ಇದರ ಜೊತೆಗೆ ಸ್ವಪಕ್ಷದ ಮುಖಂಡರು, ಶಾಸಕರು ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರಕ್ಕೆ ಬಂದರೆ ನಾವು ಕ್ಷೇತ್ರ ಬಿಟ್ಟು ಕೊಡುತ್ತೇವೆ ಅಂತಾನೂ ಹೇಳುತ್ತಾ ಬಂದಿದ್ದಾರೆ. ಇದೆಲ್ಲ ಒಂದು ಕಡೆ ಆದರೆ ಇದೀಗ ಅಚ್ಚರಿ ಎಂಬಂತೆ ಬಿಜೆಪಿ ಮುಖಂಡರೊಬ್ಬರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: Siddaramaiah: ರಿವೀಲ್ ಆಯ್ತು ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಹಿಂದಿನ ಸೀಕ್ರೆಟ್! ವರ್ಕ್ ಆಗುತ್ತಾ &ನಾಯಕರ ಸಖತ್ ಪ್ಲಾನ್?
ಯಾದಗಿರಿ ಜಿಲ್ಲೆಯ ಬಿಜೆಪಿ ಮುಖಂಡ ಚಂದ್ರಯ್ಯ ನಾಗರಾಳ ಅವರು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡಿದ್ದು, ಸಿದ್ದರಾಮಯ್ಯ ಅವರು ಯಾದಗಿರಿ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ. ಅವರು ಯಾದಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನನ್ನ ಆಸ್ತಿ ಮಾರಾಟ ಮಾಡಿ ನಾನೇ ಅವರಿಗೆ ಒಂದು ಕೋಟಿ ರೂಪಾಯಿ ಹಣ ಕೊಡುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದೀಗ ಬಿಜೆಪಿ ಮುಖಂಡನ ಈ ಹೇಳಿಕೆ ಅಚ್ಚರಿ ಮೂಡಿಸಿದ್ದು, ಯಾದಗಿರಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.
'ಸಿದ್ದರಾಮಯ್ಯಗೆ ಹಣ ಕೊಳ್ಳೆ ಹೊಡೆದಿಲ್ಲ'
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿರುವ ಬಿಜೆಪಿ ಮುಖಂಡ ಚಂದ್ರಯ್ಯ ನಾಗರಾಳ, ನನ್ನ 7 ಎಕರೆ ಜಮೀನು ಮಾರಾಟ ಮಾಡಿ ಸಿದ್ದರಾಮಯ್ಯ ಅವರಿಗೆ ಹಣ ಗಿಫ್ಟ್ ಕೊಡುತ್ತೇನೆ. ಸಿದ್ದರಾಮಯ್ಯ ಅವರು ಹಣ ಕೊಳ್ಳೆ ಹೊಡೆದಿಲ್ಲ. ಅವರ ಹತ್ತಿರ ಹಣವಿಲ್ಲ. ಹೀಗಾಗಿ ಚುನಾವಣೆ ಖರ್ಚಿಗಾಗಿ ಹಣ ನೀಡುತ್ತೇನೆ. ಯಾದಗಿರಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ. ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತೇನೆಂದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿಗೆ ತೆರಳಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾದಗಿರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ 60 ಸಾವಿರ ಮತಗಳಿಂದ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ