ಸಾಮೂಹಿಕ ಹಲ್ಲೆ ಪ್ರಕರಣ; ತಬ್ರೇಜ್ ಅನ್ಸಾರಿ ಸಾವಿನ ಮರುತನಿಖೆಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಐಐಎಂ ತಂಡ

ಜೂನ್ ತಿಂಗಳಲ್ಲಿ ತಬ್ರೇಜ್ ಅನ್ಸಾರಿ ಎಂಬ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಆತನ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ ವಿಡಿಯೋ ಸಹ ವೈರಲ್ ಆಗಿತ್ತು. ಪೊಲೀಸರು ನಂತರ ಆತನನ್ನು ರಕ್ಷಿಸಿ, ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದರು.

Sushma Chakre | news18-kannada
Updated:September 17, 2019, 12:58 PM IST
ಸಾಮೂಹಿಕ ಹಲ್ಲೆ ಪ್ರಕರಣ; ತಬ್ರೇಜ್ ಅನ್ಸಾರಿ ಸಾವಿನ ಮರುತನಿಖೆಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಐಐಎಂ ತಂಡ
ಹಿಂದು ಸಂಘಟಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಯುವಕ ಅನ್ಸಾರಿ.
  • Share this:
ಬೆಂಗಳೂರು (ಸೆ. 17): ಜಾರ್ಖಂಡ್​ನಲ್ಲಿ ತಬ್ರೇಜ್ ಅನ್ಸಾರಿ ಎಂಬ 24 ವರ್ಷದ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಜನರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆ ಯುವಕ ಸಾವನ್ನಪ್ಪಿದ್ದ. ಈ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ, ಈ ಬಗ್ಗೆ ಮರುತನಿಖೆ ನಡೆಸುವಂತೆ ಬೆಂಗಳೂರು ಐಐಎಂ ತಂಡವೊಂದು ಪ್ರಧಾನಿಗೆ ಪತ್ರ ಬರೆದಿದೆ. 

ತಬ್ರೇಜ್ ಅನ್ಸಾರಿ ಮರಣೋತ್ತರ ಪರೀಕ್ಷೆಯಲ್ಲಿ ಆತ ಹೃದಯಾಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿತ್ತು. ಬಳಿಕ, ಅದೇ ವೈದ್ಯರು ಹೃದಯಾಘಾತಕ್ಕೂ ಮೊದಲು ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆ ಪೆಟ್ಟಿನಿಂದ ಆತನಿಗೆ ಹೃದಯಾಘಾತ ಆಗಿರಬಹುದು ಎಂದು ಹೇಳಿದ್ದರು. ತೀವ್ರ ಕುತೂಹಲ ಮತ್ತು ಗೊಂದಲಕ್ಕೆ ಕಾರಣವಾಗಿದ್ದ ಈ ಪ್ರಕರಣದ ಕುರಿತು ಹೊಸತಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ನ ಒಂದು ತಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಕಳೆದ ವಾರ ಜಾರ್ಖಂಡ್​ ಪೊಲೀಸರು ಈ ಪ್ರಕರಣವನ್ನು ಕೈಬಿಟ್ಟಿದ್ದರು. ತಬ್ರೇಜ್ ಅನ್ಸಾರಿಯನ್ನು ಯಾರೂ ಕೊಲೆ ಮಾಡಿಲ್ಲ, ಇದೊಂದು ಆಕಸ್ಮಿಕ ಸಾವು ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧದ ಕೇಸ್ ಕ್ಲೋಸ್ ಮಾಡಿದ್ದರು. ತನಿಖೆ ಮತ್ತು ವೈದ್ಯಕೀಯ ವರದಿಗಳನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಹೆಲ್ಮೆಟ್​​ ಹಾಕದಿದ್ದರೂ ಈತನಿಗೆ ದಂಡ ಹಾಕಲು ಸಾಧ್ಯವಿಲ್ಲ; ಯಾಕೆ ಗೊತ್ತೇ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಐಐಎಂನ 16 ಅಧ್ಯಾಪಕರು, 85 ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 'ಜಾರ್ಖಂಡ್​ನಲ್ಲಿ ಸಾಮೂಹಿಕ ಹಲ್ಲೆಗೊಳಗಾಗಿ ಸಾವನ್ನಪ್ಪಿದ ತಬ್ರೇಜ್ ಅನ್ಸಾರಿ ಪ್ರಕರಣದ ತನಿಖೆಯನ್ನು ನಡೆಸಿರುವ ಪೊಲೀಸರ ಕಾರ್ಯವೈಖರಿ ಕಂಡು ಬೆಂಗಳೂರು ಐಐಎಂನ ಪ್ರಾಧ್ಯಾಪಕರು, ವಿದ್ಯಾರ್ಥಿಗಳಾದ ನಮಗೆ ಆಘಾತವಾಗಿದೆ. ತಾವು ಆದಷ್ಟು ಶೀಘ್ರದಲ್ಲಿ ಜಾರ್ಖಂಡ್​ ಸರ್ಕಾರಕ್ಕೆ ಈ ಪ್ರಕರಣದ ಬಗ್ಗೆ ಹೊಸತಾಗಿ ತನಿಖೆ ನಡೆಸಲು ಸೂಚನೆ ನೀಡಬೇಕು. ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಎಲ್ಲ ರಾಜ್ಯಗಳ ಸಾಂವಿಧಾನಿಕ ಕರ್ತವ್ಯ' ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

'ತಬ್ರೇಜ್​ ಅನ್ಸಾರಿ ಹತ್ಯೆ ಪ್ರಕರಣಕ್ಕೆ ಜಾರ್ಖಂಡ್​ ಪೊಲೀಸರು ಸರಿಯಾದ ನ್ಯಾಯ ಒದಗಿಸಿಲ್ಲ ಎಂದು ನಮಗೆ ಅನಿಸಿದೆ. ಈ ಹಿನ್ನೆಲೆಯಲ್ಲಿ ಸಮಾನಮನಸ್ಕರು ಸೇರಿ ಪ್ರಧಾನಿಗೆ ಪತ್ರ ಬರೆದಿದ್ದೇವೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗದಿದ್ದರೆ ಅಮಾಯಕರು ಸಾಯುತ್ತಲೇ ಇರುತ್ತಾರೆ. ಹೀಗಾಗಿ, ಈ ಪ್ರಕರಣದ ಮರುತನಿಖೆಯಾಗಬೇಕು' ಎಂದು ಐಐಎಂಬಿ ಅಧ್ಯಾಪಕರು ಹೇಳಿದ್ದಾರೆ.

ಜಾರ್ಖಂಡ್​ ಸಾಮೂಹಿಕ ಹಲ್ಲೆ ಕೊಲೆ ಪ್ರಕರಣ; ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವ ಮೃತ ಅನ್ಸಾರಿ ಪತ್ನಿಏನಿದು ಪ್ರಕರಣ?: 
ಜೂನ್ ತಿಂಗಳಲ್ಲಿ ತಬ್ರೇಜ್ ಅನ್ಸಾರಿ ಎಂಬ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಆತನ ಬಳಿ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ ವಿಡಿಯೋ ಸಹ ವೈರಲ್ ಆಗಿತ್ತು. ಪೊಲೀಸರು ನಂತರ ಆತನನ್ನು ರಕ್ಷಿಸಿ, ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದರು. ಮಾರಣಾಂತಿಕ ಗಾಯಗಳಿಂದ ಬಳಲುತ್ತಿದ್ದ ಆತ ತನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಬೇಡಿಕೊಂಡರೂ ಪೊಲಿಸರು ತಕ್ಷಣ ಆತನಿಗೆ ಚಿಕಿತ್ಸೆ ಕೊಡಿಸಿರಲಿಲ್ಲ. 4 ದಿನದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಹಿಂದು ಸಂಘಟನೆಯ 11 ಜನರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿತ್ತು.

(ವರದಿ: ಎರಾಂ ಅಘಾ)

First published: September 17, 2019, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading