ಐಎಂಎ ವಂಚನೆ ಪ್ರಕರಣ: ವಿಕೆಒ ಶಾಲೆಯ ಶಿಕ್ಷಕರು, ಮಕ್ಕಳ ಸ್ಥಿತಿ ಅತಂತ್ರ

ಶಿವಾಜಿನಗರದಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದ ಐಎಂಎ ಸಂಸ್ಥೆಯು ಶಿಕ್ಷಕರ ನೇಮಕಾತಿಯಿಂದ ಹಿಡಿದು ಪ್ರತಿಯೊಂದನ್ನೂ ನಿರ್ವಹಣೆ ಮಾಡುತ್ತಿತ್ತೆನ್ನಲಾಗಿದೆ.

news18
Updated:June 17, 2019, 4:38 PM IST
ಐಎಂಎ ವಂಚನೆ ಪ್ರಕರಣ: ವಿಕೆಒ ಶಾಲೆಯ ಶಿಕ್ಷಕರು, ಮಕ್ಕಳ ಸ್ಥಿತಿ ಅತಂತ್ರ
ವಿಕೆಒ ಶಾಲೆಯ ಎದುರು ಪೋಷಕರ ಪ್ರತಿಭಟನೆ
news18
Updated: June 17, 2019, 4:38 PM IST
ಬೆಂಗಳೂರು(ಜೂನ್ 17): ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ವಿಕೆಓ ಸರ್ಕಾರಿ ಶಾಲೆಯ ಸ್ಥಿತಿ ಅತಂತ್ರವಾಗಿದೆ. ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳ ಸ್ಥಿತಿ ಅತಂತ್ರಗೊಂಡಿದೆ. ರೋಷನ್ ಬೇಗ್ ಮತ್ತು ಐಎಂಎ ಸಂಸ್ಥೆ ದತ್ತು ಪಡೆದಿರುವ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಹಾಗೇ ಬಂದು ಹೀಗೇ ಹೋಗುವಂತಹ ಸ್ಥಿತಿ ಬಂದಿದೆ. ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡಲಾಗುತ್ತಿದೆ. ಇನ್ನೊಂದೆಡೆ, ಶಿಕ್ಷಕರೂ ಕೂಡ ಅತ್ತ ಧರಿ ಇತ್ತ ಪುಲಿ ಎಂಬಂತಹ ವಾತಾವರಣದಲ್ಲಿದ್ದಾರೆ.

ವಿಕೆಓ ಸರ್ಕಾರಿ ಶಾಲೆ ಪ್ರಾರಂಭವಾಗಿ ಒಂದು ತಿಂಗಳಾದರೂ ಇಲ್ಲಿಯ ಶಿಕ್ಷಕರು ಪಾಠ ಮಾಡುತ್ತಿಲ್ಲ. ಮಕ್ಕಳು ದಿನವೂ ಶಾಲೆ ಬಳಿ ಬಂದು ಹೋಗುವುದೇ ಆಗಿದೆ. ನರ್ಸರಿ, ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಶಾಲೆಯೊಳಗೆ ಪ್ರವೇಶ ಸಿಗುತ್ತಿಲ್ಲ. ಇದರಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಶಿವಾಜಿನಗರದ ಕಾರ್ಪೊರೇಟರ್ ಗುಣಶೇಖರ್ ಅವರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ದೂರಿರುವ ಪೋಷಕರು ಮಾಜಿ ಸಚಿವ ರೋಷನ್ ಬೇಗ್ ವಿರುದ್ಧವೂ ಧಿಕ್ಕಾರ ಕೂಗುತ್ತಿದ್ದಾರೆ.

ಇದನ್ನೂ ಓದಿ: ಜಿಂದಾಲ್​​​ ಮತ್ತು ಐಎಂಎ ಪ್ರಕರಣದಲ್ಲಿ ಮೌನ ಮುರಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇದು ವಿದ್ಯಾರ್ಥಿಗಳ ಸ್ಥಿತಿಯಾದರೆ, ಶಾಲೆಯ ಶಿಕ್ಷಕರ ಸ್ಥಿತಿ ಕೂಡ ವಿಚಿತ್ರವಾಗಿದೆ. 80ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಶಿಕ್ಷಕರಿಗೆ 2-3 ತಿಂಗಳಿನಿಂದ ಸಂಬಳವೇ ಸಿಗುತ್ತಿಲ್ಲ. 63 ಶಿಕ್ಷಕರ ಶೈಕ್ಷಣಿಕ ಪ್ರಮಾಣಪತ್ರ ಸೇರಿ ಹಲವು ಮೂಲ ಸರ್ಟಿಫಿಕೇಟ್​ಗಳು ಐಎಂಎ ಸಂಸ್ಥೆಯ ಮುಖ್ಯ ಕಚೇರಿಯಲ್ಲೇ ಸಿಲುಕಿವೆ. ಈಗ ಹಗರಣ ಬೆಳಕಿಗೆ ಬಂದ ನಂತರ ಐಎಂಎ ಸಂಸ್ಥೆಯ ಎಲ್ಲಾ ಕಚೇರಿಗಳನ್ನು ಸೀಜ್ ಮಾಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಂಬಳವೂ ಇಲ್ಲದೇ ಬೇರೆಡೆ ಕೆಲಸಕ್ಕೂ ಪ್ರಯತ್ನ ಮಾಡಲಾಗದಂತಹ ಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.

ಶಿಕ್ಷಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಐಎಂಎನ ಕೆಲ ಹೂಡಿಕೆದಾರರು ಹಾಗೂ ಅನಾಮಿಕ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿದೆಯಂತೆ. ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಅವರ ಸೋದರ ಸಂಬಂದಿಯಾಗಿರುವ ಅಮ್ರಿನಾ ಅವರು ಈ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೇ ಹೆಚ್ಚಾಗಿ ಬೆದರಿಕೆ ಕರೆಗಳು ಬರುತ್ತಿವೆ.

ಶಿಕ್ಷಕರ ಎಲ್ಲಾ ಮೂಲ ದಾಖಲಾತಿಗಳನ್ನು ಕೊಡಿಸಬೇಕು ಮತ್ತು ಶಿಕ್ಷಕರಿಗೆ ಹಾಗೂ ಶಾಲೆಗೆ ಭದ್ರತೆ ಒದಗಿಸಬೇಕು ಎಂದು ಅಮ್ರಿನಾ ಅವರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆನ್ನಲಾಗಿದೆ.
Loading...

ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ; 4 ವರ್ಷ ಎಚ್​ಡಿಕೆ ಸಿಎಂ ಆಗಿರಲಿ ಎಂದ ಅಭಿಮಾನಿ

ಸರ್ಕಾರಿ ಶಾಲೆಗೂ ಐಎಂಎಗೂ ಸಂಬಂಧವೇನು?

ಶಿವಾಜಿನಗರದಲ್ಲಿರುವ ವಿ.ಕೆ. ಒಬೇದುಲ್ಲಾ ಸರ್ಕಾರಿ ಶಾಲೆಯನ್ನು 2016ರಲ್ಲಿ ಐಎಂಎ ಸಂಸ್ಥೆ ದತ್ತು ಪಡೆದಿತ್ತು. ಆಗಿನ ಸಚಿವ ರೋಷನ್ ಬೇಗ್ ಅವರೂ ಬೆಂಬಲವಾಗಿ ನಿಂತಿದ್ದರೆನ್ನಲಾಗಿದೆ. ಆ ಬಳಿಕ ಶಾಲೆಯ ನಿರ್ವಹಣೆ ಎಲ್ಲವನ್ನೂ ಐಎಂಎ ಸಂಸ್ಥೆಯೇ ಮಾಡುತ್ತಾ ಬಂದಿದೆ. ಐಎಂಎಯಿಂದಲೇ 80ಕ್ಕೂ ಹೆಚ್ಚು ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದ ನೇಮಕಾತಿ ನಡೆದಿದೆ. ಬೆಂಗಳೂರು ಮಿರರ್ ಪತ್ರಿಕೆಯ ವರದಿಯೊಂದರ ಪ್ರಕಾರ ಐಎಂಎ ಜ್ಯುವೆಲ್ಸ್​ನ ಸ್ಕೀಮ್​ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದವರನ್ನು ಶಿಕ್ಷಕರಾಗಿ ನೇಮಕ ಮಾಡಲಾಗಿದೆಯಂತೆ. ಎಸ್ಸೆಸ್ಸೆಲ್ಸಿ ಓದಿದವರನ್ನು, ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರನ್ನೂ ಶಿಕ್ಷಕರಾಗಿ ನೇಮಕ ಮಾಡಿರುವ ಉದಾಹರಣೆಗಳುಂಟು. ವಿದ್ಯಾರ್ಥಿಗಳನ್ನೂ ಕೂಡ ಹೂಡಿಕೆಯ ಆಧಾರದ ಮೇಲೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿತ್ತೆಂಬ ವರದಿ ಆ ಪತ್ರಿಕೆಯಲ್ಲಿ ಬಂದಿದೆ.

(ವರದಿ: ಮುನಿರಾಜು ಹೊಸಕೋಟೆ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...