ಚಾಮರಾಜನಗರ (ಅಕ್ಟೋಬರ್ 20): ಚಾಮರಾಜನಗರ ಜಿಲ್ಲೆ ಅಕ್ರಮ ಗಣಿಗಾರಿಕೆಯ ಸದ್ದು ಆಗಾಗ್ಗೆ ಕೇಳಿ ಬರುತ್ತಲೆ ಇದೆ. ಅನಧಿಕೃತ ಗಣಗಾರಿಕೆ ನಡೆಸಿ ಸರ್ಕಾರಕ್ಕೆ ರಾಜಧನ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಚಾಮರಾಜನಗರ ತಾಲೂಕು ಯಾಲಕ್ಕೂರಿನ ಬಳಿ ಗಣಿಗಾರಿಕೆಗಾಗಿ ಸರ್ಕಾರಿ ಓಣಿಯನ್ನೆ ಕಬಳಿಸಿರುವುದು ಅಧಿಕಾರಿಗಳು ನಡೆಸಿರುವ ಸರ್ವೆಯಿಂದ ದೃಢಪಟ್ಟಿದೆ. ಗ್ರಾಮಸ್ಥರು ಕೊಟ್ಟ ದೂರಿನ ಮೇರೆಗೆ ಸರ್ವೆ ನಡೆಸಿರುವ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನೊಂದೆಡೆ ಪಟ್ಟಾ ಭೂಮಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಅಕ್ರಮ ಗಣಿಗಾರಿಕೆ ನಡೆಸಲಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ 7 ಕೋಟಿ 44 ಲಕ್ಷ ರೂಪಾಯಿ ದಂಡ ವಿಧಿಸಿ ಒಂದು ವರ್ಷ ಕಳೆದರೂ ದಂಡ ಪಾವತಿ ಮಾಡದೆ ಮತ್ತೆ ಅದೇ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಕರಿಕಲ್ಲು ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನ ವಂಚಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದ ಬಳಿ ಎಗ್ಗಿಲ್ಲದೆ ಕಪ್ಪುಶಿಲೆಯನ್ನು ಲೂಟಿ ಮಾಡಲಾಗುತ್ತಿದೆ. ಜಿಲ್ಲೆಯ ಭೂಗರ್ಭದಲ್ಲಿರುವ ಕಪ್ಪು ಕಲ್ಲಿಗೆ ಜಪಾನ್ ಸೇರಿದಂತೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹಾಗಾಗಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಯಾಲಕ್ಕೂರು ಗ್ರಾಮದಲ್ಲಿ ಸರ್ವೆ ನಂಬರ್ 60/2 ರಲ್ಲಿ ಗಣಿಗಾರಿಕೆ ಅವಕಾಶ ಪಡೆದು ಇದರ ಮಗ್ಗುಲಲ್ಲೇ ಇರುವ ಯಾಲಕ್ಕೂರು ಹಾಗೂ ತೊರವಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಸರ್ಕಾರಿ ಓಣಿಯನ್ನೆ ಕಬಳಿಸಿ ಗಣಿಗಾರಿಕೆ ನಡೆಸಲಾಗಿದೆ. ಇಷ್ಟೇ ಅಲ್ಲದೆ 60/3 ರಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕೋಟ್ಯಂತರ ರೂಪಾಯಿ ರಾಜಧನ ವಂಚಿಸಲಾಗಿದೆ.
ಸರ್ವೆ ನಂಬರ್ 60/3 ರಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ ನಡೆಸಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದ್ದು, 2019ರಲ್ಲೇ 7ಕೋಟಿ 44 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ದಂಡ ಪಾವತಿ ಮಾಡದೆ ಅದೇ ಜಾಗದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮತ್ತೆ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನ ವಂಚಿಸಲಾಗಿದೆ. ದಂಡ ತಪ್ಪಿಸಿಕೊಳ್ಳಲು ಗಣಿಮಾಲೀಕರು ಮಂತ್ರಿಗಳ ಮೊರೆ ಹೋಗಿದ್ದಾರೆ.
ಬಿಜೆಪಿ ಸರ್ಕಾರ ಬಿದ್ದೋದ್ರೆ ನಾವು ಚುನಾವಣೆ ಎದುರಿಸಲು ಸಿದ್ಧ; ಮಾಜಿ ಸಿಎಂ ಸಿದ್ದರಾಮಯ್ಯ
ಇನ್ನೊಂದೆಡೆ ಸರ್ಕಾರಿ ಓಣಿ ಒತ್ತುವರಿಯಾಗಿದ್ದು ತಮ್ಮ ಹೊಲಗದ್ದೆಗಳಿಗೆ ಹೋಗಿ ಬರಲು ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರು ಕೊಟ್ಟ ನಂತರ ಎಚ್ಚೆತ್ತ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂಮಾಪನಾ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ನ್ಯೂಸ್ 18 ಜೊತೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ಅಕ್ರಮ ಗಣಿಗಾರಿಕೆ ಹಾಗು ಸರ್ಕಾರಿ ಓಣಿ ಒತ್ತುವರಿಯಾಗಿರುವ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಕಳೆದ ಹದಿನೈದು ದಿನಗಳಿಂದ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ.
ಸರ್ವೆ ನಂಬರ್ 60/2 ರ ಪಕ್ಕದಲ್ಲಿದ್ದ ಸರ್ಕಾರಿ ಓಣಿ ಹಾಗು ಸರ್ವೆ ನಂಬರ್ 75 ರ ಪಕ್ಕದಲ್ಲಿದ್ದ ಸರ್ಕಾರಿ ಓಣಿ ಒತ್ತುವರಿಯಾಗಿರುವುದು ಕಂಡುಬಂದಿದೆ.ರಲ್ಲಿ ಯಾವುದೇ ರೀತಿಯ ಪರವಾನಗಿ ಪಡೆಯದೆ ಅನಧಿಕೃತ ಗಣಿಗಾರಿಕೆ ನಡೆಸಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದ್ದು ನಿನ್ನೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ