ಹೊಸಪೇಟೆ ಅಪಘಾತ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಘಟನೆಯಲ್ಲಿ ಆರ್​ ಅಶೋಕ್​ ಮಗ ಶರತ್​ ಇದ್ದರು; ಪ್ರತ್ಯಕ್ಷದರ್ಶಿ

ಬಳ್ಳಾರಿ ಪೊಲೀಸರು ಹೇಳುವ ಪ್ರಕಾರ ಆರ್​ ಅಶೋಕ್​ ಮಗ ಶರತ್​ ಕಾರು ಓಡಿಸುತ್ತಿರಲಿಲ್ಲ, ಬದಲಿಗೆ ರಾಹುಲ್​ ಎಂಬಾತ ಅಪಘಾತವಾದ ಸಮಯದಲ್ಲಿ ಗಾಡಿ ಚಲಿಸುತ್ತಿದ್ದ. ಒಂದು ವೇಳೆ ಪೊಲೀಸರು ಹೇಳುತ್ತಿರುವುದೇ ಸತ್ಯವಾದಲ್ಲಿ, ಆರ್​ ಅಶೋಕ್​ ಮಗ ಅಮಾಯಕ ಎಂದಾಗುತ್ತದೆ. ಅಮಯಾಕನೇ ಆಗಿದ್ದಲ್ಲಿ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಂಬುದನ್ನು ಒಪ್ಪಿಕೊಂಡರೇನು ತಪ್ಪು ಎಂಬ ಪ್ರಶ್ನೆ ಮೇಲೇಳುತ್ತದೆ. 

news18-kannada
Updated:February 14, 2020, 1:29 PM IST
ಹೊಸಪೇಟೆ ಅಪಘಾತ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಘಟನೆಯಲ್ಲಿ ಆರ್​ ಅಶೋಕ್​ ಮಗ ಶರತ್​ ಇದ್ದರು; ಪ್ರತ್ಯಕ್ಷದರ್ಶಿ
ಹೊಸಪೇಟೆಯಲ್ಲಿ ಅಪಘಾತವಾದ ಕಾರು
  • Share this:
ಬಳ್ಳಾರಿ: ಹೊಸಪೇಟೆಯಲ್ಲಿ ಫೆಬ್ರವರಿ 10ರಂದು ನಡೆದ ಅಪಘಾತ ಪ್ರಕರಣದಲ್ಲಿ ಆರ್​ ಅಶೋಕ್​ ಮಗ ಶರತ್​ ಇರಲಿಲ್ಲ ಎಂದೇ ಪೊಲೀಸರು ಮತ್ತು ಸಚಿವರು ಬಿಂಬಿಸಿದ್ದರು. ಆದರೆ ಇದೀಗ ಸ್ಫೋಟಕ ಮಾಹಿತಿ ನ್ಯೂಸ್​18ಗೆ ಲಭ್ಯವಾಗಿದ್ದು, ಶರತ್​ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಅಶೋಕ್​, ಘಟನೆಗೂ ತಮ್ಮ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ ಘಟನೆಯ ಸಂದರ್ಭದಲ್ಲಿ ಆರ್​ ಅಶೋಕ್​ ಮಗ ಇದ್ದಿದ್ದು ನಿಜ ಎಂಬುದೀಗ ಸ್ಪಷ್ಟವಾಗಿದೆ. 

ಘಟನೆಯ ನಂತರ ಸರ್ಕಾರಿ ಆಸ್ಪತ್ರೆಗೂ ಮುನ್ನ ಗಾಯಾಳುಗಳನ್ನು ಮೈತ್ರಿ ಎಂಬ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮೈತ್ರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಭಾರತಿ ಬಾಯಿ ಎಂಬುವವರು ನ್ಯೂಸ್​18 ಜತೆ ಮಾತನಾಡಿದ್ದು, ಅಶೋಕ್​ ಮಗ ಶರತ್​ ಆಸ್ಪತ್ರೆಗೆ ಬಂದಿದ್ದರು ಎಂದು ಹೇಳಿದ್ದಾರೆ. ನ್ಯೂಸ್​18 ವರದಿಗಾರ ಶರಣು ಹಂಪಿ ಅವರು ಭಾರತಿ ಬಾಯಿ ಅವರಿಗೆ ಶರತ್​ ಭಾವಚಿತ್ರ ತೋರಿಸಿದ್ದಾರೆ. ಶರತ್​ರನ್ನು ಗುರುತು ಹಿಡಿದ ಭಾರತಿ ಬಾಯಿ, ಶರತ್​ ಕೂಡ ಆಸ್ಪತ್ರೆಗೆ ಗಾಯಾಳುಗಳ ಜತೆ ಬಂದಿದ್ದರು ಎಂದಿದ್ದಾರೆ.

"ಈ ಯುವಕ ಕೂಡ ಆಸ್ಪತ್ರೆಗೆ ಬಂದಿದ್ದ. ತುಂಬಾ ಗಡಿಬಿಡಿಯಲ್ಲಿದ್ದರು. ಸ್ಟ್ರೆಚರ್​ ಕೊಡಿ, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳುತ್ತಿದ್ದರು. ನಂತರ ಗಾಯಾಳುಗಳ ಸ್ಥಿತಿ ತೀರಾ ಶೋಚನೀಯ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದರು," ಎಂದು ಮೈತ್ರಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿರುವ ಭಾರತಿ ಶರತ್​ ಭಾವಿಚಿತ್ರ ನೋಡಿದ ನಂತರ ಘಟನೆಯನ್ನು ವಿವರಿಸಿದ್ದಾರೆ.

ಒಂದು ವೇಳೆ ಭಾರತಿ ಹೇಳುತ್ತಿರುವುದು ನಿಜವೇ ಆದಲ್ಲಿ, ಆರ್​ ಅಶೋಕ್​ ಮಗ ಅಪಘಾತ ಮಾಡಿದ್ದಾರೋ ಇಲ್ಲವೋ, ಆದರೆ ಘಟನೆಯಲ್ಲಿ ಭಾಗಿಯಾಗಿರುವುದಂತೂ ಸತ್ಯವಾಗುತ್ತದೆ. ಇದು ಸತ್ಯವೇ ಆಗಿದ್ದಲ್ಲಿ, ಆರ್​ ಅಶೋಕ್​ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದರಾ ಎಂಬ ಪ್ರಶ್ನೆ ಮತ್ತೆ ಮುನ್ನಲೆಗೆ ಬರುತ್ತದೆ.

ಬಳ್ಳಾರಿ ಪೊಲೀಸರು ಹೇಳುವ ಪ್ರಕಾರ ಆರ್​ ಅಶೋಕ್​ ಮಗ ಶರತ್​ ಕಾರು ಓಡಿಸುತ್ತಿರಲಿಲ್ಲ, ಬದಲಿಗೆ ರಾಹುಲ್​ ಎಂಬಾತ ಅಪಘಾತವಾದ ಸಮಯದಲ್ಲಿ ಗಾಡಿ ಚಲಿಸುತ್ತಿದ್ದ. ಒಂದು ವೇಳೆ ಪೊಲೀಸರು ಹೇಳುತ್ತಿರುವುದೇ ಸತ್ಯವಾದಲ್ಲಿ, ಆರ್​ ಅಶೋಕ್​ ಮಗ ಅಮಾಯಕ ಎಂದಾಗುತ್ತದೆ. ಅಮಯಾಕನೇ ಆಗಿದ್ದಲ್ಲಿ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಂಬುದನ್ನು ಒಪ್ಪಿಕೊಂಡರೇನು ತಪ್ಪು ಎಂಬ ಪ್ರಶ್ನೆ ಮೇಲೇಳುತ್ತದೆ.

ಒಟ್ಟಿನಲ್ಲಿ ಒಂದಲ್ಲಾ ಒಂದು ಕಡೆಯಿಂದ ಆರ್​ ಅಶೋಕ್​ ಮಗ ಶರತ್​ ಹೆಸರು ಅಪಘಾತಕ್ಕೆ ಥಳುಕು ಹಾಕಿಕೊಳ್ಳುತ್ತಿದೆ. ಪೊಲೀಸರ ಮಾತು, ಆರ್​ ಅಶೋಕ್​ರ ಹೇಳಿಕೆ ಮತ್ತು ಆಯಾ ಭಾರತಿ ಬಾಯಿ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬುದಂತೂ ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಪಾರದರ್ಶಕ ತನಿಖೆ ಆದಲ್ಲಿ ಮಾತ್ರ ನಿಜವಾದ ಸತ್ಯ ಹೊರ ಬರಲಿದೆ.

ಏನಿದು ಪ್ರಕರಣ?:ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅತಿಯಾದ ವೇಗದಲ್ಲಿ ಚಲಿಸುತ್ತಿದ್ದ ಕೆಂಪು ಬಣ್ಣದ ಬೆಂಜ್ ಕಾರು ತನ್ನ ಮುಂದಿದ್ದ ಲಾರಿಯನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಮುಂದಾಗಿದೆ. ಕಾರಿನ ಚಾಲಕನ ನಿಯಂತ್ರಣ ತಪ್ಪಿ ಎಡಭಾಗದಲ್ಲಿ ಹೋಟೆಲ್ ಎದುರಿದ್ದ ದಾರಿಹೋಕ ರವಿನಾಯ್ಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

ಹೀಗೆ ಡಿಕ್ಕಿ ಹೊಡೆದ ಕಾರು ಆತನ ಜೊತೆಗೆ ದಾರಿಯ ತಿರುವಿನಲ್ಲಿದ್ದ ತಗ್ಗಿನಲ್ಲಿ ಎರಡು ಬಾರಿ ಪಲ್ಟಿ ಹೊಡೆದು ಉರುಳಿದೆ. ಈ ವೇಳೆ ಸೀಟ್ ಬೆಲ್ಟ್ ಹಾಕದ ಕಾರಣಕ್ಕೆ ಕಾರಿನಲ್ಲಿದ್ದ ಸಚಿನ್ ಎಂಬಾತ ಮೃತಪಟ್ಟಿದ್ದರೆ, ಕಾರು ಚಾಲಕ ರಾಹುಲ್ ಗಾಯಗಳೊಂದಿಗೆ ಬಚಾವ್ ಆಗಿದ್ದ. ಆದರೆ, ತಾನು ಮಾಡದ ತಪ್ಪಿಗೆ ರವಿನಾಯ್ಕ್ ಎಂಬ ಯುವಕ ಮೃತಪಟ್ಟಿದ್ದ.

ಅಪಘಾತಕ್ಕೊಳಗಾದ ಈ ಕಾರಿನ ಹಿಂಬದಿ ಸಚಿವ ಆರ್. ಅಶೋಕ್ ಮಗ ಶರತ್ ಇದ್ದು ಈತನನ್ನು ಅಪಘಾತವಾದ ತಕ್ಷಣ ಬೇರೆ ಕಾರಿನಲ್ಲಿ ಬೆಂಗಳೂರಿಗೆ ಕರೆ ತರಲಾಗಿದೆ, ಮೃತ ಸಚಿನ್ ಶವವನ್ನು ಸಚಿವ ಆರ್​. ಅಶೋಕ್ ಹೆಸರು ಬಳಸಿ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ