ಚಿಕ್ಕಮಗಳೂರು: ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರಿಗೆ ದಾಖಲೆ ಬೇಕಿದ್ದರೆ ನಾನೇ ಕೊಡುತ್ತೇನೆ. ಅವರು ಅಲ್ಲಿಯವರೆಗೂ ಯಾಕೆ ಹೋದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಗಿ ಹೇಳಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದ ಎಸ್.ಆರ್. ಹಿರೇಮಠ ಅವರು ಇಂದು ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಗೆ ತೆರಳಿದ್ದಾಗ ಕುಮಾರಸ್ವಾಮಿ ಬೆಂಬಲಿಗರೆನ್ನಲಾದ ವ್ಯಕ್ತಿಗಳು ಹಿರೇಮಠ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಈ ವಿಚಾರವಾಗಿ ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, 1984-85 ರಲ್ಲಿ ಆ ಭೂಮಿಯನ್ನು ಖರೀದಿ ಮಾಡಿದ್ದೇನೆ. ರಾಜಕಾರಣಕ್ಕೆ ಬರುವ ಮುನ್ನವೇ 35 ವರ್ಷಗಳ ಹಿಂದಿನ ವಿಚಾರ ಅದು. 35 ವರ್ಷಗಳ ಹಿಂದಿನ ವಿಚಾರವನ್ನೇ ಹಿಡಿದುಕೊಂಡು ಅಲ್ಲಾಡಿಸುತ್ತಿದ್ದಾರೆ. ಹಿರೇಮಠ್ ಅವರಾಗಲಿ, ರವಿಕೃಷ್ಣಾ ರೆಡ್ಡಿಗಾಗಲಿ ಎಲ್ಲಾ ವಿವರಗಳನ್ನು ಕೊಡಲು ನಾನು ಸಿದ್ಧನಾಗಿದ್ದೇನೆ. ಪಾಪ, ಅಷ್ಟೊಂದು ಶ್ರಮ ಪಟ್ಟುಕೊಂಡು ಯಾಕೆ ಅಲ್ಲಿಗೆ ಹೋದ್ರು ಎಂದು ಮಾರ್ಮಿಕವಾಗಿ ಹೇಳಿದರು.
ಸಿಎಂ ಬಿಎಸ್ವೈ ನಿವೃತ್ತಿ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರವಾಗಿ ಮಾತನಾಡಿದ ಎಚ್ಡಿಕೆ, ಪ್ರಭಾಕರ್ ಭಟ್ ಮಂಗಳೂರು ಬಿಟ್ಟು, ರಾಜ್ಯವನ್ನೇ ಸುತ್ತೋಕೆ ಶುರು ಮಾಡಿದ್ದಾರೆ. ಅವರೇ ಈಗ ಪ್ರಮುಖರಾಗಿದ್ದಾರೆ. ಅವರ ಹೇಳಿಕೆ ಗಮನಿಸಿದ್ದೇನೆ. ಅವರ ಪಕ್ಷದಲ್ಲಿ ಏನೇನು ತೀರ್ಮಾನ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಕ್ಕೆ ನಾನು ಹೋಗೋದಿಲ್ಲ ಎಂದು ಹೇಳಿದರು.
ಇದನ್ನು ಓದಿ: ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದ ಎಸ್.ಆರ್. ಹಿರೇಮಠ ಮೇಲೆ ಹಲ್ಲೆ ಯತ್ನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ