Koppal: ಮುಗಿಲುದ್ದ ನೇಯ್ದರೂ ನೇಕಾರನಿಗೆ ಗೇಣುದ್ದ ಬಟ್ಟೆ ಇಲ್ಲ.. ನೇಕಾರರ ಸ್ಥಿತಿ ಕೇಳೋರಿಲ್ಲ!

ಸರಕಾರ ಖಜಾನೆ ಇಲಾಖೆಯನ್ನು ಡಿಜಿಟಲೀಕರಣ ಮಾಡಿದ ನಂತರ ನೇಕಾರರು ಪಾವತಿಸಿದ ಮಿತವ್ಯಯ ನಿಧಿಯನ್ನು ಸಹ ವಾಪಸ್ಸು ಪಡೆಯಲು ಆಗುತ್ತಿಲ್ಲ. ಮೂರು ವರ್ಷದಿಂದ ನೇಕಾರರು ಮಿತವ್ಯಯ ನಿಧಿಗಾಗಿ ಅಲೆದಾಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಮುಗಿಲುದ್ದ ನೇಯ್ದರೂ ನೇಕಾರನಿಗೆ (Weavers) ಗೇಣುದ್ದ ಬಟ್ಟೆ ಇಲ್ಲ ಎಂಬ ಮಾತು ಇದೆ. ಈ ಮಾತು ಪ್ರಸಿದ್ದ ಇಲಕಲ್ ಸೀರೆ ನೇಯುವ ನೇಕಾರರ (Ilkal Saree Weavers) ಸ್ಥಿತಿಯಾಗಿದೆ. ಈ ಮಧ್ಯೆ ಸರಕಾರ ಖಜಾನೆ ಇಲಾಖೆಯನ್ನು ಡಿಜಿಟಲೀಕರಣ (Digitalization) ಮಾಡಿದ ನಂತರ ನೇಕಾರರು ಪಾವತಿಸಿದ ಮಿತವ್ಯಯ ನಿಧಿಯನ್ನು ಸಹ ವಾಪಸ್ಸು ಪಡೆಯಲು ಆಗುತ್ತಿಲ್ಲ. ಮೂರು ವರ್ಷದಿಂದ ನೇಕಾರರು ಮಿತವ್ಯಯ ನಿಧಿಗಾಗಿ ಅಲೆದಾಡುವಂತಾಗಿದೆ. ಸರಕಾರ ನೇಕಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ. ಒಂದು ಕಾಲವಿತ್ತು ಕೈಮಗ್ಗದಲ್ಲಿ ನೇಯ್ದ ಇಲಕಲ್ ಸೀರೆಗಳಿಗೆ ಭಾರಿ ಬೇಡಿಕೆ ಇತ್ತು. ಆಗ ಕೈಮಗ್ಗಗಳದ್ದೇ ಕಾರುಬಾರು ಆಗಿದ್ದರಿಂದ ಕರ್ನಾಟಕ ರಾಜ್ಯದ ಮಟ್ಟಿಗೆ ನೇಕಾರಿಕೆಯೂ ಸಹ ಜನರ ಪ್ರಮುಖ ಉದ್ಯೋಗವಾಗಿತ್ತು. ಈ ಮಧ್ಯೆ ಕೈಮಗ್ಗಗಳ ಬದಲಿ ಈಗ ಯಂತ್ರಗಳು ಆವರಿಸಿವೆ. ಇಲಕಲ್ ಸೀರೆಗಳನ್ನು ಉಟ್ಟುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಲಕಲ್ ಸೀರೆ ಈಗ ಕೇವಲ ಫ್ಯಾಶನ್ ಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಇಲಕಲ್ ಸೀರೆ ನೇಯುಯವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಉದಾಹರಣೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ನೇಕಾರರ ಸಂಖ್ಯೆ ಕಡಿಮೆಯಾಗಿರುವುದು.

ಕೈಮಗ್ಗ ನೇಕಾರರೇ ಇಲ್ಲದಂತೆ ಆಗಬಹುದು

1955 ರಲ್ಲಿ ಸ್ಥಾಪನೆಯಾಗಿರುವ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ಈ ಹಿಂದೆ 600 ಕ್ಕೂ ಅಧಿಕ ಜನ ನೇಕಾರರು ಇದ್ದರು, ಈ ಸಂಘಕ್ಕೆ 1993-94 ರಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ಸಿಕ್ಕಿತ್ತು, ರಾಜ್ಯ ಸರಕಾರವು ಸಹ ಪುರಸ್ಕಾರ ನೀಡಿತ್ತು, ಆದರೆ ಈಗ ನೇಕಾರರಿಗೆ ಪ್ರೋತ್ಸಾಹವಿಲ್ಲದೆ ಇರುವದರಿಂದ ದೋಟಿಹಾಳದಲ್ಲಿ ನೇಕಾರರ ಸಂಖ್ಯೆ ಕೇವಲ 60 ಕ್ಕೆ ಇಳಿಕೆಯಾಗಿದೆ.ಒಂದು ಸೀರೆ ನೇಯಲು ನೇಕಾರನ ಕುಟುಂಬದ ಎಲ್ಲರು ಕೆಲಸ ಮಾಡಿದರೆ ಎರಡು ದಿನ ಬೇಕಾಗುತ್ತದೆ. ಒಂದು ಸೀರೆಗೆ 500-600 ರೂಪಾಯಿ ಮಾತ್ರ ದರ ಸಿಗುತ್ತಿದೆ, ಈ ಮಧ್ಯೆ ಇತ್ತೀಚಿಗೆ ಸೀರೆ ತಯಾರಿಕೆಯ ಕಚ್ಚಾ ಸಾಮಗ್ರಿಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಏರಿಕೆಯಾದ  ಕಚ್ಚಾ ಸಾಮಗ್ರಿಯಿಂದ ಸೀರೆ ತಯಾರಿಸಿ ಕೊಟ್ಟರೂ ಸರಿಯಾದ ದರ ಸಿಗುತ್ತಿಲ್ಲ  ಇದರಿಂದಾಗಿ ನೇಕಾರ ನೇಯ್ಗೆಯ ಉದ್ಯೋಗ ಬಿಟ್ಟು ಬೇರೆ ಉದ್ಯೋಗದತ್ತ ಹೋಗಿದ್ದಾನೆ ಇದರಿಂದಾಗಿ ಬರುವ ದಿನಗಳಲ್ಲಿ ಕೈಮಗ್ಗ ನೇಕಾರರ ಸಂಪೂರ್ಣವಾಗಿ ಇಲ್ಲವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜನವರಿ 14 ರಂದೇ Panchamasali ಸಮುದಾಯದ 2ಎ ಮೀಸಲಾತಿ ಘೋಷಣೆ ಮಾಡ್ತಾರಾ CM Bommai?

ಸರಕಾರದಿಂದ ಸಹಾಯದ ನಿರೀಕ್ಷೆ 

ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ನೇಕಾರಿಕೆ ಮಾಡುವ ಹಲವಾರು ಕುಟುಂಬಗಳಿದ್ದವು. ಹಿಂದೆ ನೇಕಾರರ 11 ಕೈಮಗ್ಗ ನೇಕಾರರ ಸಹಕಾರ ಸಂಘಗಳಿದ್ದವು. ಈಗ ಉಳಿದಿದ್ದು ಕೇವಲ 5 ಅದರಲ್ಲಿ ಈಗ ಚಾಲ್ತಿಯಲ್ಲಿರುವವು ಕೇವಲ 3. ಇನ್ನೂ ನೇಕಾರರ ತಾವು ನೇಯ್ದ ಸೀರೆಯನ್ನು ಬೇರೆ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಾರೆ. ಅಲ್ಲಿಯೂ ಸರಿಯಾದ ದರ ಸಿಗುತ್ತಿಲ್ಲ. ಇನ್ನೂ ಸಹಕಾರ ಸಂಘಗಳಲ್ಲಿ ಮಾರಾಟ ಮಾಡಿದರೆ ಸರಕಾರದಿಂದ ಶೇ 20 ರಿಯಾಯಿತಿ ಹಣವು ನೇಕಾರನಿಗೆ ಸಿಗುತ್ತದೆ, ರಿಯಾಯಿತಿಯನ್ನು ಹೆಚ್ಚಿಸಬೇಕು, ಕಚ್ಚಾ ಸಾಮಗ್ರಿ ಖರೀದಿಸಲು ಸರಕಾರ ಸಹಾಯ ಮಾಡಬೇಕು, ಇಲ್ಲವೇ ಇನ್ನಷ್ಟು ಉತ್ತೇಜನ ನೀಡಿದರೆ ಮಾತ್ರ ನೇಕಾರ ಉಳಿಯಲು ಸಾಧ್ಯವೆಂದು ನೇಕಾರರು ಹೇಳಿದ್ದಾರೆ.ಈ ಮಧ್ಯೆ ನೇಕಾರರ ಭದ್ರತೆಗಾಗಿ ಮಿತವ್ಯಯ ನಿಧಿಯನ್ನು ಸಹಕಾರ ಸಂಘಗಳು ನೇಕಾರರಿಂದ ಪಡೆದು ಜವಳಿ ಇಲಾಖೆಯ ಖಜಾನೆಗೆ ಜಮಾ ಮಾಡುತ್ತಾರೆ.

ಮಿತವ್ಯಯ ನಿಧಿಗಾಗಿ ಪರದಾಟ 

ಪ್ರತಿ ಸೀರೆಗೆ 28 ರೂಪಾಯಿ ನೇಕಾರ, 28 ರೂಪಾಯಿ ಇಲಾಖೆಯಿಂದ ನೇಕಾರರ ಖಾತೆಗೆ ಜಮಾ ಆಗುತ್ತದೆ, ಈ ಹಣವನ್ನು 15 ವರ್ಷಗಳ ನಂತರ ನೇಕಾರ ತನಗೆ ಅವಶ್ಯವಿರುವಾಗ ಮರಳಿ ಪಡೆಯಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಮಿತವ್ಯಯ ನಿಧಿಯನ್ನು ನೇಕಾರ ತೆಗೆದುಕೊಳ್ಳಲು ಆಗುತ್ತಿಲ್ಲ, ಕಾರಣ ಇಲಾಖೆಯಿಂದ ಖಜಾನೆ 1 ರಲ್ಲಿದ್ದ ಹಣವನ್ನು ಖಜಾನೆ 2 ಗೆ ವರ್ಗಾಯಿಸಬೇಕು, ಆದರೆ ಇದು ವಿಳಂಭವಾಗಿರುವುದರಿಂದ ಇಡೀ ರಾಜ್ಯದಲ್ಲಿಯೇ ನೇಕಾರರ ಪಾವತಿಸಿದ ಮಿತವ್ಯಯ ಹಣವನ್ನು ವಾಪಸ್ಸು ಪಡೆಯಲು ಆಗುವುದಿಲ್ಲ, ಕಷ್ಟ ಕಾಲದಲ್ಲಿ ಸಹಾಯವಾಗುವ ಮಿತವ್ಯಯ ಹಣ ಪಡೆಯಲು ನೇಕಾರರು ಪರದಾಡಬೇಕಾಗಿದೆ.

ಕೆ1 ನಿಂದ ಕೆ2 ಗೆ ನೇಕಾರರ ಮಿತವ್ಯಯ ಹಣ ವರ್ಗಾವಣೆಗೆ ಇಲಾಖೆಯು ಇನ್ನೂ ಹಲವಾರು ಫಾರ್ಮೆಟ್ ಗಳನ್ನು ತಯಾರಿಸಿದ್ದರಿಂದ ಈಗ ಹಣ ಪಡೆಯಲು ಆಗುತ್ತಿಲ್ಲ, ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಂದ ಸುಮಾರು 21 ಲಕ್ಷ ರೂಪಾಯಿಯು ಮಿತವ್ಯಯ ಹಣ ಖಜಾನೆಯಲ್ಲಿದೆ, ಅದು ನೇಕಾರರ ಕೈಗೆ ಸೇರುತ್ತಿಲ್ಲ. ಈ ಕುರಿತ ಸರಕಾರ ಬೇಗನೆ ಕ್ರಮ ಕೈಗೊಳ್ಳಬೇಕು ನೇಕಾರರ ನೆರವಿಗೆ ಸರಕಾರ ಬರಬೇಕೆಂದು ಆಗ್ರಹಿಸಿದ್ದಾರೆ.
Published by:Kavya V
First published: