ನಾವು ರಜಾದಿನಗಳನ್ನು ಕಳೆಯಲು ಬೆಳಗಾವಿ (Belagavi), ದಾಂಡೇಲಿ (Dandeli) ಮತ್ತು ಜೋಯಿಡಾ (Joida) ಅಂತ ಸ್ಥಳಗಳಿಗೆ ಹೋದರೆ ಅಲ್ಲಿ ನಮಗೆ ನೂರೆಂಟು ಆಕ್ರಮ ರೆಸಾರ್ಟ್ ಗಳು (Illegal Resorts) ಮತ್ತು ಹೋಂ ಸ್ಟೇ ಗಳು (Home Stay)ನೋಡಲು ಸಿಗುತ್ತವೆ. ಪ್ರವಾಸಿಗರಿಗೆ (Tourist) ಅಲ್ಲಿಯೇ ಪ್ರಕೃತಿಯ (Nature) ಮಡಿಲಲ್ಲಿ ಉಳಿದುಕೊಳ್ಳಲು ಮತ್ತು ಆ ಶುದ್ದವಾದ ಗಾಳಿಯನ್ನು ಆಸ್ವಾದಿಸಲು ಈ ಸ್ಥಳಗಳಿಗೆ ಹತ್ತಿರವಾಗಿಯೇ ಈ ರೆಸಾರ್ಟ್ ಗಳು ಮತ್ತು ಹೋಂ ಸ್ಟೇ ಗಳು ಇರುವುದನ್ನು ನಾವು ನೋಡುತ್ತೇವೆ. ಆದರೆ ಈಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಕ್ರಮ ರೆಸಾರ್ಟ್ ಗಳು ಮತ್ತು ಹೋಂ ಸ್ಟೇಗಳು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಿಗೆ (Western Hills) ಅಪಾಯವನ್ನುಂಟು ಮಾಡುವುದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿವೆಯಂತೆ.
ಕಾರವಾರದ ಪ್ರವಾಸೋದ್ಯಮ ಉಪನಿರ್ದೇಶಕರ (ಡಿಡಿಒಟಿ) ಕಚೇರಿಯ ಮೂಲಗಳ ಪ್ರಕಾರ, ಜೋಯಿಡಾ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಹೋಂ ಸ್ಟೇ ಗಳು ಮತ್ತು 14 ರೆಸಾರ್ಟ್ ಗಳು ಕಾರ್ಯ ನಿರ್ವಹಿಸುತ್ತಿವೆ.
ಇಲಾಖೆಯಲ್ಲಿ ನೋಂದಾಯಿಸದ ಹಲವಾರು ಕಾನೂನು ಬಾಹಿರ ಸೌಲಭ್ಯಗಳಿವೆ. ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ಪಾವತಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
500ಕ್ಕೂ ಹೆಚ್ಚು ಹೋಂ ಸ್ಟೇಗಳು
ಜೊಯಿಡಾ ಮತ್ತು ದಾಂಡೇಲಿಯಲ್ಲಿ 500ಕ್ಕೂ ಹೆಚ್ಚು ಹೋಂ ಸ್ಟೇ ಗಳು ಮತ್ತು 45 ರೆಸಾರ್ಟ್ ಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಹಲವಾರು ಹೋಂ ಸ್ಟೇ ಗಳು ನಿಯಮ ಮೀರಿ ಹಣಕ್ಕಾಗಿ ಜನರನ್ನು ತುಂಬಿಸಿಕೊಂಡು ಜನದಟ್ಟಣೆ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಅವರು ಹೇಳುತ್ತಾರೆ.
ಕಾರವಾರದ ಡಿಡಿಒಟಿ ಒದಗಿಸಿದ ಮಾಹಿತಿಯು ಫೆಬ್ರವರಿ ಅಧಿವೇಶನದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ವಿಧಾನ ಪರಿಷತ್ತಿನಲ್ಲಿ ನೀಡಿದ ಲಿಖಿತ ಉತ್ತರಕ್ಕೆ ಹೋಲಿಕೆಯಾಗುತ್ತಿಲ್ಲ.
8 ರೆಸಾರ್ಟ್ಗಳು ಮಾತ್ರ ನೋಂದಣಿ
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಓಲ್ಡ್ ಮ್ಯಾಗಜೀನ್ ಹೌಸ್, ಕಾಳಿ ಮತ್ತು ಅಂಶಿ ಪ್ರಕೃತಿ ಶಿಬಿರಗಳು ಸೇರಿದಂತೆ ಇಲಾಖೆಯಲ್ಲಿ ಕೇವಲ 8 ರೆಸಾರ್ಟ್ ಗಳು ಮಾತ್ರ ನೋಂದಣಿಯಾಗಿವೆ.
"ಈ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ಗಳ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಮತ್ತು ಅಂತಹ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ" ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಈ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಬಗ್ಗೆ ಏನ್ ಹೇಳ್ತಾರೆ ಪ್ರವಾಸೋದ್ಯಮ ಅಧಿಕಾರಿಗಳು?
ಆದಾಗ್ಯೂ, ಪ್ರವಾಸೋದ್ಯಮ ಉಪ ನಿರ್ದೇಶಕರು ಹೋಮ್ ಸ್ಟೇ ಗಳಿಗೆ ಅನುಮತಿ ನೀಡುವ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಸಮಿತಿಯ ಪದನಿಮಿತ್ತ (ಕಾರ್ಯದರ್ಶಿ) ಆಗಿರುತ್ತಾರೆ.
ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇ ಗಳ ಬಗ್ಗೆ ನಮಗೆ ತಿಳಿದಿದೆ ಮತ್ತು ಅವುಗಳನ್ನು ನೋಂದಾಯಿಸಿಕೊಳ್ಳಲು ಈಗಾಗಲೇ ಅವುಗಳ ಮಾಲೀಕರಿಗೆ ನೋಟಿಸ್ ಸಹ ನೀಡಿದ್ದೇವೆ. ಹೆಚ್ಚಿನವರು ನೋಂದಾಯಿಸಿಕೊಳ್ಳಲು ಮುಂದೆ ಬಂದಿಲ್ಲ ಎಂದು ಡಿಡಿಒಟಿ ಬೇಬಿ ಮೊಗರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಶೀಘ್ರದಲ್ಲಿಯೇ ಇದೆಲ್ಲದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಲಿದೆ ಎಂದು ಮೊಗರ್ ಹೇಳಿದರು.
ನಿಯಮಗಳ ಉಲ್ಲಂಘನೆ
ಜೋಯಿಡಾದ ಗಣೇಶಗುಡಿಯ ಮಾನ್ಯತೆ ಪಡೆದ ರೆಸಾರ್ಟ್ ಮಾಲೀಕರು ಮಾತನಾಡಿ, ದಾಂಡೇಲಿ ಮತ್ತು ಜೋಯಿಡಾದಲ್ಲಿ ಹೋಂ ಸ್ಟೇ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಉಲ್ಲಂಘಿಸಿವೆ. ಈ ಪ್ರದೇಶದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಂದರ್ಶಕರಿಗೆ ಪರಿಚಯಿಸುವ ಬದಲು, ಹೋಂ ಸ್ಟೇ ಗಳು ಮದ್ಯವನ್ನು ಪೂರೈಸುವ ಉದ್ಯಮವಾಗಿ ಮಾರ್ಪಟ್ಟಿವೆ.
ಅನೇಕ ಹೋಂ ಸ್ಟೇ ಗಳು ವಿಕೇಂಡ್ ಗಳಲ್ಲಿ 200 ಅತಿಥಿಗಳನ್ನು ತುಂಬಿಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ವಾರ ಟ್ರಕ್ ಲೋಡ್ ಮದ್ಯದ ಬಾಟಲಿಗಳು ಮತ್ತು ಕೋಳಿ ತ್ಯಾಜ್ಯವನ್ನು ಈ ರೆಸಾರ್ಟ್ ಗಳು ವಿಲೇವಾರಿ ಮಾಡುತ್ತಿವೆ ಎಂದು ಮತ್ತೊಂದು ಅಧಿಕೃತ ರೆಸಾರ್ಟ್ ನ ಮಾಲೀಕರು ತಿಳಿಸಿದ್ದಾರೆ. "ಜನದಟ್ಟಣೆ ಮತ್ತು ಈ ರೀತಿಯ ಚಟುವಟಿಕೆಗಳು ಹಸಿರು ಕಾಡುಗಳ ಮೇಲೆ ಪರಿಣಾಮ ಬೀರುತ್ತಿವೆ" ಎಂದು ಅವರು ಹೇಳಿದರು.
ರೆಸಾರ್ಟ್ ಮತ್ತು ಹೋಂ ಸ್ಟೇ ಗಳು ಅರಣ್ಯ ಇಲಾಖೆಯಿಂದ ಅನುಮತಿ ಸಹ ಪಡೆದಿಲ್ವಂತೆ!
ವನ್ಯಜೀವಿ ತಜ್ಞ ಗಿರಿಧರ್ ಕುಲಕರ್ಣಿ ಮಾತನಾಡಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಅನೇಕ ರೆಸಾರ್ಟ್ ಗಳು ಮತ್ತು ಹೋಂ ಸ್ಟೇ ಗಳು ಅರಣ್ಯ ಇಲಾಖೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸಹ ಪಡೆದಿಲ್ಲ ಅಂತ ಹೇಳಿದರು.
ಇದನ್ನೂ ಓದಿ: Uttara Kannada: ಸಂಕಟ ನಿವಾರಿಸುವ ವೆಂಕಟರಮಣ ಇಲ್ಲಿದ್ದಾನೆ ನೋಡಿ!
"ಈ ರೆಸಾರ್ಟ್ ಗಳು ಚಾರಣ, ಪಕ್ಷಿ ವೀಕ್ಷಣೆ, ಪ್ರಕೃತಿ ನಡಿಗೆ, ಜಲಕ್ರೀಡೆ ಮುಂತಾದ ಚಟುವಟಿಕೆಗಳನ್ನು ನೀಡುವುದರಿಂದ, ಅವುಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಬೇಕು. ಮಾಲೀಕರು ಅರಣ್ಯ ವಸಾಹತು ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ರೆಸಾರ್ಟ್ ಮತ್ತು ಹೋಂ ಸ್ಟೇ ಗಳ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಗುತ್ತಿಗೆಗೆ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಹಲವಾರು ನ್ಯಾಯಾಲಯದ ಆದೇಶಗಳು ಸ್ಪಷ್ಟವಾಗಿವೆ ಮತ್ತು ಅರಣ್ಯ ಇಲಾಖೆಯ ಪರವಾಗಿವೆ, ಆದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಗಿರಿಧರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ