ಉತ್ತರ ಕನ್ನಡ: ಮಳೆಗಾಲ (Rainy Season) ಪ್ರಾರಂಭವಾಲು ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ (Rain) ಸುರಿಯುವ ಮುನ್ನವೇ ಭೂ ಕುಸಿತದ (Land Slides) ಆತಂಕ ಇನ್ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಭೂ ಕುಸಿತದಿಂದ ಸಾಕಷ್ಟು ಹಾನಿ ಆಗಿದ್ದು ಭೂ ಕುಸಿತಕ್ಕೆ ಕಾರಣ ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತ GSI ನೇಮಕ ಮಾಡಿತ್ತು. ಜಿಲ್ಲೆಯ ಹಲವೆಡೆ ಪರಿಶೀಲನೆ ಮಾಡಿರುವ ಈ ತಂಡ, ಈ ಬಾರಿ ಐದು ಕಡೆ ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ (Report) ನೀಡಿದೆ. ಜತೆಗೆ ಭೂ ಕುಸಿತಕ್ಕೆ ಅತಿಯಾದ ಮಳೆಯೇ ಕಾರಣ ಎನ್ನಲಾಗಿದೆ. ಮತ್ತೆ ಭೂ ಕುಸಿತದ ಸುದ್ದಿ ಕೇಳಿ ಉತ್ತರ ಕನ್ನಡ ಜಿಲ್ಲೆಯ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಎಲ್ಲೆಲ್ಲಿ ಭೂಕುಸಿತದ ಎಚ್ಚರಿಕೆ?
ಕಳೆದ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಭೂ ಕುಸಿತದಿಂದ ಸಾಕಷ್ಟು ಹಾನಿ ಆಗಿತ್ತು. ಇದಕ್ಕೆ ಅತಿಯದ ಮಳೆಯೇ ಕಾರಣ ಎಂಬ ವರದಿ GSI ನಿಂದ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಮತ್ತು ಕಳಚೆ, ಜೋಯಿಡಾದ ಅಣಶಿ ಘಾಟ್, ಶಿರಸಿ ತಾಲೂಕಿನ ಜಾಜಿಗುಡ್ಡ, ಸಿದ್ದಾಪುರ ತಾಲೂಕಿನ ವಿವೇಕಾನಂದ ನಗರ, ಕಾನಸೂರು ಭಾಗದಲ್ಲಿ ಈ ಮಳೆಯಲ್ಲಿ ಭೂ ಕುಸಿತ ಸಂಭವಿಸುವ ಎಚ್ಚರಿಕೆ ನೀಡಿದೆ ಅಧ್ಯಯನ ತಂಡ.
ಮಳೆಯಿಂದ ತತ್ತರಿಸುತ್ತಿರುವ ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯ ಕಳೆದ ಮೂರು ವರ್ಷದಿಂದ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಮಳೆಗಾಲದ ಆರಂಭದಲ್ಲೆ ಕುಮಟಾ, ಮುಂಡಗೋಡು, ಯಲ್ಲಾಪುರ ಭಾಗದಲ್ಲಿ ಮನೆ ಹಾನಿ, ವಿದ್ಯುತ್ ಕಂಬಗಳು ಧರೆಗುರುಳಿದೆ. ಮುಂಡಗೋಡು, ಕುಮಟಾ ಭಾಗದಲ್ಲಿ ಮಳೆಯಿಂದ ಮೂವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಇದನ್ನೂ ಓದಿ: Heavy Rain: ಕೊಡಗಿನಲ್ಲಿ ಭಾರೀ ಮಳೆ! ಮನೆಗಳಿಗೆ ನೀರು, 15 ಡಿಗ್ರಿಗೆ ಇಳಿದ ತಾಪಮಾನ
ಈ ಭಾಗದಲ್ಲಿ ಭೂ ಕುಸಿತದ ಭೀತಿ
ಕಳೆದ ವರ್ಷ ಯಲ್ಲಾಪುರದ ಕಳಚೆ, ಜೋಯಿಡಾ ಭಾಗದ ಅಣಶಿ ಘಾಟ್, ಕೈಗಾ, ಕದ್ರಾ, ಕೊಡಸಳ್ಳಿ, ಶಿರಸಿ ತಾಲೂಕಿನ ಜಾಜಿಗುಡ್ಡ, ಸಿದ್ದಾಪುರ ತಾಲೂಕಿನ ವಿವೇಕಾನಂದ ನಗರ, ಕಾನಸೂರು ಭಾಗದಲ್ಲಿ ದೊಡ್ಡ ಮಟ್ಟದ ಭೂಕುಸಿತವಾಗಿತ್ತು. ಇದರಿಂದ ತೋಟ, ಮನೆಗಳು, ರಸ್ತೆಗಳು ಸಂಪೂರ್ಣ ಹಾನಿಯಾಗಿ ಕೋಟ್ಯಾಂತರ ರೂ ನಷ್ಟವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಐದು ಜನರ ತಂಡವನ್ನು ಅಧ್ಯಯನಕ್ಕೆ ಕಳುಹಿಸಿತ್ತು.
ವರದಿ ಸಲ್ಲಿಸಿದ ಅಧ್ಯಯನ ತಂಡ
ಇದೀಗ ಈ ಅಧ್ಯಯನ ತಂಡ ತನ್ನ ವರದಿಯನ್ನ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಇನ್ನು ಈಬಾರಿ ಮಳೆ ಯಿಂದ ಮತ್ತೆ ಗುಡ್ಡ ಕುಸಿಯುವ ಎಚ್ಚರಿಕೆ ನೀಡಿದ್ದಾರೆ. ಭೂ ಕುಸಿತವಾದ ಅಣಶಿ ಭಾಗದಲ್ಲಿ ಕೈಗಾ ಅಣುಸ್ಥಾವರ ಹಾಗೂ ಕೊಡಸಳ್ಳಿ ಡ್ಯಾಮ್ ಗಳು ಇದ್ದು ಸುತ್ತಮುತ್ತಲೂ ಗುಡ್ಡ ನಿರಂತರ ಕುಸಿಯುತ್ತಿದೆ.
ಮತ್ತಷ್ಟು ಆತಂಕ ಮೂಡಿಸಿದ ರಿಪೋರ್ಟ್
ಇನ್ನು ಯಲ್ಲಾಪುರ ಭಾಗದ ಕಳೆಚೆಯಲ್ಲಿ ಚಿಕ್ಕ ಹಳ್ಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು ಅಲ್ಲಿಯು ಸಹ ನಿರಂತರ ಕುಸಿತವಾಗುತ್ತಲಿದೆ. ಹೀಗಾಗಿ ಇದೀಗ GSI ಅಧ್ಯಯನ ತಂಡದ ವರದಿ ಈ ಭಾಗದ ಜನರಲ್ಲಿ ಮತ್ತಷ್ಟು ಭಯ ಮೂಡಿಸಿದೆ.
ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಜಿಲ್ಲಾಡಳಿತ
ಇದೀಗ ಅವಧಿ ಮುಂಚಿತವಾಗಿ ಮಳೆ ಪ್ರಾರಂಭವಾಗಿದ್ದರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಪ್ರವಾಹದಿಂದ ತೊಂದರೆಗೊಳಗಾಗುವ ಪ್ರದೇಶದಲ್ಲಿ ರೆಸ್ಕ್ಯೂ ಟೀಮ್ ನನ್ನು ಸಜ್ಜುಗೊಳಿಸಿದ್ದು ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆಗೆ ಬೋಟ್ ಗಳನ್ನು ಸಿದ್ದಗೊಳಿಸಿದೆ.
ಇದನ್ನೂ ಓದಿ: Savandurga: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾವನದುರ್ಗ, ಆದರೆ ಇಲ್ಲಿ ಭದ್ರತೆ ಬೇಕಿದೆ ಈಗ!
ಈ ಭಾರಿ ಪ್ರವಾಹ ಎದುರಾದಲ್ಲಿ ಮತ್ತೆ ಭೂ ಕುಸಿತ ಸಾಧ್ಯತೆ ಇದೆ ಎಂದು ಅದ್ಯಯನ ತಂಡ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದು ಉತ್ತರ ಕನ್ನಡ ಜಿಲ್ಲಾಡಳಿತ ಕೂಡಾ ಯುದ್ದೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ