ಚಾಮರಾಜನಗರ (ಡಿ. 15) : ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 77 ಗ್ರಾಮಪಂಚಾಯ್ತಿಗಳಿಗೆ ಚುನಾವಣೆ ನಡೆಯುತ್ತಿದ್ದು 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 3079 ಮಂದಿ ಕಣದಲ್ಲಿ ಉಳಿದಿದ್ದಾರೆ. ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಗ್ರಾಮಪಂಚಾಯ್ತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ತಾಲೂಕಿನ 43 ಗ್ರಾಮ ಪಂಚಾಯ್ತಿಗಳ 742 ಸ್ಥಾನಗಳಿಗೆ 2143 ಮಂದಿ ಸ್ಪರ್ಧಿಸಿದ್ದಾರೆ. ಈ ಪೈಕಿ 218 ಮಂದಿ ನಾಮಪತ್ರ ಹಿಂಪಡೆದಿದ್ದು 49 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 693 ಸ್ಥಾನಗಳಿಗೆ 1876 ಮಂದಿ ಕಣದಲ್ಲಿ ಉಳಿದಿದ್ದಾರೆ. ಗುಂಡ್ಲುಪೇಟೆ ತಾಲೋಕಿನ 34 ಗ್ರಾಮಪಂಚಾಯ್ತಿಗಳ 499 ಸ್ಥಾನಗಳಿಗೆ 1409 ಮಂದಿ ಸ್ಪರ್ಧಿಸಿದ್ದಾರೆ. 193 ಮಂದಿ ನಾಮಪತ್ರ ವಾಪಸ್ ಪಡೆದಿದ್ದು 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 436 ಸ್ಥಾನಗಳಿಗೆ 1203 ಮಂದಿ ಕಣದಲ್ಲಿ ಉಳಿದಿದ್ದಾರೆ
ಡಿಸೆಂಬರ್ 22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಈ ಬಾರಿ ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಶಾಲಾಗದ ಶಾಯಿ ಹಚ್ಚಲಾಗವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ
ಈ ಚುನಾವಣೆ ಪಕ್ಷರಹಿತವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಪ್ರಚಾರ ಮಾಡಬಾರದು. ಒಂದು ವೇಳೆ ಅಂತಹ ಪ್ರಚಾರ ನಡೆಸಿದಲ್ಲಿ ಅಭ್ಯರ್ಥಿಗಳು ಮುದ್ರಿಸಿರುವ ಕರಪತ್ರ, ಪೋಸ್ಟರ್ ಅಥವಾ ಇನ್ಯಾವುದೇ ರೀತಿಯ ಪ್ರಚಾರ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ
ಇದನ್ನು ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದ ಏಕೈಕ ಕನ್ನಡತಿ
ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ಮತದಾರರ ಮೇಲೆ ಪರಿಣಾಮ ಬೀರವಂತಹ ಯಾವುದೇ ಘೋಷಣೆ , ಹೇಳಿಕೆ ಅಥವಾ ಆಶ್ವಾಸನೆ ನೀಡುವಂತಿಲ್ಲ. ರಾಜಕೀಯ ಪಕ್ಷಗಳು ಸಭೆ ಸಮಾರಂಭ ಏರ್ಪಡಿಸಿ ವೇದಿಕೆಯ ಮೇಲದ ಪಕ್ಷದ ಬಾವುಟ, ಬ್ಯಾನರ್ ಗಳನ್ನು ಬಳಸುವಂತಿಲ್ಲ. ಅಭ್ಯರ್ಥಿಗಳು ಗರಿಷ್ಠ 5 ಮಂದಿ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದು. ಅಭ್ಯರ್ಥಿಗಳು ಹಾಗು ಅವರ ಬೆಂಬಲಿಗರು ಫೇಸ್ ಮಾಸ್ಕ್ ಧರಿಸಬೇಕು, ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಹೀಗೆ ಹಂಚುವ ಸಂದರ್ಭದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಿರಬೇಕು, ಹ್ಯಾಂಡ್ ಸಾನಿಟೈಸರ್ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗಲೇ 56 ಪ್ರಕರಣ ದಾಖಲಿಸಲಾಗಿದೆ, ಕೋವಿಡ್-19 ನಿಯಮ ಉಲ್ಲಂಘನೆಗೆ ( ಮಾಸ್ಕ್ ಧರಿಸದೇ ಇರುವುದಕ್ಕೆ 750 ಪ್ರಕರಣ ದಾಖಲಿಸಿ 73,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಗ್ರಾಮ ಪಂಚಾಯತಿ ಸ್ಥಾನಗಳನ್ನು ಹರಾಜು ಮಾಡುವ ಬಗ್ಗೆ ದಾಖಲೆಗಳ ಸಮೇತ ಅಧಿಕೃತ ದುರು ನೀಡಿದಲ್ಲಿ ಕ್ರಮವಹಿಸಲಾಗುವುದು. ಯಳಂದೂರು ತಾಲೂಕು ಬನ್ನಿಸಾರಿಗೆಯಲ್ಲಿ ಹರಾಜು ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿ ಹಿನ್ನೆಯಲ್ಲಿ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಆದರೆ ಅಲ್ಲಿ ಹರಾಜು ನಡೆದಿರುವುದಕ್ಕೆ ಯಾವುದೇ ರೀತಿಯ ಪುರಾವೆಗಳು ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
(ವರದಿ: ಎಸ್.ಎಂ.ನಂದೀಶ್ )
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ