ಮಂಡ್ಯ (ಜ.27): ಶಿವಮೊಗ್ಗ ಸ್ಪೋಟ ಪ್ರಕರಣ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಗೆ ಕೆಆರ್ಎಸ್ ಅಣೆಕಟ್ಟಿಗೆ ಕಂಟಕವಾಗುವ ಸಾಧ್ಯತೆ ಇದೆ. ಇದೇ ಹಿನ್ನಲೆ ಈ ಬೇಬಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಿದೆ. ಬೇಬಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆಗೆ ಅಕ್ರಮವಾಗಿ ಸ್ಫೋಟಕಗಳು ಬಳಕೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ. ಈ ಹಿನ್ನಲೆ ಸರ್ಕಾರ ಈ ಪ್ರದೇಶಗಳಲ್ಲಿನ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡಲು ಕಟ್ಟುನಿಟ್ಟಿನ ಸೂಚ ನೆ ನೀಡಿದೆ. ಸರ್ಕಾರದ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾಡಳಿತ ಇದೀಗ ಕ್ರಮಕ್ಕೆ ಮುಂದಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಾಂಡವಪುರ ತಾಲೂಕಿನ ಬೇಬಿ ಬೆ ಟ್ಟದ ವ್ಯಾಪ್ತಿಯಲ್ಲಿ ಕೈ ಕುಳಿ ಸೇರಿದಂತೆ ಎಲ್ಲಾ ರೀತಿಯ ಕಲ್ಲುಗಣಿಗಾರಿಕೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ಮಾಡಿ ಎಸಿ ಶಿವಾನಂದ್ ಆದೇಶಿಸಿದ್ದಾರೆ. ಅಲ್ಲದೇ, ಬೇಬಿ ಬೆಟ್ಟದ ಸುತ್ತಲೂ ಪೊಲೀಸ್ ಭದ್ರತೆ ನೀಡಲಾಗಿದೆ.
ಬೇಬಿ ಬೆಟ್ಟದಲ್ಲಿ 60 ಕ್ಕೂ ಕಲ್ಲುಗಣಿಗಾರಿಕೆ ಘಟಕಗಳಿದ್ದು ಬಹುತೇಕವು ಅಕ್ರಮವಾಗಿ ಕಾರ್ಯ ನಿರ್ವ ಹಿಸುತ್ತಿವೆ. ಈ ಹಿಂದೆ ಜಿಲ್ಲಾಡಳಿತ ಈ ಕಲ್ಲುಗಣಿಗಾರಿಕೆ ನಿಷೇಧ ಹೇರಿತ್ತು. ಬಳಿಕ ಕೆಲ ವಿನಾಯಿತಿ ನೀಡಿ, ಕ್ವಾರಿಗಳಿಂದ ಕಲ್ಲು ತೆಗೆಯುವುದನ್ನು ಮಾತ್ರ ನಿಷೇಧಿಸಲಾಗಿತ್ತು. ಹೊರಗಿನಿಂದ ಕಲ್ಲು ತಂದು ಕ್ರಷರ್ (ಕಲ್ಲುಪುಡಿ) ಘಟಕ ನಡೆಸಲು ಅವಕಾಶ ನೀಡಲಾಗಿತ್ತು ಆದರೆ, ಈಗ ಬೇಬಿ ಬೆಟ್ಟದಲ್ಲೇ ರಾತ್ರಿ ವೇಳೆ ಗಣಿ ಮಾಲೀಕರು ಬಂಡೆ ಸ್ಪೋಟ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಹೋರಾಟಗಾರು ದೂರು ಸಹ ನೀಡಿದ್ದಾರೆ. ಈಗ ಶಿವಮೊಗ್ಗ ಸ್ಪೋಟ ಪ್ರಕರಣದ ಬಳಿಕ ಎಚ್ಚೆತ್ತ ಅಧಿಕಾರಿಗಳು ಪ್ರದೇಶದ ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆಯನ್ನು ಸ್ಥಗಿತಕ್ಕೆ ಮುಂದಾಗಿದ್ದಾರೆ.
ಇನ್ನು ಈ ಭಾಗದಲ್ಲಿ ನಿಷೇಧಾಜ್ಞೆ ಹೇರಲಾಗಿದ್ರು, ಇಲ್ಲಿನ ಪ್ರಭಾವಿ ಕಲ್ಲು ಗಣಿ ಮಾಲೀಕರು ಕದ್ದು ಮುಚ್ಚಿ ಅಕ್ರಮ ವಾಗಿ ರಾತ್ರಿ ವೇಳೆ ಮತ್ತು ನಿರ್ಜನ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆ. ಇಂತಹ ಅಕ್ರಮಗಳ ಪತ್ತೆಗಾಗಿ ಬೇಬಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಡ್ರೋಣ್ ಕ್ಯಾ ಮರ ಮೂಲಕ ನಿಗಾ ಇಡಲು ಮುಂದಾಗಲಾಗಿದೆ.
ಇದನ್ನು ಓದಿ: ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್ನಲ್ಲಿ ಚಿಂತನೆ
ಇದರ ಮಧ್ಯೆ ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಪಾಂಡವಪುರ ತಾಲೂಕಿನ ವೃತ್ತ ನಿರೀಕ್ಷಕ ಪ್ರಭಾಕರ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪೊಲೀಸ್ ಅಧಿಕಾರಿ ಇಲ್ಲಿನ ಪ್ರಭಾವಿ ಕಲ್ಲುಗಣಿಗಾರಿಕೆಯ ಮಾಲೀಕರ ಜೊತೆ ಸೇರಿಕೊಂಡು ಕುಮ್ಮಕ್ಕು ನೀಡುತ್ತಿದ್ದಾರೆ. ಈತನನ್ನು ಸರ್ಕಾರ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಈ ಕುರಿತಾಗಿ ನಾನು ಸದನ ದಲ್ಲಿ ಮಾತನಾಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಶಿವಮೊಗ್ಗದ ಸ್ಫೋಟ ಪ್ರಕರಣದಿಂದ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಜಿಲ್ಲೆಯ ಜೀವನಾಡಿ ಕೆಆರ್ಎಸ್ ರಕ್ಷಣೆ ಮಾಡುವಂತೆ ಒತ್ತಾಯ ಮಾಡಿದ ರೈತರ ಸಂಘಟನೆಗಳ ಹೋರಾಟಕ್ಕೆ ಮಣಿದಿದೆ. ಜೊತೆಗೆ ಸಂಪೂರ್ಣವಾಗಿ ಕೆಆರ್ಎಸ್ ಡ್ಯಾಂ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಶಾಶ್ಚತವಾಗಿ ಗಣಿಕಾರಿಕೆ ನಿಷೇಧ ಹೇರುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ