ಜೀವವಾಯು ನೀಡುವ ಮರಗಳು ಪರಿಸರ ದಿನದಂದು ಮಾತ್ರ ನೆನಪಾಗುವುದೇ?

news18
Updated:June 5, 2018, 6:55 PM IST
ಜೀವವಾಯು ನೀಡುವ ಮರಗಳು ಪರಿಸರ ದಿನದಂದು ಮಾತ್ರ ನೆನಪಾಗುವುದೇ?
news18
Updated: June 5, 2018, 6:55 PM IST
- ಅನಿತಾ ಈ. ನ್ಯೂಸ್​ 18 ಕನ್ನಡ

ಉಸಿರಾಡುವ ಗಾಳಿ  ಪ್ರಾಣವಾಯು. ಇಂತಹ ಗಾಳಿಯೇ ವಿಷವಾದರೆ ಜೀವಿಗಳ ಜೀವನ ನಿಜಕ್ಕೂ ನರಕ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ.

ಆದರೆ ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಸಹ ಗಮನ ಹರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಆಧುನೀಕರಣ ಹಾಗೂ ಹೆಚ್ಚಾಗುತ್ತಿರುವ ಜನಸಂಖ್ಯೆಯ ಪರಿಣಾಮದಿಂದಾಗಿ ಈಗ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಅದರಲ್ಲೂ ನಗರ ಪ್ರದೇಶಗಳಲ್ಲಿ ಜೀವ ವಾಯು ನೀಡುವ ಮರಗಳ ಸಂಖ್ಯೆಗಿಂತ ಜನರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದಾಗಿಯೇ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಮೆಟ್ರೊ ನಗರಗಳಲ್ಲಿ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಮರಗಳು ಸಾಮಾನ್ಯವಾಗಿ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು, ಆಮ್ಲಜನಕ ಬಿಡುಗಡೆ ಮಾಡುತ್ತವೆ.  ಜತೆಗೆ ವಾತಾವರಣದಲ್ಲಿನ ಉಷ್ಣತೆಯನ್ನೂ ಮರಗಳು ನಿಯಂತ್ರಣದಲ್ಲಿಡುತ್ತವೆ.

ಇಷ್ಟೆಲ್ಲ ಪ್ರಯೋಜನಗಳಿರುವ ಮರಗಳ ಮಾರಣ ಹೋಮ ನಿತ್ಯ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇದೆ. ಮರಗಳನ್ನು ನೆಲಸಮ ಮಾಡುವ ಬದಲು ಅವುಗಳನ್ನು ಸ್ಥಳಾಂತರಿಸುವ ಅವಕಾಶವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇವುಗಳಿಂದಾಗಿಯೇ ವಾತಾವರಣದಲ್ಲಿ ಕಳೆದ 20 ವರ್ಷಗಳಿಗಿಂತ ಈಗ ಇಂಗಾಲದ ಡೈ ಆಕ್ಸೈಡ್​ ಪ್ರಮಾಣ ಹೆಚ್ಚಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಪ್ರಕಾರ ಒಬ್ಬ ಮನುಷ್ಯ ಆರೋಗ್ಯಕರವಾಗಿ ಜೀವಿಸಲು 9.5 ಚ.ಮೀ. ನಷ್ಟು ಹಸಿರು ಪ್ರದೇಶ ಇರಬೇಕು. ಒಬ್ಬ ವ್ಯಕ್ತಿ ಒಂದು ದಿನಕ್ಕೆ 540 ರಿಂದ 900ಗ್ರಾಂ ನಷ್ಟು ಇಂಗಾಲದ ಡೈ ಆಕ್ಸೈಡ್‌ ಅನ್ನು ಉಸಿರಾಟದ ಮೂಲಕ ಹೊರ ಹಾಕುತ್ತಾನೆ. ಕೇವಲ ಉಸಿರಾಟದ ಮೂಲಕ ವರ್ಷಕ್ಕೆ 192 ರಿಂದ 328 ಕಿ.ಗ್ರಾಂ.ನಷ್ಟು ಇಂಗಾಲ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಒಬ್ಬ ವ್ಯಕ್ತಿಯಿಂದ ಬಿಡುಗಡೆಯಾದ ಇಂಗಾಲವನ್ನು ಹೀರಿಕೊಳ್ಳಲು 32 ರಿಂದ 55 ಮರಗಳ ಅಗತ್ಯ ಇದೆ.

ಒಂದು ಮರ 8 ಕೆ.ಜಿ. ಇಂಗಾಲದ ಡೈ ಆಕ್ಸೈಡ್ ಬಳಸಿಕೊಳ್ಳುತ್ತದೆ. ಕೇವಲ ಮನುಷ್ಯ ಹೊರಹಾಕುವ ಇಂಗಾಲದ ಡೈ ಆಕ್ಸೈಡ್ (Carbon Dioxide) ಅನ್ನು ಹೀರಿಕೊಳ್ಳಲು ಎಂಟು ಮರಗಳ ಅಗತ್ಯ ಇದೆ. ಉಳಿದಂತೆ ಕೈಗಾರಿಕೆಗಳು, ವಾಹನಗಳು ಹಾಗೂ ಕಸದ ರಾಶಿಯಿಂದ ಬಿಡುಗಡೆಯಾಗುವ ಅನಿಲಗಳಿಂದ ಮುಕ್ತಿ ಪಡೆಯಲು ಇನ್ನೆಷ್ಟು ಮರಗಳ ಅಗತ್ಯವಿದೆ ಎಂದು ನೀವೇ ಯೋಚಿಸಿ.
Loading...

ಇನ್ನು ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಪ್ರಮಾಣ ಮರದಿಂದ ಮರಕ್ಕೆ ಭಿನ್ನವಾಗಿರುತ್ತದೆ. ಸ್ಥಳೀಯ ಮರಗಳು ಗಾತ್ರದಲ್ಲಿ ಚಿಕ್ಕದಿದ್ದರೂ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಂಡು, ಹೆಚ್ಚಿನ ಪ್ರಮಾಣದ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಆದರೆ ವಿದೇಶಿ ತಳಿಯ ಮರಗಳಿಂದ ಬಿಡುಗಡೆಯಾಗುವ ಆಮ್ಲಜನಕದ ಪ್ರಮಾಣ ಕಡಿಮೆ.

ಒಂದು ದೊಡ್ಡ ಮರ ವರ್ಷಕ್ಕೆ 6 ಕಿ.ಗ್ರಾಂ.ನಷ್ಟು ಇಂಗಾಲವನ್ನು ಬಳಸಿಕೊಳ್ಳುತ್ತದೆ. ಒಂದು ಹೆಕ್ಟೇರ್‌ ಅರಣ್ಯ ಪ್ರದೇಶ ವರ್ಷಕ್ಕೆ ಸುಮಾರು ಆರು ಟನ್‌ ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಮಾವು, ಬೇವು, ಹೊಂಗೆ, ಆಲದ ಮರ ಸೇರಿದಂತೆ ಸ್ಥಳೀಯ ತಳಿಗಳನ್ನೇ ಬೆಳೆಸುವುದೇ ಉತ್ತಮ ಆಯ್ಕೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ.

ಒಟ್ಟಾರೆ ಮನುಷ್ಯನ ಉಳಿವಿಗೆ ಸಂಚಕಾರ ಬರುವ ಹಂತ ತಲುಪುವ ಮೊದಲೇ ಹೆಚ್ಚೆತ್ತುಕೊಂಡು ಮರಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ವಿಶ್ವ ಪರಿಸರ ದಿನ. ಇಂದಾದರೂ ಮರಗಳ ರಕ್ಷಣೆಗೆ ಪಣತೊಡಿ.
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ