ವಿಶ್ವದಲ್ಲಿ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದು ಭಾರತದಿಂದ. ಅದರಲ್ಲಿ ಹೆಚ್ಚು ರಪ್ತುದಾರರು ಇರುವುದು ಗುಜರಾತ್ ರಾಜ್ಯದಲ್ಲಿ. ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿಮಗೆ ತಾಕತ್ತಿದ್ದರೆ ಗೋಮಾಂಸ ರಪ್ತು ಬ್ಯಾನ್ ಮಾಡಿ ಎಂದು ವಿಎಸ್ ಉಗ್ರಪ್ಪ ಸವಾಲ್ ಹಾಕಿದರು.
ಚಿತ್ರದುರ್ಗ (ಡಿ. 11): ಗೋ ಹತ್ಯೆ ನಿಷೇಧ ಕಾನೂನು ತಂದಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿಮಗೆ ಧಮ್, ತಾಕತ್ ಇದ್ದರೆ ಗೋಮಾಂಸ ರಪ್ತು ಬ್ಯಾನ್ ಮಾಡಿ. ಈಗ ನೀವು ಬೊಟ್ಟು ಇಟ್ಟುಕೊಂಡು, ಶಾಲು ಹಾಕಿಕೊಂಡು, ಸಿಹಿ ಹಂಚಿದರೆ ಸಮಸ್ಯೆ ಪರಿಹಾರ ಆಗೋದಿಲ್ಲ ಎಂದು ಚಿತ್ರದುರ್ಗದಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿಎಸ್ ಉಗ್ರಪ್ಪ, ಬಿಜೆಪಿ, ಸರ್ಕಾರ ಅಲ್ಪಸಂಖ್ಯಾತರನ್ನು ಇಕ್ಕಟ್ಟಿಗೆ ಸಿಕ್ಕಿಸಲು ಗೋ ಹತ್ಯೆ ನಿಷೇಧ ತರಲು ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಖುರೇಶಿ ವರ್ಸಸ್ ಉತ್ತರ ಪ್ರದೇಶ, ಗುಜರಾತ್ ಸಂಬಂಧಿಸಿದಂತೆ ಎರಡು ಸುಪ್ರಿಂ ಕೋರ್ಟ್ ತೀರ್ಪು ಆಗಿವೆ. ಎರಡೂ ತೀರ್ಪಲ್ಲಿ ಪ್ರತಿಯೊಬ್ಬ ಮನುಷ್ಯ ಅವನ ವೃತ್ತಿ, ಆಹಾರ ಬಯಸುವುದು ಅವನ ಹಕ್ಕು ಎಂದು ಹೇಳಿದೆ ಎಂದು ಹೆಳಿದ್ದಾರೆ.
ಇನ್ನು, ರಾಜ್ಯದಲ್ಲಿ 1964 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಇದೆ. ಆ ಕಾನೂನಲ್ಲಿ 12 ವರ್ಷದ ಮೇಲಿನ ಎತ್ತು, ಹಸು ಎಮ್ಮೆಯನ್ನ ಮಾಂಸಕ್ಕೆ ಬಳಸಲು ಅವಕಾಶ ಇದೆ ಎಂದು ಸುಪ್ರೀಂ ಹೇಳಿದೆ ಎಂದಿರುವ ಉಗ್ರಪ್ಪ, ವಿಶ್ವದಲ್ಲಿ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದು ಭಾರತದಿಂದ. ಅದರಲ್ಲಿ ಹೆಚ್ಚು ರಪ್ತುದಾರರು ಇರುವುದು ಗುಜರಾತ್ ರಾಜ್ಯದಲ್ಲಿ. ರಫ್ತುದಾರರಲ್ಲಿ ಬಹುಸಂಖ್ಯಾತರು ಇರುವುದು ಅಮಿತ್ ಶಾ ಬೆಂಬಲಿಗರು. ಬಿಜೆಪಿ ಪ್ರಮುಖರದ್ದೇ ಕಸಾಯಿ ಖಾನೆಗಳಿವೆ. ಗೋಹತ್ಯೆ ಕಾನೂನು ತಂದಿದ್ದರಿಂದ ಆರ್ಟಿಕಲ್ 19, 21 ಉಲ್ಲಂಘನೆ ಆಗಿದೆ. ಇದರಿಂದ ಗ್ರಾಮೀಣ ಭಾರತದ ಕೃಷಿ ಆರ್ಥಿಕತೆ ನಾಶ ಆಗಿದೆ. ನಿಮಗೆ ನಿಜಕ್ಕೂ ಬದ್ದತೆ ಇದ್ದರೆ ಬೀಫ್ ರಪ್ತು ಮಾಡುವುದನ್ನು ಬ್ಯಾನ್ ಮಾಡಿ. ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿಮಗೆ ತಾಕತ್ತಿದ್ದರೆ ಗೋಮಾಂಸ ರಪ್ತು ಬ್ಯಾನ್ ಮಾಡಿ ಎಂದು ಸವಾಲ್ ಹಾಕಿದರು.
ಕಾಂಗ್ರೆಸ್ಗಿಂತ ಬಿಜೆಪಿ ಬೆಟರ್ ಎಂದಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಎಸ್ ಉಗ್ರಪ್ಪ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಿಂದ ಇಳಿಯುವಾಗ ಅವಿಶ್ವಾಸ ನಿರ್ಣಯ ಸಂಧರ್ಭದಲ್ಲಿ ಏನು ಭಾಷಣ ಮಾಡಿದ್ದರು? ಅವತ್ತು ಆಪರೇಷನ್ ಕಮಲಕ್ಕೆ ಬಿಎಸ್ ಯಡಿಯೂರಪ್ಪ, ಬಿಜೆಪಿ ಕಾರಣ ಎಂದು ಹೇಳಿದ್ದರು. ಅವರ ತಂದೆಯವರನ್ನು 48 ಎಂಪಿ ಸ್ಥಾನಗಳು ಇದ್ದರೂ ಸಹ 146 ಸಂಸದರನ್ನು ಇಟ್ಟುಕೊಂಡ ನಾವು ಬೆಂಬಲ ನೀಡಿ ಪ್ರಧಾನ ಮಂತ್ರಿ ಮಾಡಿದ್ದೆವು. ಆಗ ಚೆನ್ನಾಗಿದ್ದ ಕಾಂಗ್ರೆಸ್ ಈಗ ಅವರಿಗೆ ಸರಿಯಿಲ್ಲ ಎನಿಸುತ್ತಿದೆ ಎಂದು ವಿಎಸ್ ಉಗ್ರಪ್ಪವ್ಯಂಗ್ಯವಾಡಿದ್ದಾರೆ.
(ವರದಿ: ವಿನಾಯಕ ತೊಡರನಾಳ್)
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ