P Srinivas: ಸ್ಮಾರಕವಾಯಿತು ಹುತಾತ್ಮ ಅರಣ್ಯಾಧಿಕಾರಿಯ ಜೀಪ್; ಕರ್ತವ್ಯ ನಿಷ್ಠೆ ಮೆರೆದ ಐಎಫ್ಎಸ್ ಅಧಿಕಾರಿಗೆ ಅರಣ್ಯ ಇಲಾಖೆ ವಿಶಿಷ್ಟ ಗೌರವ

1986 ರಲ್ಲಿ  ಬೆಂಗಳೂರಿನಲ್ಲಿ ಸಾರ್ಕ‍್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ಕಾಡುಗಳ್ಳ ವೀರಪ್ಪನ್‌ನ್ನು ಅಂದು ಚಾಮರಾಜನಗರ ಉಪ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ  ಪಿ. ಶ್ರೀನಿವಾಸ್ ಮೊದಲ ಬಾರಿಗೆ ಬಂಧಿಸಿದ್ದರು

ಅಧಿಕಾರಿ ಬಳಸುತ್ತಿದ್ದ ಜೀಪ್​

ಅಧಿಕಾರಿ ಬಳಸುತ್ತಿದ್ದ ಜೀಪ್​

  • Share this:
ಚಾಮರಾಜನಗರ (ಮೇ.3) ಕರ್ತವ್ಯ ನಿಷ್ಠೆ ಹಾಗು ಪ್ರಾಮಾಣಿಕತೆಗೆ ಹೆಸರಾಗಿದ್ದ ಅರಣ್ಯಾಧಿಕಾರಿಯೊಬ್ಬರು ಬಳಸುತ್ತಿದ್ದ  ಜೀಪ್ ನ್ನು (Jeep) ಸ್ಮಾರಕ ಮಾಡಿದ್ದಲ್ಲದೆ  ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡುವ ಮೂಲಕ ಹುತಾತ್ಮ ಅರಣ್ಯಾಧಿಕಾರಿಗೆ ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ಗೌರವ ಸಲ್ಲಿಸಲಾಗಿದೆ. ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಕಾಡುಗಳ್ಳ ವೀರಪ್ಪನ್ ನಿಂದ (Veerappan) ಹತರಾದ ಹಿರಿಯ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಅವರು ಚಲಾಯಿಸುತ್ತಿದ್ದ ಜೀಪನ್ನು  ಸ್ಮಾರಕವನ್ನಾಗಿ ಪರಿವರ್ತಿಸಿದ್ದಲ್ಲದೆ, ಅವರಿಗೆ ಸಂಬಂಧಿಸಿದ ದಾಖಲೆಗಳು, ಜೀವನಗಾಥೆ, ಪುಸ್ತಕಗಳು, ಬರಹಗಳು, ಅಪರೂಪದ ಫೋಟೋಗಳನ್ನು ಒಳಗೊಂಡ  ವಸ್ತು ಸಂಗ್ರಹಾಲಯ ಮಾದರಿಯ ಗ್ರಂಥಾಲಯ  ನಿರ್ಮಿಸಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. 

ಅತಿಥಿ ಗೃಹ ನವೀಕರಣೆ

ಪಿ.ಶ್ರೀನಿವಾಸ್ ಅವರ ಬಳಸುತ್ತಿದ್ದ ಜೀಪ್ ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಮಲೆಮಹದೇಶ್ವರ ವನ್ಯಧಾಮದ ಪಾಲಾರ್ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿತ್ತು. ಇದನ್ನು  ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ದುರಸ್ತಿ ಮಾಡಿಸಿ ಇದೀಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಸ್ಮಾರಕವಾಗಿ ಇರಿಸಲಾಗಿದೆ. ಇದೇ ಕಚೇರಿಯ ಆವರಣದಲ್ಲಿರುವ ಅರಣ್ಯ ಇಲಾಖೆಯ ಅತಿಥಿಗೃಹವನ್ನು ನವೀಕರಿಸಿ ಕೀರ್ತಿಚಕ್ರ ಪಿ.ಶ್ರೀನಿವಾಸ್ ಅತಿಥಿಗೃಹ ಎಂದು ನಾಮಕರಣ ಮಾಡಲಾಗಿದೆ.

ಶ್ರೀನಿವಾಸ್​​ ಅವರಿಗೆ ಸೇರಿದ ಎಲ್ಲಾ ವಸ್ತುಗಳ ಸಂಗ್ರಹ

ಪಿ. ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗಬೇಕು ಎಂಬ ದೃಷ್ಟಿಯಿಂದ ಅತಿಥಿ ಗೃಹದ ಮೊದಲ ಮಹಡಿಯಲ್ಲಿ  ಅವರ  ಹೆಸರಿನಲ್ಲಿ ಗ್ರಂಥಾಲಯವನ್ನು ಸಿದ್ದಪಡಿಸಲಾಗಿದ್ದು ಇಲ್ಲಿ ಶ್ರೀನಿವಾಸ್ ಅವರ ವಿವಿಧ ಕಡೆ ಸೇವೆ ಸಲ್ಲಿಸಿದ  ಫೋಟೋಗಳು, , ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂ ನಲ್ಲಿ ಬಡವರಿಗಾಗಿ  ನಿರ್ಮಿಸಿಕೊಟ್ಟ ಮನೆಗಳು, ದೇವಾಲಯ,  ಎಸ್.ಟಿ.ಎಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಹೀಗೆ ಎಲ್ಲಾ ರೀತಿಯ  ಭಾವಚಿತ್ರಗಳು, ಅವರಿಗೆ ಸಂಬಂಧಿಸಿದ ಸಾಹಿತ್ಯ, ಬರಹಗಳು, ದಾಖಲೆಗಳನ್ನು  ಇಲ್ಲಿ ಸಂಗ್ರಹಿಸಿ ಇಡಲಾಗಿದ್ದು ಸಾರ್ವಜನಿಕರಿಗೆ ಹಾgಊ ನಮ್ಮ ಅರಣ್ಯ ಇಲಾಖೆಯ  ನೌಕರರಿಗೆ ಶ್ರೀನಿವಾಸ್ ಅವರ  ಜೀವನ ಚರಿತ್ರೆ ಗೊತ್ತಾಗಬೇಕು, ಆವರ ಅನನ್ಯ ಸೇವೆ ಎಲ್ಲರಿಗು ಪ್ರೇರಣೆಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೇಡುಕೊಂಡಲು ನ್ಯೂಸ್ 18 ಗೆ ತಿಳಿಸಿದರು

ವೀರಪ್ಪನನ್ನು ಮೊದಲು ಬಂಧಿಸಿದ್ದ ಅಧಿಕಾರಿ

1986 ರಲ್ಲಿ  ಬೆಂಗಳೂರಿನಲ್ಲಿ ಸಾರ್ಕ್​​ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ಕಾಡುಗಳ್ಳ ವೀರಪ್ಪನ್‌ನ್ನು ಅಂದು ಚಾಮರಾಜನಗರ ಉಪ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ  ಪಿ.ಶ್ರೀನಿವಾಸ್ ಮೊದಲ ಬಾರಿಗೆ ಬಂಧಿಸಿದ್ದರು.  ನಂತರ ಕೆಲವೇ ದಿನಗಳಲ್ಲಿ ಆತ ಚಾಮರಾಜನಗರ ತಾಲೋಕು ಬೂದಿಪಡಗ ಅರಣ್ಯ ಅತಿಥಿ ಗೃಹದಿಂದ ತಪ್ಪಿಸಿಕೊಂಡು ಹೋಗಿದ್ದ.   ಶ್ರೀನಿವಾಸ್ ಅವರಿಗೆ ಕಾಡುಗಳ್ಳ ವೀರಪ್ಪನ್  ಬಗ್ಗೆ ಇಂಚಿಂಚು ಮಾಹಿತಿ ಇತ್ತು. ಅರಣ್ಯ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀನಿವಾಸ್ ಅವರು ಕಾಡುಗಳ್ಳರ ಹಲವು ಜಾಲಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಸೇವೆಯನ್ನು  ಕಾಡುಗಳ್ಳ ವೀರಪ್ಪನ್ ವಿರುದ್ದದ ಕಾರ್ಯಾಚರಣೆಗೆ  ಬಳಸಿಕೊಳ್ಳಲು ಎಸ್‍.ಟಿ.ಎಫ್ ಗೆ ನಿಯೋಜನೆ ಮಾಡಲಾಗಿತ್ತು.

ಅನೇಕ ಜನರಿಗೆ ಸಹಾಯ ಒದಗಿಸಿದ್ದ ಅಧಿಕಾರಿ

ವೀರಪ್ಪನ್ ವಿರುದ್ದದ ಕಾರ್ಯಾಚರಣೆಗೆ ಆತನ ಹುಟ್ಟೂರು ಗೋಪಿನಾಥಂಗೆ ಆಗಮಿಸಿದ ಶ್ರೀನಿವಾಸ್ ಮೊದಲಿಗೆ ಹಲವು ಸೇವಾ ಕಾರ್ಯಗಳ ಮೂಲಕ ಗ್ರಾಮಸ್ಥರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.  ಗ್ರಾಮದಲ್ಲಿ ಮಾರಿಯಮ್ಮನ್ ದೇವಸ್ಥಾನ ನಿರ್ಮಿಸಿದರು. ( ಈ ದೇವಾಲಯದಲ್ಲಿ ಈಗಲು  ಶ್ರೀನಿವಾಸ್ ಅವರ ಭಾವಚಿತ್ರ ಇಟ್ಟು ಪೂಜಿಸಲಾಗುತ್ತಿದೆ) ಅಲ್ಲದೆ ಒಂದು ಔಷಧಾಲಯ ತೆರೆದು ಅಲ್ಲಿಗೆ ವೀರಪನ್ ಸಹೋದರಿಯನ್ನೇ ನಿಯೋಜಿಸಿ ಗ್ರಾಮಸ್ಥರಿಗೆ  ಆರೋಗ್ಯ ಸೇವೆ ಒದಗಿಸಿದರು.

ಇದನ್ನು ಓದಿ: Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕ

ಕಾಡಿನೊಳಗಿರುವ ಗ್ರಾಮಗಳ ರಸ್ತೆಗಳನ್ನು ದುರಸ್ತಿಪಡಿಸಲು ಶ್ರಮವಹಿಸಿದರು. ಇದಲ್ಲದೆ ಗೋಪಿನಾಥಂನ 40 ಬಡ ಕುಟುಂಬಗಳಿಗೆ ತಮ್ಮ ಸ್ವಂತ ಹಣದಿಂದ ಮನೆ ನಿರ್ಮಿಸಿಕೊಟ್ಟರು. ಬುಡಕಟ್ಟು ಜನರ ಜೀವನ ಸುಧಾರಿಸಲು ಪ್ರಯತ್ನಿಸಿದರು. ಹೀಗೆ ಹಲವಾರು ಜನಪಯೋಗಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿದ್ದರು

ಗಾಂಧಿವಾದಿಯಾಗಿದ್ದ ಅಧಿಕಾರಿ

ಗಾಂಧಿವಾದಿಯಾಗಿದ್ದ ಶ್ರೀನಿವಾಸ್ ಹಿಂಸೆಯ ಮಾರ್ಗ ತುಳಿಯದೆ ಹೇಗಾದರು ಮಾಡಿ ಕಾಡುಗಳ್ಳ ವೀರಪ್ಪನ್  ಶರಣಾಗತಿ ಮಾಡಿಸಬೇಕು ಎಂದು ಸಂಕಲ್ಪ ಮಾಡಿದ್ದರು. ಹಲವು ಬಾರಿ ಪ್ರಯತ್ನಿಸಿದ್ದರು. ಶ್ರೀನಿವಾಸ್ ಅವರು ತನ್ನ ಬಳಿ ಬಂದರೆ ತಾನು ಶರಣಾಗಲು ಸಿದ್ದ ಎಂದು ವೀರಪ್ಪನ್ ಸಂದೇಶ ರವಾನಿಸಿದ್ದ. ಇದನ್ನು ನಂಬಿದ ಶ್ರೀನಿವಾಸ್ ಅವರು 1991 ರ ನವೆಂಬರ್ 10 ರಂದು ವೀರಪ್ಪನ್ ಸಹೋದರ ಅರ್ಜುನನೊಂದಿಗೆ ಕಾಡುಗಳ್ಳ ವೀರಪ್ಪನ್ ಭೇಟಿಯಾಗಲು ತೆರಳಿದರು.

ಇದನ್ನು ಓದಿ: ಕದ್ದ ದೇವರ ತಾಳಿಯನ್ನು ತಪ್ಪು ಕಾಣಿಕೆ ಸಮೇತ ಇಟ್ಟು ಹೋದ ಕಳ್ಳ

ಆದರೆ  ನರಹಂತಕ ಗೋಪಿನಾಥಂ ಬಳಿ ಇರುವ ಎರಕೆಹಳ್ಳ ಎಂಬಲ್ಲಿ ಶ್ರೀನಿವಾಸ್ ಅವರ ಶಿರಚ್ಛೇದನ ಮಾಡಿ  ರುಂಡ ಮುಂಡ ಬೇರ್ಪಡಿಸಿ ಹತ್ಯೆ ಮಾಡಿದ್ದ. ಶಸ್ತ್ರರಹಿತವಾಗಿ  ಹೋಗಿದ್ದ ಶ್ರೀನಿವಾಸ್ ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾಗಿದ್ದರು. ಆದರೆ ಅವರು ದೈಹಿಕವಾಗಿ ಅಗಲಿದರೂ  ಅವರು ಮಾಡಿದ ಸಮಾಜಸುಧಾರಣೆಯ ಕೆಲಸಗಳು  ಜನಪರ ಸೇವೆಗಳು ಸ್ಮರಣೀಯವಾಗಿದ್ದು ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಮರಣೋತ್ತರವಾಗಿ ಕೀರ್ತಿಚಕ್ರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
Published by:Seema R
First published: