ಯಾದಗಿರಿ(ಜ.24): ಶಿವಮೊಗ್ಗ ಜಿಲ್ಲೆಯ ಕಲ್ಲು ಕ್ವಾರಿ ದುರ್ಘಟನೆಯಿಂದ ಈಗ ಯಾದಗಿರಿ ಜಿಲ್ಲೆಯ ಜನರು ಕೂಡ ಆತಂಕಗೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಈಗ ಗಣಿಗಾರಿಕೆ ಪ್ರದೇಶದ ಗ್ರಾಮದ ಜನರು ಭಯದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಜಿಲ್ಲೆಯ ದೋರನಹಳ್ಳಿ, ವರ್ಕನಳ್ಳಿ, ಹಳಿಗೇರಾ ಹಾಗೂ ಮೊದಲಾದ ಕಡೆ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಅದೇ ರೀತಿ ಕಲ್ಲು ಗಣಿಗಾರಿಕೆಯಿಂದ ಯಾದಗಿರಿ ತಾಲೂಕಿನ ಮಸ್ಕನಳ್ಳಿ ಗ್ರಾಮದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಲು ಗಣಿಗಾರಿಕೆಗೆ ಜನ ಕಂಗಲಾಗಿದ್ದಾರೆ. ಮಸ್ಕನಳ್ಳಿ ಗ್ರಾಮದಿಂದ ಕೇವಲ ಅರ್ಧ ಕಿಮೀ ಅಂತರದಲ್ಲಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಗಣಿಗಾರಿಕೆ ದುರಂತ ನಂತರ ಯಾದಗಿರಿಯಲ್ಲಿ ಅಧಿಕಾರಿಗಳು ಇನ್ನು ಎಚ್ಚೆತ್ತುಕೊಂಡಿಲ್ಲ. ಗ್ರಾಮದ ಪಕ್ಕ ಹಾಗೂ ರಸ್ತೆ ಪಕ್ಕದಲ್ಲಿಯೇ ಗಣಿಗಾರಿಕೆ ಮಾಡುತ್ತಿದ್ದಾರೆ. ತಡರಾತ್ರಿ ಹಾಗೂ ನಸುಕಿನ ಜಾವ ಜಿಲೆಟನ್ ಸ್ಪೋಟಕ ಬಳಕೆ ಮಾಡಿ ಕಲ್ಲು ಪುಡಿ ಮಾಡಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿಗಳ ದಾಳಿ; 30ಕ್ಕೂ ಹೆಚ್ಚು ಮಂದಿಗೆ ಗಾಯ; ಮೂವರ ಸ್ಥಿತಿ ಚಿಂತಾಜನಕ
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಸ್ಕನಳ್ಳಿ ಗ್ರಾಮದ ಮುಖಂಡ ಸೋಮಶೇಖರ ಮಸ್ಕನಳ್ಳಿ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಗ್ರಾಮದ ಸಮೀಪದ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಅಧಿಕೃತವೋ ಹಾಗೂ ಅನಧಿಕೃತವೋ ನಮಗೆ ಗೊತ್ತಿಲ್ಲ. ಆದರೆ, ಗ್ರಾಮದ ಅರ್ಧ ಕಿಮೀ ಸಮೀಪ ಹಾಗೂ ರಸ್ತೆ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದ ಊರಿಗೆ ತೆರಳಲು ಸಮಸ್ಯೆಯಾಗುತ್ತಿದೆ. ಅದೇ ರೀತಿ ಕಲ್ಲು ಸ್ಪೋಟ ಮಾಡುತ್ತಿರುವ ಪರಿಣಾಮ ಭಯದಲ್ಲಿಯೇ ಜೀವನ ನಡೆಸಲಾಗುತ್ತಿದೆ ಎಂದರು.
ಈ ಬಗ್ಗೆ ಗಣಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಾಲ್ ಮಾಡಿ ಕೇಳಿದ್ರೆ ಕಲ್ಲುಗಣಿಗಾರಿಕೆ ಅಧಿಕೃತವೋ ಹಾಗೂ ಅನಧಿಕೃತವೋ ಎಂಬ ಮಾಹಿತಿ ನೀಡುವ ಕಾರ್ಯ ಮಾಡಿಲ್ಲ. ನಿರಂತರವಾಗಿ ಕಲ್ಲು ಸ್ಪೋಟ ಮಾಡುವ ಪರಿಣಾಮದಿಂದ ಮಸ್ಕನಳ್ಳಿ ಗ್ರಾಮದಲ್ಲಿ ಮನೆಗಳ ಗೊಡೆಗಳು ಬಿರುಕು ಬಿಟ್ಟಿದ್ದಾರೆ. ಅದೆ ರೀತಿ ಅಂತರ್ಜಲ ಮಟ್ಟ ಕೂಡ ಪಾತಾಳಕ್ಕೆ ತಲುಪಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳ ಹತ್ತಿರ ತೆರಳಿ ಗಣಿಗಾರಿಕೆ ಬಂದ್ ಮಾಡಬೇಕೆಂದು ಮನವಿ ಮಾಡಿದ್ರು. ಯಾವುದೇ ಪ್ರಯೋಜನವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ