ಸಾರಿಗೆ ನೌಕರರು ಮುಷ್ಕರ ಆರಂಭಿಸಿದರೆ ಪರ್ಯಾಯ ವ್ಯವಸ್ಥೆ ಮೂಲಕ‌ ಸಾರಿಗೆ ಸೇವೆ; ಡಿಸಿಎಂ ಲಕ್ಷ್ಮಣ ಸವದಿ

ಮುಷ್ಕರ ಮಾಡಿದರೆ ಜನ ಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ನಾವು ಯಾವತ್ತೇ ಬೇಡಿಕೆ ಈಡೇರಿಸಿದರೂ 2020ರಿಂದ ಅರಿಯರ್ಸ್ ಕೊಟ್ಟೇ ಕೊಡುತ್ತೇವೆ. ಯಾವುದೇ ಆತುರದ ನಿರ್ಣಯ ತೆಗೆದುಕೊಂಡು, ಮುಷ್ಕರ ಮಾಡಬೇಡಿ ಎಂದರು.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಂಗಳೂರು(ಮಾ.29): ಆರನೇ ವೇತನ ಆಯೋಗದ ಸಮಾನಾಂತರವಾಗಿ ವೇತನ ನೀಡುವ ಕುರಿತು ಪರಿಶೀಲನೆ ನಡೆಸಿದ್ದು, ಮತ್ತೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿಯಬಾರದು. ಒಂದು ವೇಳೆ ಮುಷ್ಕರಕ್ಕೆ ಮುಂದಾದಲ್ಲಿ ಪರ್ಯಾಯ ವ್ಯವಸ್ಥೆ ಮೂಲಕ ಸಾರಿಗೆ ಸೇವೆ ಒದಗಿಸಲು ಸರ್ಕಾರ ಮುಂದಾಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆಗಿನ‌ ಸಭೆ ನಂತರ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ದರು. ಆಗ 10 ಬೇಡಿಕೆಗಳನ್ನ ಇಟ್ಟಿದ್ದರು. ಅದರಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಲು ಆಗಲ್ಲ, ಉಳಿದ 9 ಬೇಡಿಕೆಗಳನ್ನ ಈಡೇರಿಸುತ್ತೇವೆ ಅಂತಾ ಭರವಸೆ ಕೊಟ್ಟಿದ್ದೆವು. ಈಗಾಗಲೇ 8 ಬೇಡಿಕೆಗಳು ಈಡೇರಿವೆ. 9 ನೇ ಬೇಡಿಕೆ 6 ನೇ ವೇತನ ಆಯೋಗದ ಸಮಾನಾಂತರವಾಗಿ ವೇತನ ನೀಡಬೇಕು ಅಂತಾ ಹೇಳಿದ್ದಾರೆ. ಆ ಬಗ್ಗೆ ಇವತ್ತು ಆರ್ಥಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಹಾಗಾಗಿ ಮುಷ್ಕರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.

ಏಪ್ರಿಲ್‌ 2ರಿಂದ 3.20 ಲಕ್ಷ ಅನಕ್ಷರಸ್ಥರನ್ನ ಸಾಕ್ಷರರನ್ನಾಗಿಸುವ ಓದು-ಬರಹ ಅಭಿಯಾನ: ಸಚಿವ ಸುರೇಶ್‌ ಕುಮಾರ್‌

ಕೊರೋನಾ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಆಗಿದೆ. ಮತ್ತೆ ಮುಷ್ಕರ ಮಾಡಿದರೆ ಸಮಸ್ಯೆ ಆಗಲಿದೆ. ನಾವು ನೀಡಿರುವ ಭರವಸೆಯನ್ನು ನಿರಾಸೆಯಾಗದಂತೆ ಈಡೇರಿಸುತ್ತೇವೆ. ಈಗ ಬರುತ್ತಿರುವ ಆದಾಯ ಇಂಧನ ಮತ್ತು ವೇತನಕ್ಕೆ ಸಾಕಾಗುತ್ತಿಲ್ಲ. ಆದರೂ ಕೊಟ್ಟಿರೋ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಮುಷ್ಕರ ಮಾಡಿದರೆ ಜನ ಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ನಾವು ಯಾವತ್ತೇ ಬೇಡಿಕೆ ಈಡೇರಿಸಿದರೂ 2020ರಿಂದ ಅರಿಯರ್ಸ್ ಕೊಟ್ಟೇ ಕೊಡುತ್ತೇವೆ. ಯಾವುದೇ ಆತುರದ ನಿರ್ಣಯ ತೆಗೆದುಕೊಂಡು, ಮುಷ್ಕರ ಮಾಡಬೇಡಿ ಎಂದರು.

ಒಂದು ವೇಳೆ ಪ್ರತಿಭಟನೆ ಮಾಡೋದಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋದಕ್ಕೂ ನಾವು ಸಿದ್ದವಿದ್ದೇವೆ. ಸಾರಿಗೆ ನೌಕರರು ಮುಷ್ಕರ ಮಾಡಿದರೆ ಖಾಸಗಿ ವಾಹನಗಳನ್ನ ಸಂಚಾರಕ್ಕೆ  ಬಳಸಿಕೊಳ್ಳುತ್ತೇವೆ. ಖಾಸಗಿ ಬಸ್‌ಗಳಿಗೆ ಪರ್ಮಿಟ್ ಕೊಟ್ಟು,  ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
Published by:Latha CG
First published: