ಚಾಮರಾಜನಗರ: ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (BRT Tiger Reserve) ಸ್ಥಳ ಪರಿಶೀಲನೆ ನಡೆಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ- National Tiger Conservation Authority), ಅಭಯಾರಣ್ಯದ ಆವರಣದಲ್ಲಿ ಅಕ್ರಮ ರೆಸಾರ್ಟ್‌ಗಳು (Resorts), ಹೋಂಸ್ಟೇಗಳು (Home Stay), ಲಾಡ್ಜ್‌ಗಳು ಮತ್ತು ಹೋಟೆಲ್‌ಗಳು (Lodge And Hotels) ತಲೆ ಎತ್ತಿವೆ ಎಂದು ವರದಿ ಮಾಡಿದ್ದು, ಅವುಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ. ಅಧಿಕಾರಿಗಳು ಪರಿಸರ ಸಂರಕ್ಷಣಾ ಕಾಯ್ದೆ 1986 ಅನ್ನು ಉಲ್ಲಂಘಿಸಿ ಒಂಬತ್ತು ಹೋಂಸ್ಟೇಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇಲ್ಲಿ ಇರುವುದಾಗಿ ವರದಿ ಮಾಡಿದ್ದಾರೆ.
ಅಕ್ರಮ ರೆಸಾರ್ಟ್, ಹೋಂಸ್ಟೇ, ಲಾಡ್ಜ್‌ಗಳಿಗೆ ಸಂಕಷ್ಟ
ಕಾನೂನಿನ ಅಡಿಯಲ್ಲಿ ಯಾವುದೇ ಅನುಮೋದನೆಯಿಲ್ಲದೆ ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳ ವಾಣಿಜ್ಯ ಕಾರ್ಯಾಚರಣೆಗಳು ಅಧಿಸೂಚಿತ ಬಿಆರ್‌ಟಿ ಹುಲಿ ಸಂರಕ್ಷಿತ ವನ್ಯಜೀವಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಮತ್ತು ಇತರ ಸಂಬಂಧಿತ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ. ಹೀಗಾಗಿ ಅಕ್ರಮವಾಗಿ ಕಟ್ಟಲಾದ ಒಂಬತ್ತು ವಾಣಿಜ್ಯ ಕಟ್ಟಡಗಳಿಗೆ ಈಗ ಸಂಕಷ್ಟ ಶುರುವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಸಮಿತಿಯ ಸಭೆಯನ್ನು ಕರೆಯಲು ಮತ್ತು ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಪ್ರಕರಣವಾರು ವಿಷಯವನ್ನು ಪರಿಶೀಲಿಸಲು ಪ್ರಾಧಿಕಾರವು ಶಿಫಾರಸು ಮಾಡಿದೆ.
ಕಾರ್ಯಕರ್ತ ಗಿರಿಧರ್ ಕುಲಕರ್ಣಿ ದೂರಿನನ್ವಯ ಸ್ಥಳಕ್ಕೆ ಭೇಟಿ, ಕ್ರಮ
ಬೆಳಗಾವಿಯ ಸಂರಕ್ಷಣಾ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳ ಹಾವಳಿಯನ್ನು ಉಲ್ಲೇಖಿಸಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಅಕ್ಟೋಬರ್‌ನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ರಾಜೇಂದ್ರ ಜಿ ಗರವಾಡ ಅವರು ಬೆಂಗಳೂರಿನಲ್ಲಿರುವ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಮೂರು ದಿನದ ಭೇಟಿ ಮತ್ತು ಪರಿಶೀಲನೆ
ಈ ದೂರಿನನ್ವಯ ಎನ್‌ಟಿಸಿಎ ನವೆಂಬರ್‌ನಲ್ಲಿ ಮೂರು ದಿನಗಳ ಕಾಲ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಅರಣ್ಯ ಸಹಾಯಕ ಮಹಾನಿರೀಕ್ಷಕ ಹರಿಣಿ ವೇಣುಗೋಪಾಲ್ ಅವರು ರಾಜ್ಯ ಅರಣ್ಯಾಧಿಕಾರಿಗಳೊಂದಿಗೆ ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ನಂತರ ಭೇಟಿಯ ವಿವರವಾದ ವರದಿಗಳನ್ನು ಸಲ್ಲಿಸಿದ್ದಾರೆ.
ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಏನಿದೆ?
"ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲ್ಲಾ ಈ ಹೋಮ್ ಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು ಅರಣ್ಯದ ಆವರಣದಲ್ಲಿ ಬರುತ್ತವೆ ಮತ್ತು ಬಿಆರ್‌ಟಿ ಹಿಲ್ಸ್ ವನ್ಯಜೀವಿ ಅಭಯಾರಣ್ಯದ ಅಧಿಸೂಚಿತ ಪರಿಸರ-ಸೂಕ್ಷ್ಮ ವಲಯದ ಭಾಗವಾಗಿದೆ" ಎಂದು ವರದಿ ಹೇಳಿದೆ.
ಈ ಉದ್ಯಮಗಳು ತಲೆಎತ್ತಿರುವ ಪ್ರದೇಶವು ಅತ್ಯಂತ ಪ್ರಮುಖವಾದ ಆನೆಗಳ ಆವಾಸಸ್ಥಾನವಾಗಿದೆ ಮತ್ತು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿದೆ.
ಇದನ್ನೂ ಓದಿ: Moral Policing: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪ್ರಯಾಣ; ಬಸ್ ತಡೆದು ನೈತಿಕ ಪೊಲೀಸ್ಗಿರಿ
ಅನುಮತಿ ಪಡೆಯದ ಮಾಲೀಕರು
"ಆನೆಗಳು ಮತ್ತು ಅದರ ಆವಾಸಸ್ಥಾನಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಹಲವಾರು ನಿರ್ದೇಶನಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಸಮಿತಿಯು ವಿಷಯವನ್ನು ಪರಿಶೀಲಿಸುತ್ತದೆ," ಎಂದು ವರದಿ ಹೇಳಿದೆ.
ಅಷ್ಟೇ ಅಲ್ಲ ಈ ರೆಸಾರ್ಟ್‌ಗಳು ಪ್ರವಾಸೋದ್ಯಮ ಇಲಾಖೆಯ ಅನುಮತಿಯನ್ನು ಪಡೆದಿಲ್ಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸಹ ಪಡೆದಿಲ್ಲ ಎಂದು ವರದಿಗಳು ಹೇಳಿವೆ.
ಉಲ್ಲಂಘನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಆನೆಗಳ ಪ್ರಮುಖ ಆವಾಸಸ್ಥಾನವಾಗಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶವನ್ನು ರಕ್ಷಿಸಲು ಸರ್ಕಾರವು ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಉಲ್ಲಂಘನೆಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಹರಿಣಿ ಕುಲಕರ್ಣಿ ಒತ್ತಾಯಿಸಿದ್ದಾರೆ.
ಕಾನೂನು ಏನು ಹೇಳುತ್ತದೆ?
ವನ್ಯಜೀವಿ (ಸಂರಕ್ಷಣೆ) ಕಾಯಿದೆ 1972 ರ ಸೆಕ್ಷನ್ 33 (ಎ) "ನ್ಯಾಷನಲ್ ಬೋರ್ಡ್ [ವನ್ಯಜೀವಿಗಳಿಗೆ] ಪೂರ್ವಾನುಮತಿ ಹೊರತುಪಡಿಸಿ ಯಾವುದೇ ವಾಣಿಜ್ಯ ಪ್ರವಾಸಿ ವಸತಿಗೃಹಗಳು, ಹೋಟೆಲ್‌ಗಳು, ಪ್ರಾಣಿಸಂಗ್ರಹಾಲಯಗಳು ಮತ್ತು ಸಫಾರಿ ಪಾರ್ಕ್‌ಗಳ ನಿರ್ಮಾಣವನ್ನು ಅಭಯಾರಣ್ಯದೊಳಗೆ ಕೈಗೊಳ್ಳಲಾಗುವುದಿಲ್ಲ ಎಂದು ಕಾನೂನುಗಳು ಹೇಳುತ್ತವೆ.
ಇದನ್ನೂ ಓದಿ: Moral Policing: ಹೆಣ್ಣು-ಗಂಡು ಜೊತೆಗೆ ಕೂರೋ ಹಾಗೂ ಇಲ್ವಾ? ನೈತಿಕ ಪೊಲೀಸ್ಗಿರಿಗೆ ತಕ್ಕಪಾಠ ಕಲಿಸಿದ ಕೇರಳ ವಿದ್ಯಾರ್ಥಿಗಳು
ಇದರಾಚೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಲಾಗಿರುವ ಈ ಒಂಬತ್ತು ಹೋಟೆಲ್, ರೆಸಾರ್ಟ್‌ಗಳಿಗೆ ಈಗ ಕಾನೂನಿನ ಸಂಕಷ್ಟ ಶುರುವಾಗಿದ್ದು, ಪ್ರಾಧಿಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ