ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗ್ಗೆ ಏಳು ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಲು ಮತಗಟ್ಟೆಯನ್ನು ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ಶೃಂಗರಿಸಿದ್ದು, ಹಲವು ಭಾಗಗಳಲ್ಲಿ ಮತಗಟ್ಟೆ ಜನರನ್ನು ಆಕರ್ಷಣೆ ಮಾಡುತ್ತಿದೆ.
ಇತ್ತ ಶಾಂತಿನಗರದಲ್ಲಿ ಕೂಡ ಮತದಾನಕ್ಕಾಗಿ ಮತಗಟ್ಟೆಯನ್ನು ಶೃಂಗಾರಗೊಳಿಸಲಾಗಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 117 ರ ಮತಗಟ್ಟೆಯನ್ನು ಸಾಂಸ್ಕೃತಿಕ ಥೀಮ್ ಅಡಿಯಲ್ಲಿ ಮಾದರಿ ಮತಗಟ್ಟೆಯಾಗಿ ಸಿದ್ಧಗೊಳಿಸಲಾಗಿದ್ದು, ಮತದಾರರು ಮತಗಟ್ಟೆಯ ಒಳಗೆ ಪ್ರವೇಶ ಮಾಡುವ ಜಾಗದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಇದರ ಜೊತೆಗೆ ಚಪ್ಪರ ಹಾಕಿ ಹೂವಿನಿಂದ ಅಲಂಕೃತಗೊಳಿಸಲಾಗಿದ್ದು, ಮಾದರಿ ಮತಗಟ್ಟೆ ಜನರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭ
ಇನ್ನು ಮತಗಟ್ಟೆಯ ಒಳಗೆ ಕೂಡ ಹೂವಿನಿಂದ ಅಲಂಕಾರ ಮಾಡಲಾಗಿದ್ದು, ಮತ ಚಲಾಯಿಸುವ ಕೋಣೆಯ ಮಧ್ಯೆ ಮಣ್ಣಿನ ಮಡಕೆಯನ್ನು ಅಲಂಕರಿಸಿ ಅದರ ಮಧ್ಯೆ ಹೂವುಗಳನ್ನು ಇಟ್ಟು ಕಲಶದಂತೆ ಸಿಂಗರಿಸಲಾಗಿದೆ. ಮತ ಚಲಾಯಿಸುವ ಜಾಗದಲ್ಲಿಯೂ ಕೂಡ ಹೂವನ್ನು ಇಟ್ಟು ಅಲಂಕಾರ ಮಾಡಲಾಗಿದೆ. ಒಟ್ನಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 117 ರ ಮತಗಟ್ಟೆ ನಿಜಕ್ಕೂ ಆಕರ್ಷಣೀಯವಾಗಿದೆ.
ಹಿರಿಯ ನಾಗರಿಕರ ಮಾದರಿ ನಡೆ
ಕೊಪ್ಪಳ: ಕೊಪ್ಪಳದಲ್ಲಿ ವಯೋವೃದ್ಧರು ಮತದಾನ ಆರಂಭವಾಗುವ ಮುನ್ನವೇ ಮುಂಜಾನೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ವಯೋವೃದ್ಧರು ಮತದಾನ ಮಾಡಲು ಉತ್ಸಾಹ ತೋರಿಸಿದ್ದು, ವೋಟ್ ಮಾಡೋದನ್ನು ತಪ್ಪಿಸಲು ಕಾರಣ ಹುಡುಕುವ ಯುವಜನರನ್ನು ನಾಚುವಂತೆ ಮಾಡಿದ್ದಾರೆ. ಗಂಗಾವತಿ ನಗರದ ಮತಗಟ್ಟೆಯಲ್ಲಿ ಹತ್ತಾರು ಮಂದಿ ವಯೋ ವೃದ್ಧರು ಸಮಯಕ್ಕೆ ಮೊದಲೇ ಮತ ಚಲಾಯಿಸಲು ಬಂದು ಪಿಂಕ್ ಬೂತ್‌ನಲ್ಲಿ ಸಾಲಿನಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: Ramanagara Elections: ಹಕ್ಕು ಚಲಾಯಿಸಲು ಸಜ್ಜಾದ ರಾಮನಗರ ಜಿಲ್ಲೆಯ ಘಟಾನುಘಟಿ ನಾಯಕರು!
ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತದೆ ಅನ್ನೋದು ಗೊತ್ತಿದ್ದರೂ ಕೂಡ 5.45ಕ್ಕೆ ಬಂದು ಪಿಂಕ್ ಬೂತ್‌ನಲ್ಲಿ ಸಾಲಿನಲ್ಲಿ ನಿಂತ ವಯೋವೃದ್ಧರು ಇತರರಿಗೆ ಮಾದರಿಯಾದರು. ಏಳು ಗಂಟೆ ನಂತರ ಸಿಕ್ಕಾಪಟ್ಟೆ ಜನ ಬಂದು ತುಂಬಾ ಹೊತ್ತು ಬಿಸಿಲಿನಲ್ಲಿ ಕಾಯಬೇಕಾಗುತ್ತದೆ ಅನ್ನೋದನ್ನು ಅರಿತ ಹಿರಿಯ ಜೀವಗಳು ಎಲ್ಲರಿಗಿಂತ ಮೊದಲು ನಾವೇ ಹಕ್ಕು ಚಲಾಯಿಸಿ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ