ಸಚಿವ ಸಂಪುಟ ವಿಸ್ತರಣೆ; ರಾಮಲಿಂಗಾರೆಡ್ಡಿಗೆ ಸ್ಥಾನ? ಪರಮೇಶ್ವರ್​ಗೆ ಶುರುವಾಯ್ತು ಸಂಕಷ್ಟ?

news18
Updated:September 5, 2018, 11:45 AM IST
ಸಚಿವ ಸಂಪುಟ ವಿಸ್ತರಣೆ; ರಾಮಲಿಂಗಾರೆಡ್ಡಿಗೆ ಸ್ಥಾನ? ಪರಮೇಶ್ವರ್​ಗೆ ಶುರುವಾಯ್ತು ಸಂಕಷ್ಟ?
news18
Updated: September 5, 2018, 11:45 AM IST
ರಮೇಶ್​ ಹಿರೇಜಂಬೂರು, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.5): ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಇದೇ ತಿಂಗಳ ಮೂರನೇ ವಾರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಕಾಂಗ್ರೆಸ್​ ಪಾಲಿಗೆ ಉಳಿದಿರುವ ಆರು ಸಚಿವ ಸ್ಥಾನದಲ್ಲಿ ರಾಮಲಿಂಗಾರೆಡ್ಡಿ ಪ್ರಬಲ ಆಕ್ಷಾಂಕ್ಷಿಯಾಗಿದ್ದಾರೆ. ಆದರೆ, ಇವರು ಸಂಪುಟ ಸೇರಿದರೆ ಪರಮೇಶ್ವರ್​ಗೆ ಸಂಕಷ್ಟ ಎದುರಾಗಲಿದೆ.

ಹೌದು, ಹಿರಿತನದ ಆಧಾರದ ಮೇಲೆ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಲವಾಗಿ ಕೇಳಿಬರುತ್ತಿದೆ. ಅದರಂತೆ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಿದರೆ, ಜಿ.ಪರಮೇಶ್ವರ್​ ನಿಭಾಯಿಸುತ್ತಿರುವ ಗೃಹ ಸಚಿವ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳಿಗೆ ಕುತ್ತು ಬರಲಿದೆ. ಈ ಖಾತೆಗೆಳ ಮೂಲಕ ಬೆಂಗಳೂರು ನಾಯಕರ ಮೇಲೆ ಹಿಡಿತ ಸಾಧಿಸಬೇಕು ಎಂದು ಷಡ್ಯಂತ್ರ ರೂಪಿಸಿರುವ ಪರಮೇಶ್ವರ್​ಗೆ ಭಾರೀ ಹಿನ್ನಡೆಯಾಗುವ ಸಂಭವವಿದೆ.

ಸೆಪ್ಟೆಂಬರ್ ತಿಂಗಳಲ್ಲೇ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ಅಧಿಕೃತವಾಗಿ ರಾಮಲಿಂಗಾರೆಡ್ಡಿ ಸಂಪುಟ ಸೇರಲು ಗ್ರೀನ್ ಸಿಗ್ನಲ್ ನೀಡಿದರೆ, ಅವರಿಗೆ ಗೃಹ ಸಚಿವ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗಬಹುದು ಎನ್ನಲಾಗುತ್ತಿದೆ.

ಹಿಂದಿನ ಸರ್ಕಾರದಲ್ಲಿಕೆ.ಜೆ.ಜಾರ್ಜ್​ ನಂತರ ಜಿ.ಪರಮೇಶ್ವರ್​ ಅವರಿಗೆ ಗೃಹ ಖಾತೆ ನೀಡಿದಾಗ ಸಾಕಷ್ಟು ಸವಾಲುಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದರು. ಹೀಗಾಗಿ ಗೃಹ ಖಾತೆಯನ್ನು ರಾಮಲಿಂಗಾರೆಡ್ಡಿಗೆ ನೀಡಲಾಗಿತ್ತು. ರಾಮಲಿಂಗಾರೆಡ್ಡಿ ಗೃಹ ಸಚಿವರಾದಾಗಲೂ ಅನೇಕ ಅಪರಾಧ ಪ್ರಕರಣಗಳು ನಡೆದರೂ ಅವು ಪ್ರತಿಪಕ್ಷಗಳಿಗೆ ಆಹಾರವಾಗದಂತೆ ನೋಡಿಕೊಂಡರು. ಗೌರಿ ಲಂಕೇಶ್ ಹತ್ಯೆ ದೊಡ್ಡ ಸಂಚಲನ ಸೃಷ್ಟಿದರೂ ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸುವಲ್ಲಿ ರಾಮಲಿಂಗಾರೆಡ್ಡಿ ಯಶಸ್ವಿಯಾದರು. ಹೀಗಾಗಿ ಮತ್ತೆ ರಾಮಲಿಂಗಾರೆಡ್ಡಿ ಸಂಪುಟ ಸೇರಿದರೆ ಗೃಹಖಾತೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಎರಡೂ ರಾಮಲಿಂಗಾರೆಡ್ಡಿ ಪಾಲಾಗುವ ಸಾಧ್ಯತೆ.

ಗೃಹಖಾತೆ ಬಿಟ್ಟು ಕೊಡಲು ಅಣಿಯಾಗಿರುವ ಪರಮೇಶ್ವರ್

ರಾಮಲಿಂಗಾರೆಡ್ಡಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಸರ್ಕಾರವನ್ನು ಸರಿಯಾಗಿ ನಡೆಸಬೇಕಿರುವ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಗೌಡರು ಕೂಡ ರಾಮಲಿಂಗಾರೆಡ್ಡಿಗೆ ಗೃಹ ಖಾತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ. ಆದರೆ, ಪರಮೇಶ್ವರ್​ ಅವರು ಗೃಹಖಾತೆ ಬಿಟ್ಟುಕೊಡಲು ಸಿದ್ಧರಾಗಿದ್ದರೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಿಡಲು ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ