ರಾಯಚೂರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಅಕ್ರಮ ಮರಳು ದಂಧೆ..!

ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ತಡೆಯದಿದ್ದರೆ ನೇರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

ಅಕ್ರಮ ಮರಳುಗಾರಿಕೆ

ಅಕ್ರಮ ಮರಳುಗಾರಿಕೆ

  • Share this:
ರಾಯಚೂರು(ಜ.29): ಕೃಷ್ಣಾ ಹಾಗೂ ತುಂಗಭದ್ರಾ ನದಿಯ ಮಧ್ಯೆ ಇರುವ ರಾಯಚೂರು ಜಿಲ್ಲೆಯಲ್ಲಿ ಅಕ್ರಮ‌ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಎರಡು ನದಿಗಳ ಒಡಲನ್ನು ಬಗೆದು ಮರಳನ್ನು ಸಾಗಿಸುವ ದಂಧೆ ಹಗಲು ರಾತ್ರಿ ನಿರಂತರವಾಗಿ ನಡೆಯುತ್ತಿದೆ. ನದಿಯಲ್ಲಿ ನಿಗದಿ ಮಾಡಿದ ಪ್ರದೇಶ ಹೊರತುಪಡಿಸಿಯೂ ಸಹ ಮರಳು ಸಾಗಾಟ ನಡೆಯುತ್ತಿದೆ.  ನದಿಯಲ್ಲಿ ಹಿಟಾಚಿ ಮೂಲಕ ಮರಳನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮದ್ರಾಸ್ ಗ್ರೀನ್ ಟ್ರಿಬ್ಯೂನಲ್ ಆದೇಶ ನೀಡಿದೆ. ಈ ಆದೇಶವನ್ನು ಸಹ ಗಾಳಿಗೆ ತೂರಲಾಗಿದೆ. ಈ ಅಕ್ರಮದಲ್ಲಿ ನಕಲಿ ರಾಯಲ್ಟಿ ಬಳಕೆ ಅಧಿಕವಾಗಿದ್ದು ಅದನ್ನು ಅಧಿಕಾರಿಗಳು ತಡೆಯಲು ಮುಂದಾಗಿದ್ದಾರೆ. ಒಂದೇ ಕಡೆ 307 ರಾಯಲ್ಟಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ತಡೆಯದಿದ್ದರೆ ನೇರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೆಯೇ ಅಧಿಕಾರಿಗಳು ಅಕ್ರಮ‌ ಮರಳು ಸಾಗಾಟ ತಡೆಯಲು ಮುಂದಾಗಿದ್ದಾರೆ. ಅದಕ್ಕೆ ಮೊದಲ ಹೆಜ್ಜೆಯಾಗಿ ಅಕ್ರಮವಾಗಿ ರಾಯಲ್ಟಿ ನೀಡುವ ದಂಧೆಯನ್ನು ಪತ್ತೆ ಮಾಡಿದ್ದಾರೆ.

ದೇವದುರ್ಗಾದ ಶ್ರೀಸಿದ್ದಾರೂಢ ಫಾರ್ಮಸಿಯಲ್ಲಿ ಬೇರೆ ಜಿಲ್ಲೆಯ ಖಾಸಗಿ ಜಮೀನಿನಲ್ಲಿ ಮರಳು ಸಾಗಾಟ ಮಾಡಲು ಸರಕಾರದಿಂದ‌ ನೀಡುವ ರಾಯಲ್ಟಿಗಳನ್ನು ಇಲ್ಲಿ ಸೃಷ್ಠಿಸಿ, ಈ ರಾಯಲ್ಟಿಗಳಿಂದ ದೇವದುರ್ಗಾ ತಾಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಮರಳು ಸಾಗಾಟ ಮಾಡಲಾಗುತ್ತಿತ್ತು. ದೇವದುರ್ಗಾದ ಸಿದ್ದಲಿಂಗರಡ್ಡಿ ಎಂಬುವವರ ಮೆಡಿಕಲ್ ಶಾಪ್​​ನಲ್ಲಿ ಅಕ್ರಮ ನಡೆಯುತ್ತಿತ್ತು, ಇಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಶಶಿಕಾಂತ ವಡ್ಡರ್, ಬಿ ಯಲ್ಲಪ್ಪ, ಎಂ ಎಂ ಬಳ್ಳಾರಿ ಹಾಗು ಕುಷ್ಟಗಿಯ ಶರಣಪ್ಪ ಬನ್ನಶೆಟ್ಟಿ ಎಂಬುವವರ ಜಮೀನಿನಲ್ಲಿ ಮರಳು ಸಾಗಾಟಕ್ಕಾಗಿ ಪರವಾನಿಗೆ ಪತ್ರಗಳನ್ನು ಇಲ್ಲಿ ತಂದು ನಕಲಿ ರಾಯಲ್ಟಿಗಳನ್ನು ಸೃಷ್ಠಿಸಲಾಗುತ್ತಿತ್ತು.

ಮೈಸೂರಿಗೆ ಬರಲಿದೆ ರೋಬೋಟ್ ಮ್ಯಾನ್ ‌ಹೋಲ್ ಕ್ಲೀನರ್‌; ಇನ್ಮುಂದೆ ಪೌರಕಾರ್ಮಿಕರಿಗಿಲ್ಲ ಸಮಸ್ಯೆ

ಅಂಗಡಿಯ ಮಾಲೀಕ ಭರತಕುಮಾರ ಹಾಗು ಚನ್ನನಗೌಡ ಎಂಬುವವರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಯಚೂರಿನ ಸಹಾಯಕ ಆಯುಕ್ತ ಸಂತೋಷ ಕಾಮಗೌಡರ ದಾಳಿ ಮಾಡಿದಾಗ ಅಕ್ರಮ ಬಯಲಾಗಿದೆ.

ಅಕ್ರಮ ಹೇಗೆ ನಡೆಯುತ್ತದೆ?

ಖಾಸಗಿ ಜಮೀನಿನಲ್ಲಿ ಮರಳು ಸಾಗಾಟಕ್ಕೆ ಪ್ರತಿ 15 ಟನ್ ಗೆ 1280 ರೂಪಾಯಿ ರಾಜಧನ ನೀಡಬೇಕು, ಆದರೆ ಸರಕಾರಿ ಜಮೀನಿನಲ್ಲಿ ಮರಳು ಸಾಗಾಟಕ್ಕೆ ಪ್ರತಿ 15 ಟನ್ ಗೆ 40-50 ಸಾವಿರ ರೂಪಾಯಿ ರಾಜಧನ ಸಲ್ಲಿಸಬೇಕು, ರಾಜಧನವನ್ನು ಉಳಿಸುವ ಉದ್ದೇಶದಿಂದ ಖಾಸಗಿ ಜಮೀನಿನಲ್ಲಿ ಮರಳು ಸಾಗಾಟದ ಪರವಾನಿಗೆ ಪತ್ರ ತಂದು ಇದೇ ಪರವಾನಿಗೆ ಪತ್ರದ ಮೂಲಕ ನದಿಯಲ್ಲಿಯ ಮರಳು ಸಾಗಾಟ ಮಾಡಲಾಗುತ್ತಿದೆ. ಒಂದೇ ರಾಯಲ್ಟಿಯಲ್ಲಿ ಹಲವು ಬಾರಿ ಮರಳು ಸಾಗಾಟ ಮಾಡಲಾಗುತ್ತಿದೆ.ಇದರಿಂದಾಗಿ ಕೋಟ್ಯಂತರ ರೂಪಾಯಿ ಸರಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. 307 ರಾಯಲ್ಟಿಗಳಿಂದ ಅಂದಾಜು ಸರಕಾರಕ್ಕೆ 70 ಲಕ್ಷ ರೂಪಾಯಿ ರಾಯಲ್ಟಿ ಹಣ ನಷ್ಟವಾಗಲಿದೆ.

ಮರಳು ಅಕ್ರಮ ದಂಧೆ ಬೇರೆ ಬೇರೆ ರೀತಿಯಾಗಿ ನಡೆಯುತ್ತಿದ್ದು, ಅದರಲ್ಲಿ ನಕಲಿ ರಾಯಲ್ಟಿಗಳದ್ದು ಒಂದು ರೀತಿ. ಇದೇ ರೀತಿ ನದಿಯಲ್ಲಿ ರಾತ್ರೋರಾತ್ರಿ ಸಾಗಾಟ, ಬೃಹತ್ ಯಂತ್ರಗಳ ಬಳಕೆ, ನಿಗದಿತ ಪ್ರದೇಶಕ್ಕಿಂತ ಅಧಿಕ ಪ್ರದೇಶದಲ್ಲಿ ಮರಳುಗಾರಿಕೆ, ಆಳವಾಗಿ ಮರಳು ತೆಗೆಯುವ ಹೀಗೆ ಹಲವಾರು ರೀತಿಯ ಅಕ್ರಮಗಳು ನಡೆಯುತ್ತಿದ್ದು ಅವುಗಳನ್ನು ತಡೆಯಬೇಕಾಗಿದೆ, ಇದು ಆರಂಭ ಶೂರತ್ವ ಮಾತ್ರವಾಗಿರದೆ ಅಕ್ರಮ ದಂಧೆಗೆ ಕಡಿವಾಣ ಹಾಕಲು ನಿರಂತರ ಪ್ರಯತ್ನ ನಡೆಸಬೇಕಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
Published by:Latha CG
First published: