ಬೆಂಗಳೂರು; ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾದ ವಿಷಯ ಸರಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಿತಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, "ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಉಪ ಕುಲಪತಿ ಪ್ರೊ. ಕರಿಸಿದ್ದಪ್ಪ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಕಾನೂನು ಪರಿಮಿತಿಯಲ್ಲಿ ಈ ಸಂಬಂಧ ಯಾವ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೋ ಅದನ್ನು ಕೂಡಲೇ ಮಾಡುವಂತೆ ಸೂಚಿಸಿದ್ದೇನೆ" ಎಂದು ತಿಳಿಸಿದ್ದಾರೆ.
"ಪರೀಕ್ಷೆಗೆ ನೀಡಲಾಗಿದ್ದ ಪ್ರಶ್ನೆಗಳಲ್ಲಿ ಬಹು ಆಯ್ಕೆಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ತಮಗಿಷ್ಟವಾದ ಪ್ರಶ್ನೆಯನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಮುಕ್ತ ಅವಕಾಶವನ್ನು ನೀಡಲಾಗಿತ್ತು. ಹಾಗಿದ್ದರೂ ಸರಕಾರ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸುವುದಿಲ್ಲ" ಎಂದು ಅಶ್ವತ್ಥ್ ನಾರಾಯಣ್ ಭರವಸೆ ನೀಡಿದ್ದಾರೆ.
"ಇದೇ ವೇಳೆ ಅಂತಿಮ ವರ್ಷದ ಎಂಜಿನಿಯರಿಂಗ್ ಪರೀಕ್ಷೆ ಉತ್ತಮವಾಗಿ ನಡೆದಿದೆ. ಶೇ.99ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಕಳೆದ ವರ್ಷಗಳಲ್ಲಿ ನಡೆದ ಪರೀಕ್ಷೆಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಖಂಡಿತಾ ಉತ್ತಮ ಪ್ರಮಾಣ ಮತ್ತು ಬೆಳವಣಿಗೆ. ಇನ್ನು ಈ ಪರೀಕ್ಷೆಗೆ ಯಾರು ಹಾಜರಾಗಿಲ್ಲ, ಅಂಥವರಿಗೆ ಕ್ಯಾರಿಓವರ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಮುಂದಿನ ಸೆಮಿಸ್ಟರ್ ಹೊತ್ತಿಗೆ ಅವರು ಪರೀಕ್ಷೆ ಬರೆಯಬಹುದು. ಉಳಿದಂತೆ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳಿದ್ದರೆ ಅದಕ್ಕೆ ಕೃಪಾಂಕ ಕೊಡಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ" ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ