News18 India World Cup 2019

ಐಎಂಎ ಹಗರಣ: ದಾಖಲಾದ ದೂರುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚು; ಆರೋಪಿ ಮನ್ಸೂರ್ ವಿರುದ್ಧ ಅರೆಸ್ಟ್ ವಾರೆಂಟ್

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗಿ ಪ್ರಕರಣದ ಬಗ್ಗೆ ಒಂದಷ್ಟು ಮಾಹಿತಿ ಕಲೆಹಾಕಿದ್ದಾರೆ.

news18
Updated:June 14, 2019, 8:50 PM IST
ಐಎಂಎ ಹಗರಣ: ದಾಖಲಾದ ದೂರುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚು; ಆರೋಪಿ ಮನ್ಸೂರ್ ವಿರುದ್ಧ ಅರೆಸ್ಟ್ ವಾರೆಂಟ್
ಐಎಂಎ ಜ್ಯುವೆಲ್ಸ್ ಕಚೇರಿ
news18
Updated: June 14, 2019, 8:50 PM IST
ಬೆಂಗಳೂರು(ಜೂನ್ 14): ಐಎಂಎ ಜಿವೆಲ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವತ್ತು 3,700ಕ್ಕೂ ಹೆಚ್ಚು ದೂರುಗಳು ಬಂದಿವೆ. ಇಲ್ಲಿಯವರೆಗೂ ದಾಖಲಾದ ದೂರುಗಳ ಸಂಖ್ಯೆ 32 ಸಾವಿರ ದಾಟಿದೆ. ಇಂದು 25ಕ್ಕೂ ಹೆಚ್ಚು ಜನರು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ಒಂದೇ ಎಫ್​ಐಆರ್ ದಾಖಲಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಎಲ್ಲಾ ದೂರುಗಳನ್ನೂ ಎಫ್​ಐಆರ್ ಆಗಿ ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸಿದರು.

ಐಎಂಎ ಜ್ಯುವೆಲ್ಸ್ ಸಂಸ್ಥೆಯಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ನ್ಯಾಯ ಸಿಗದಿದ್ದರೆ ರಾಷ್ಟ್ರಪತಿಯವರು ಎಲ್ಲಾ ಸಂತ್ರಸ್ತರಿಗೂ ದಯಾಮರಣಕ್ಕೆ ಅನುಮತಿ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದನ್ನೂ ಓದಿ: ಐಎಂಎ ವಂಚನೆಗೆ ರಾಜ್ಯದಲ್ಲಿ ಮೊದಲ ಬಲಿ; ಹಣ ಕಳೆದುಕೊಂಡು ಹೃದಯಾಘಾತದಿಂದ ದಿನಗೂಲಿ ನೌಕರ ಮೃತ

ಇದೇ ವೇಳೆ, ನಾಲ್ಕನೇ ಎಸಿಎಂಎಂ ನ್ಯಾಯಾಲಯವು ಪ್ರಕಣದ ಪ್ರಮುಖ ಆರೋಪಿ ಮನ್ಸೂರ್ ಅವರನ್ನ ಬಂಧಿಸಲು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಐಎಂಎ ಜ್ಯುವೆಲ್ಸ್ ಸಂಸ್ಥೆಯ ಆರೇಳು ನಿರ್ದೇಶಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ, ಪ್ರಮುಖ ಆರೋಪಿ ಮನ್ಸೂರ್ ವಿದೇಶಕ್ಕೆ ಪರಾರಿಯಾಗಿದ್ದಾರೆನ್ನಲಾಗಿದೆ.

ಇನ್ನು, ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಸಂಸ್ಥೆಯ ಚಿತ್ರದುರ್ಗ ಮೂಲದ ಹೂಡಿಕೆದಾರ ಮೊಹಮ್ಮದ್ ಸಿರಾಜುದ್ದೀನ್ ಅವರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆರೋಪಿ ಮನ್ಸೂರ್ ಸಾಕಷ್ಟು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪೊಲೀಸರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಆತ ತಪ್ಪಿಸಿಕೊಂಡು ವಾರವಾದರೂ ಪೊಲೀಸರಿಂದ ಪತ್ತೆ ಮಾಡಲು ಆಗಿಲ್ಲ. ಹೀಗಾಗಿ, ಸಿಬಿಐನಿಂದ ತನಿಖೆ ನಡೆಸುವಂತೆ ಆದೇಶ ಹೊರಡಿಸಬೇಕು ಎಂದು ಸಿರಾಜುದ್ದೀನ್ ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಸಾವಿರಾರು ಜನರಿಗೆ ಮೋಸ ಮಾಡಿರುವ ಐಎಂಎ ಜ್ಯುವೆಲ್ಸ್​ ಮಾಲೀಕ ಮನ್ಸೂರ್ ಖಾನ್ ಇಲ್ಲಿ ಮಾತ್ರ ಹೀರೋ!
Loading...

ರಾಜ್ಯ ಸರಕಾರವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿದೆ. ಆದರೆ, ವಿಪಕ್ಷ ಬಿಜೆಪಿಯು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅಗ್ರಹಿಸುತ್ತಾ ಬಂದಿದೆ.

ಇದೇ ಹೊತ್ತಲ್ಲಿ, ಜಾರಿ ನಿರ್ದೇಶನಾಲಯವು ಪ್ರಕರಣಕ್ಕೆ ಎಂಟ್ರಿ ಕೊಟ್ಟಿದೆ. ಇ.ಡಿ. ಅಧಿಕಾರಿಗಳು ಇವತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಬಂದು ಪ್ರಕರಣದ ಮಾಹಿತಿಯನ್ನು ಪಡೆದುಕೊಂಡರು. ಸಂಸ್ಥೆಯ ಬ್ಯಾಂಕ್ ವಹಿವಾಟು, ಅವ್ಯವಹಾರ ಇತ್ಯಾದಿ ವಿವರಗಳನ್ನು ಕಲೆಹಾಕಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡದ ಅಧಿಕಾರಿಗಳನ್ನೂ ಇಡಿ ಅಧಿಕಾರಿಗಳು ಭೇಟಿಯಾಗಿರುವ ಮಾಹಿತಿ ಇದೆ.

ಸುಮಾರು 5 ಸಾವಿರ ಕೋಟಿ ರೂ ಮೊತ್ತದ ಈ ಹಗರಣದಲ್ಲಿ ಐಎಂಎ ಜ್ಯುವೆಲ್ಸ್ ಸಂಸ್ಥೆಯಿಂದ ವಂಚನೆಗೊಳಗಾದವರ ಸಂಖ್ಯೆ ಸಾಕಷ್ಟಿದೆ. ಪೊಲೀಸ್ ಅಧಿಕಾರಿಗಳೂ ಕೂಡ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

(ವರದಿ: ಗಂಗಾಧರ್ ವಾಗಟ)
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...