• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸದಾಶಿವ ಆಯೋಗ ವರದಿ ಮಂಡಿಸೋ ತಾಕತ್ತಿಲ್ಲದಿದ್ರೆ ಕಸದ ಬುಟ್ಟಿಗೆ ಎಸೆಯಿರಿ: ಸ್ವಾಮೀಜಿಗಳ ಎಚ್ಚರಿಕೆ

ಸದಾಶಿವ ಆಯೋಗ ವರದಿ ಮಂಡಿಸೋ ತಾಕತ್ತಿಲ್ಲದಿದ್ರೆ ಕಸದ ಬುಟ್ಟಿಗೆ ಎಸೆಯಿರಿ: ಸ್ವಾಮೀಜಿಗಳ ಎಚ್ಚರಿಕೆ

ಸ್ವಾಮೀಜಿಗಳು

ಸ್ವಾಮೀಜಿಗಳು

ನಾವು ಈಗಲೂ ಕಸ ಬಳಿದುಕೊಂಡೇ ಇರಬೇಕೆಂದ್ರೆ ಅಸಾಧ್ಯ. ನಮಗೂ ರಾಜಕೀಯ ಪ್ರಾತಿನಿಧ್ಯತೆ ಬೇಕು, ನಮಗೂ ಸರ್ಕಾರದ ಉನ್ನತ ಸ್ಥಾನಗಳು ಬೇಕು. ಕೂಡಲೇ ಸದಾಶಿವ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.

  • Share this:

ಕಲಬುರ್ಗಿ (ಫೆ.7):  ಒಂದು ಕಡೆ ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವಂತೆ ಹೋರಾಟ ತೀವ್ರಗೊಂಡಿದೆ. ಮತ್ತೊಂದೆಡೆ ಪಂಚಮ ಸಾಲಿಗಳಿಗೆ 2ಎ ಮೀಸಲಾತಿ ನೀಡುವಂತೆ ಹೋರಾಟ ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಮೀಸಲಾತಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರ ನಡುವೆಯೇ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರುವ ಮೂಲಕ ಅಸ್ಪೃಶ್ಯ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವಂತೆ ವಿವಿಧ ಮಠಾಧೀಶರು ಆಗ್ರಹಿಸಿದ್ದಾರೆ.


ಆಯೋಗದ ವರದಿ ಜಾರಿಗೆ ತರಲು ಆಗದೇ ಇದ್ದಲ್ಲಿ, ಆಯೋಗವನ್ನು ರಚಿಸಿದ್ದು ಏಕೆ ಎಂದು ಪ್ರಶ್ನಿಸಿರೋ ಮಠಾಧೀಶರು, ಪೋಸ್ಟ್ ಮ್ಯಾನ್ ಕೆಲಸಕ್ಕೂ ಇಷ್ಟು ವಿಳಂಬವೇ ಎಂದು ರಾಜ್ಯ ಸರ್ಕಾವನ್ನು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದ ಹೋರಾಟಗಳು ತೀವ್ರಗೊಂಡಿವೆ. ಇದಕ್ಕೆ ಮತ್ತೊಂದು ಹೋರಾಟವೂ ಸೇರ್ಪಡೆಯಾಗಲಾರಂಭಿಸಿದೆ.


ಮಾದಿಗ ಸಮುದಾಯ ಸೇರಿ ಅಸ್ಪೃಶ್ಯ ಸಮುದಾಯಗಳು ಒಂದು ಗೂಡಿದ್ದು, ಒಳ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಕೊಳ್ಳಲು ತೀರ್ಮಾನಿಸಲಾಗಿದೆ. ಕಲಬುರ್ಗಿಯಲ್ಲಿ ಈ ವಿಷಯ ತಿಳಿಸಿದ ಚಿತ್ರದುರ್ಗದ ಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಹಾಗೂ ಆದಿ ಜಾಂಬವ ಮಠದ ಪೀಠಾಧಿಪತಿ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿಗಳು ಮತ್ತಿತರರ ಮಠಾಧೀಶರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಾದಿಗರು ಮತ್ತು ಇತರೆ ಅಸ್ಪೃಶ್ಯ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಶಿಫಾರಸ್ಸು ಮಾಡಿದೆ. ವರದಿ ಸಲ್ಲಿಕೆಯಾಗಿ ಹತ್ತಾರು ವರ್ಷಗಳೇ ಗತಿಸಿವೆ. ಒಳ ಮೀಸಲಾತಿಗೆ ಒತ್ತಾಯಿಸಿ 30 ವರ್ಷಗಳಿಂದಲೂ ಮಾದಿಗಿ ದಂಡೋರಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಹೋರಾಟ ಮಾಡ್ತಿದ್ದೇವೆ. ಯಾವುದೇ ಪಕ್ಷದ ಸರ್ಕಾರ ಬಂದ್ರೂ ವರದಿ ಜಾರಿಗೆ ಹಿಂದೇಟು ಹಾಕ್ತಿವೆ. ಇದರಿಂದಾಗಿ ಸ್ಪೃಷ್ಯ ಸಮುದಾಯದವರು ನಮ್ಮ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿದ್ದಾರೆ.


ಇದೀಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಚುನಾವಣೆ ಸಂದರ್ಭದಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡೋದಾಗಿ ಭರವಸೆ ನೀಡಿತ್ತು. ಅದರಂತೆ ಮಾದಿಗ ಮತ್ತಿತರ ಸಮುದಾಯಗಳೂ ಬಿಜೆಪಿಯನ್ನು ಬೆಂಬಲಿಸಿದ್ದವು. ಬಿಜೆಪಿ ನುಡಿದಂತೆ ನಡೆಯಬೇಕು. ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿಟ್ಟು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.


ಒಳ ಮೀಸಲಾತಿ ನೀಡೋದು ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ವರದಿಯನ್ನು ಅಧಿವೇಷನದಲ್ಲಿಟ್ಟು, ಪಾಸ್ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ರಾಜ್ಯ ಸರ್ಕಾರದ ಕೆಲಸ ಮುಗಿಯುತ್ತದೆ. ಕೇವಲ ಪೋಸ್ಟ್ ಮನ್ ಕೆಲಸಕ್ಕೂ ಇಷ್ಟು ವಿಳಂಬ ಮಾಡ್ತಿರೋದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಸ್ವಾಮೀಜಿಗಳು ಕಿಡಿ ಕಾರಿದ್ದಾರೆ.


ಇದೇ ವೇಳೆ ಮಾದಿಗ ಮತ್ತು ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಾಜ್ಯ ಸರ್ಕಾರವೇ ರಚಿಸಿತ್ತು. ಆದರೆ ಆಯೋಗ ನೀಡಿದ ವರದಿ ಮಾತ್ರ ಧೂಳು ಹಿಡೀತಾ ಇದೆ. ವರದಿ ಮಂಡಿಸಲು ತಾಕತ್ತಿಲ್ಲದಿದ್ದರೆ ಸಮಿತಿಯನ್ನೇಕೆ ರಚಿಸಬೇಕಿತ್ತು ಎಂದು ಮಠಾಧೀಶರು ಪ್ರಶ್ನಿಸಿದ್ದಾರೆ.


ಆಯೋಗದ ವರದಿ ಜಾರಿಗೆ ತನ್ನಿ, ಇಲ್ಲವೆ ವರದಿಯನ್ನು ತಿರಸ್ಕರಿಸಿ ಕಸದ ಬುಟ್ಟಿಗೆ ಬಿಸಾಡಿ. ಮುಂದೇನು ಮಾಡಬೇಕೆಂದು ನಮಗೆ ಗೊತ್ತು ಎಂದು ರಾಜ್ಯ ಸರ್ಕಾರಕ್ಕೆ ವಿವಿಧ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ. ಆಳುವ ಸರ್ಕಾರಗಳ ಈ ಅನ್ಯಾಯವನ್ನು ಸಹಿಸೋಲ್ಲ ಎಂದು  ಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.


ನಾವು ಈಗಲೂ ಕಸ ಬಳಿದುಕೊಂಡೇ ಇರಬೇಕೆಂದ್ರೆ ಅಸಾಧ್ಯ. ನಮಗೂ ರಾಜಕೀಯ ಪ್ರಾತಿನಿಧ್ಯತೆ ಬೇಕು, ನಮಗೂ ಸರ್ಕಾರದ ಉನ್ನತ ಸ್ಥಾನಗಳು ಬೇಕು. ಕೂಡಲೇ ಸದಾಶಿವ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಮಠಾಧೀಶರು, ಒಳ ಮೀಸಲಾತಿಗಾಗಿ ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುತ್ತೇವೆ. ಮೊದಲು ಶಾಂತಿ ಯಾತ್ರೆ, ನಂತರ ಕ್ರಾಂತಿಕರ ಹೋರಾಟ ಎಂದು ಅಸ್ಪೃಶ್ಯ ಸಮುದಾಯಗಳ ಮಠಾಧೀಶರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವರದಿ - ಶಿವರಾಮ ಅಸುಂಡಿ, ಕಲಬುರ್ಗಿ

Published by:zahir
First published: