ನೆಲಮಂಗಲದಲ್ಲಿ ಕಸಕ್ಕೆ ಬಿದ್ದ ದೇವರು; ಅನಧಿಕೃತ ದೇವಾಲಯ ತೆರವು ಕಾರ್ಯಾಚರಣೆ ಸ್ಥಗಿತ

ನೆಲಮಂಗಲದಲ್ಲಿ ನಾಲ್ಕು ಅನಧಿಕೃತ ದೇವಸ್ಥಾನಗಳನ್ನ ತೆರವುಗಳಿಸಲಾಗಿದೆ. ಆದರೆ, ಒಂದು ದೇವಸ್ಥಾನದ ವಿಗ್ರಹವನ್ನ ನಿಯಮಾನುಸಾರ ಕೆರೆಗೆ ವಿಲೇವಾರಿ ಮಾಡದೇ ಕಸಕ್ಕೆ ಬಿಸಾಡಿ ಹೋದ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ನೆಲಮಂಗಲದಲ್ಲಿ ಅನಧಿಕೃತ ದೇವಸ್ಥಾನ ತೆರವುಗೊಳಿಸಿ ಗೋಪರದ ವಿಗ್ರಹವನ್ನು ಕಸಕ್ಕೆ ಬಿಸಾಡಿರುವುದು.

ನೆಲಮಂಗಲದಲ್ಲಿ ಅನಧಿಕೃತ ದೇವಸ್ಥಾನ ತೆರವುಗೊಳಿಸಿ ಗೋಪರದ ವಿಗ್ರಹವನ್ನು ಕಸಕ್ಕೆ ಬಿಸಾಡಿರುವುದು.

 • Share this:
  ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ವಿವಿಧೆಡೆ ಅನಧಿಕೃತವಾಗಿ ನಿರ್ಮಾಣವಾಗಿರುವ ಮಂದಿರಗಳನ್ನ (Illegal temple building demolition drive) ತೆರವುಗೊಳಿಸುವ ಆಡಳಿತದ ಕಾರ್ಯಾಚರಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮೈಸೂರಿನ ನಂಜನಗೂಡಿನಲ್ಲಿ ಪುರಾತನ ದೇವಾಲಯ ತೆರವುಗೊಳಿಸಿದ ಘಟನೆ ವಿಧಾನಸಭೆಯಲ್ಲೂ ದೊಡ್ಡ ಸದ್ದು ಮಾಡಿದೆ. ಹಿಂದೂಪರವೆಂದು ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿಯ ಮೂಗಿನ ನೇರದಲ್ಲೇ ದೇವಸ್ಥಾನಗಳನ್ನ ಕೆಡವಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ ಆಡಳಿತ ಪಕ್ಷದ ಸದಸ್ಯರು ಸಮರ್ಥನೆ ಮಾಡಿಕೊಳ್ಳಲೂ ಆಗದೇ, ವಿರೋಧಿಸಲೂ ಆಗದೇ ಇಬ್ಬಂದಿ ಸಂಕಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೆಲ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಪೂಜಾಮಂದಿರಗಳ ತೆರವು ವಿಚಾರದಲ್ಲಿ ಜಿಲ್ಲಾಡಳಿತ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸುತ್ತಿದೆ. ಇನ್ನು, ಮೈಸೂರಿನ ದೇವಾಲಯ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಏಕಾಏಕಿ ದೇವಸ್ಥಾನ ತೆರವು ಮಾಡಿದ ಬಗ್ಗೆ ವಿವರಣೆ ಕೇಳಿ ತನಗೆ ಹಾಗೂ ತಹಶೀಲ್ದಾರ್​ಗೆ ನೋಟೀಸ್ ಬಂದಿದೆ. ಅದಕ್ಕೆ ಸಂಪೂರ್ಣ ವಿವರ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ಧಾರೆ. ಸರ್ಕಾರದ ಮುಂದಿನ ನಿರ್ದೇಶನ ಬರುವವರೆಗೂ ಅನಧಿಕೃತ ದೇವಸ್ಥಾನ ಕಟ್ಟಡ ತೆರವು ಕಾರ್ಯಾಚರಣೆ ನಿಂತಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ಧಾರೆ.

  ಕಸಕ್ಕೆ ಬಿದ್ದ ದೇವರು: ರಾಜ್ಯದ ವಿವಿಧೆಡೆಯೂ ಅಕ್ರಮ ದೇವಸ್ಥಾನ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಾಗಿದೆ. ಹಲವೆಡೆ ಹಿಂದೂ ಪರ ಸಂಘಟನೆಗಳೇ ಜಿಲ್ಲಾಡಳಿತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನೆಲಮಂಗಲದಲ್ಲಿ ಆಂಜನೇಯ ಗುಡಿಯನ್ನ ನೆಲಸಮಗೊಳಿಸಿ ಅದರ ವಿಗ್ರಹವನ್ನ ಬೇಜವಾಬ್ದಾರಿ ರೀತಿಯಲ್ಲಿ ಕಸಕ್ಕೆ ಬಿಸಾಡಿದ ಘಟನೆಯೂ ಆಕ್ರೋಶಕ್ಕೆ ಕಾರಣವಾಗಿದೆ. 2009ರಿಂದ ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ಆಗಿರುವ ಅಕ್ರಮ ಧಾರ್ಮಿಕ ಕಟ್ಟಡಗಳನ್ನ ತೆರವುಗೊಳಿಸುವಂತೆ ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ಅವರು ತಮ್ಮ ವ್ಯಾಪ್ತಿಯ ತಹಶೀಲ್ದಾರ್​ಗಳಿಗೆ ಸೂಚನೆ ನೀಡಿದ್ದರು. ಅದರಂತೆ ನೆಲಂಗಲ ತಹಶೀಲ್ದಾರ್ ಕೆ ಮಂಜುನಾಥ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ನೆಲಮಂಗಲದಲ್ಲಿ 20 ಅನಧಿಕೃತ ಧಾರ್ಮಿಕ ಕಟ್ಟಡಗಳಿರುವುದನ್ನ ಗುರುತಿಸಲಾಗಿದೆ. ಅವುಗಳ ಪೈಕಿ ನಾಲ್ಕನ್ನು ತೆರವುಗೊಳಿಸಲಾಗಿದೆ. ನೆಲಮಂಗಲ ಘಟಕದ ಬಜರಂಗದಳ ಸಂಘಟನೆಯ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

  ದೇವಸ್ಥಾನ ಕಟ್ಟಡ ತೆರವುಗೊಳಿಸಿ ನಿಯಮಾನುಸಾರ ಮೂರ್ತಿ ವಿಲೇವಾರಿ ಮಾಡದ ಆರೋಗ ನೆಲಮಂಗಲ ತಾಲೂಕು ಆಡಳಿತಕ್ಕೆ ಎದುರಾಗಿದೆ. ತೆರವುಗೊಳಿಸಲಾದ ಗೋಪುರದ ಮೇಲಿದ್ದ ಆಂಜನೇಯ ಮೂರ್ತಿಯನ್ನು ನಗರಸಭೆ ಕಸ ಸುರಿಯುವ ಜಾಗದಲ್ಲಿ ಎಸೆದು ಹೋಗಲಾಗಿದೆ. ವಿಷಯ ತಿಳಿದ ನೆಲಮಂಗಲ ತಹಶೀಲ್ದಾರ್ ಕೆ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿದರು. ಕಸಕ್ಕೆ ಎಸೆಯಲಾಗಿದ್ದ ಆಂಜನೇಯನ ವಿಗ್ರಕ್ಕೆ ಪೂಜೆ ಸಲ್ಲಿಸಿ ನಿಯಮಾನುಸಾರ ಕೆರೆಗೆ ವಿಲೇವಾರಿ ಮಾಡಲಾಯಿತು.

  ಇದನ್ನೂ ಓದಿ: Basavaraj Bommai: ಆರೋಗ್ಯ ಸಚಿವರ ಎದುರಲ್ಲೇ ಆರೋಗ್ಯ ವ್ಯವಸ್ಥೆ ಸರಿಯಿಲ್ಲ ಎಂದ ಸಿಎಂ; ಮುಜುಗರಕ್ಕೀಡಾದ ಸುಧಾಕರ್

  ಬಿಜೆಪಿ ನಾಯಕರ ಪ್ರತಿಕ್ರಿಯೆ:

  ಉಗ್ರ ಹಿಂದುತ್ವವಾದಿ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಸಿ ಟಿ ರವಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ ಅವರು ಆವೇಶಭರಿತ ಹೇಳಿಕೆ ಕೊಡುವ ಗೋಜಿಗೆ ಹೋಗಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು ಎಂಬುದೇನಿಲ್ಲ. ಅದರ ಬಗ್ಗೆ ನಂತರ ಯೋಚಿಸೋಣ. ಆದರೆ, ಹಬ್ಬದ ದಿನವೇ ದೇವಸ್ಥಾನ ತೆರವುಗೊಳಿಸಿದ್ದು ತಪ್ಪು. ಜಿಲ್ಲಾಡಳಿತಗಳು ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

  ಇನ್ನು, ಹಿಂದುತ್ವದ ಬಗ್ಗೆ ಬಹಿರಂಗವಾಗಿಯೇ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರುವುದಕ್ಕೆ ವಾಗ್ದಾಳಿ ಸೀಮಿತಗೊಳಿಸಿದರು. ಹಿಂದೂ ದೇವಾಲಯಗಳ ತೆರವು ಮಾಡದಿರುವ ಬಗ್ಗೆ ಸಿಎಂ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ಧಾರೆ. ಸರ್ಕಾರ ಆದೇಶ ನೀಡದೇ ದೇವಸ್ಥಾನಗಳನ್ನ ತೆರವು ಮಾಡಬಾರದು ಎಂದು ಸರ್ಕಾರದ ನಿರ್ದೇಶನವನ್ನು ಅಧಿಕಾರಿಗಳು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ಧಾರೆ.

  ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರೂ ಕೂಡ ಅಧಿಕಾರಿಗಳ ಮೇಲೆ ದೋಷಾರೋಪಣೆ ಮಾಡಿದ್ಧಾರೆ. ಕೆಲ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಸರ್ವಾಧಿಕಾರ ಮೆರೆಯುತ್ತಿದ್ದಾರೆ ಎಂದು ಮಾಜಿ ಸಚಿವರು ಟೀಕಿಸಿದ್ಧಾರೆ.
  Published by:Vijayasarthy SN
  First published: