ಕುಮಾರಸ್ವಾಮಿ ಫೋನ್ ಕದ್ದಾಲಿಸಿದ್ದರೆ ಯಾಕೆ ಬಂಧಿಸಬಾರದು?; ಜಿಟಿಡಿ ನಂತರ ತಿರುಗಿಬಿದ್ದ ಮತೊಬ್ಬ ಜೆಡಿಎಸ್ ಶಾಸಕ

ಮಾಜಿ ಸಚಿವ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್​ನಿಂದ ಒಂದು ಕಾಲನ್ನು ಆಚೆ ಇಟ್ಟಿದ್ದಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಕಾಂಗ್ರೆಸ್​ ಪಕ್ಷದಲ್ಲಿರುವಂತೆ ಜೆಡಿಎಸ್​ನಲ್ಲಿಯೂ ಅತೃಪ್ತ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೋರ್ವ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

Sushma Chakre | news18-kannada
Updated:September 12, 2019, 3:19 PM IST
ಕುಮಾರಸ್ವಾಮಿ ಫೋನ್ ಕದ್ದಾಲಿಸಿದ್ದರೆ ಯಾಕೆ ಬಂಧಿಸಬಾರದು?; ಜಿಟಿಡಿ ನಂತರ ತಿರುಗಿಬಿದ್ದ ಮತೊಬ್ಬ ಜೆಡಿಎಸ್ ಶಾಸಕ
ಜಿಟಿ ದೇವೇಗೌಡ- ಹೆಚ್​ಡಿ ಕುಮಾರಸ್ವಾಮಿ- ಎಸ್​ಆರ್​ ಶ್ರೀನಿವಾಸ್
  • Share this:
ತುಮಕೂರು (ಸೆ. 12): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿದ ಮೇಲೆ ವಿರೋಧ ಪಕ್ಷದವರ ಜೊತೆ ಮೈತ್ರಿ ಪಕ್ಷಗಳ ನಾಯಕರೂ ಅವರ ವಿರುದ್ಧ ಬಹಿರಂಗವಾಗಿಯೇ ಅನೇಕ ಬಾರಿ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್​ ಹಾಗೂ ಜೆಡಿಎಸ್ ಪಕ್ಷದ 17 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ಅವರಲ್ಲಿ ಬಹುತೇಕ ಶಾಸಕರು ಹೆಚ್.ಡಿ. ಕುಮಾರಸ್ವಾಮಿ ಅವರನ್ನೇ ಹೊಣೆಗಾರರನ್ನಾಗಿಸಿದ್ದರು.

ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ ದೇವೇಗೌಡರ ಕುಟುಂಬದವರ ವಿರುದ್ಧ ಅನೇಕ ಬಾರಿ ಆಕ್ರೋಶ ಹೊರಹಾಕಿದ್ದರು. ಸದ್ಯಕ್ಕೆ ಬಿಜೆಪಿ ಸೇರುವ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದ್ದ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್​ನಿಂದ ಒಂದು ಕಾಲನ್ನು ಆಚೆ ಇಟ್ಟಿದ್ದಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಕಾಂಗ್ರೆಸ್​ ಪಕ್ಷದಲ್ಲಿರುವಂತೆ ಜೆಡಿಎಸ್​ನಲ್ಲಿಯೂ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೋರ್ವ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಡಿಕೆಶಿ ಬೆನ್ನಿಗೆ ನಿಲ್ಲೋದು ಗೊತ್ತಿದೆ: ಒಕ್ಕಲಿಗರ ಪ್ರತಿಭಟನೆಗೆ ಗೈರಾಗಿದ್ದಕ್ಕೆ ದೇವೇಗೌಡ ಸ್ಪಷ್ಟನೆ

ತಪ್ಪು ಮಾಡಿದ್ದರೆ ಹೆಚ್​ಡಿಕೆಯನ್ನು ಬಂಧಿಸಲಿ:

ಒಂದೆಡೆ ಕುಮಾರಸ್ವಾಮಿ ವಿರುದ್ಧ ಪಕ್ಷದೊಳಗೆ ಭಿನ್ನಮತ ಆರಂಭಗೊಂಡಿದ್ದರೆ ಮತ್ತೊಂದೆಡೆ ಫೋನ್​ ಕದ್ದಾಲಿಕೆಯ ಉರುಳು ಅವರ ಕೊರಳಿಗೆ ದಿನೆ ದಿನೇ ಬಿಗಿಯಾಗುತ್ತಿದೆ. ಈ ನಡುವೆ ಈ ಕುರಿತು ಹೇಳಿಕೆ ನೀಡಿರುವ ಮತ್ತೋರ್ವ ಜೆಡಿಎಸ್​ ಪಕ್ಷದ ಶಾಸಕ ಮಾಜಿ ಸಚಿವ ಎಸ್​.ಆರ್​. ಶ್ರೀನಿವಾಸ್, "ಒಂದುವೇಳೆ ಹೆಚ್.ಡಿ. ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಅರೆಸ್ಟ್​ ಮಾಡಲಿ. ಮಾಡಬಾರದ್ದನ್ನು ಮಾಡಿ ದುಡ್ಡು ಸಂಪಾದಿಸಿದ್ದರೆ ಬಂಧಿಸುವುದರಲ್ಲಿ ತಪ್ಪೇನೂ ಇಲ್ಲ.

ಕುಮಾರಸ್ವಾಮಿಯವರನ್ನು ಹಿಡಿಯಬಾರದು ಎಂದು ಕಾನೂನು ಇದೆಯಾ? ನನ್ನ ಪ್ರಕಾರ ಫೋನ್ ಕದ್ದಾಲಿಕೆ ಆಗುತ್ತಿದ್ದುದು ನಿಜ. ಅದಕ್ಕೆ ಯಾರು ಹೊಣೆಗಾರರೋ ಅವರಿಗೆ ಶಿಕ್ಷೆ ಆಗಬೇಕು. ನನ್ನ ಫೋನ್ ಕೂಡ ಕದ್ದಾಲಿಕೆ ಆಗುತ್ತಿತ್ತು. ಕುಮಾರಸ್ವಾಮಿಯವರಿಗೆ ನನ್ನ ಮೇಲೂ ಅನುಮಾನವಿತ್ತೋ ಏನೋ ಎಂದು ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡುವ ಮೂಲಕ ಜೆಡಿಎಸ್​ ನಾಯಕರನ್ನು ಮತ್ತಷ್ಟು ಮುಜುಗರಕ್ಕೆ ಸಿಲುಕಿಸಿದ್ದಾರೆ.

ಜೆಡಿಎಸ್ ಚಿಂತನ ಸಭೆಗೆ ಜಿಟಿಡಿ ಗೈರು; ನಿಮ್ಮ ಕಣ್ಮುಂದೆಯೇ ಪಕ್ಷ ಕಟ್ಟಿ ಔತಣ ಕೊಡಿಸ್ತೀವಿ ಎಂದು ಹೆಚ್​ಡಿಡಿ ಸವಾಲುಮೈತ್ರಿ ಸರ್ಕಾರ ರಚನೆಯಾಗಲು ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ. ಶಿವಕುಮಾರ್ ಇಡಿ ಅಧಿಕಾರಿಗಳ ವಶದಲ್ಲಿದ್ದರೂ ಯಾವೊಬ್ಬ ಜೆಡಿಎಸ್​ ನಾಯಕರೂ ಭೇಟಿ ಮಾಡಿಲ್ಲ. ಹಾಗೇ, ನಿನ್ನೆ ನಡೆದ ಪ್ರತಿಭಟನಾ ಸಮಾವೇಶದಲ್ಲೂ ಜೆಡಿಎಸ್​ ಪ್ರಮುಖ ನಾಯಕರಾರೂ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಆಕ್ರೋಶ ಹೊರಹಾಕಿರುವ ಗುಬ್ಬಿ ಶಾಸಕ ಎಸ್​.ಆರ್. ಶ್ರೀನಿವಾಸ್, ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿಯವರಿಗೆ ಪ್ರೀತಿಯಿಲ್ಲ. ಪ್ರೀತಿ ಇದ್ದಿದ್ದರೆ ನಿನ್ನೆ ಪ್ರತಿಭಟನೆಗೆ ಬರುತ್ತಿದ್ದರು. ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿಯಿತ್ತು. ಹಾಗಾಗಿ ಹೋಗಿದ್ದೆವು. ಆದರೆ ಕುಮಾರಸ್ವಾಮಿಯವರಿಗೆ ಆ ಭಾವನೆ ಇರಲಿಲ್ಲ. ಆ ಭಾವನೆ ಇದ್ದಿದ್ರೆ ನಿನ್ನೆ ಖಂಡಿತ ಬರುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಪ್ರತಿಭಟನೆಯಲ್ಲಿ ಪಾಲ್ಗೊಂಡ 25 ಸಾವಿರ ಜನರಿಗೆ ಯಾರೂ ಆಮಂತ್ರಣ ಕೊಟ್ಟಿರಲಿಲ್ಲ. ಅವರೆಲ್ಲರೂ ಸ್ವಂತ ಆಸಕ್ತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ನಮ್ಮ ನಾಯಕರಿಗೆ ಆಮಂತ್ರಣ ಸಿಕ್ಕಿಲ್ಲವೆಂದು ಬಾರದೇ ಇದ್ದಿದ್ದು ಸರಿಯಲ್ಲ ಎಂದು ಜೆಡಿಎಸ್​ ವರಿಷ್ಠರ ವಿರುದ್ಧ ಎಸ್. ಆರ್. ಶ್ರೀನಿವಾಸ್​ ತಿರುಗಿಬಿದ್ದಿರುವುದು ಜೆಡಿಎಸ್​ನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಮತ್ತೊಂದು ಪುರಾವೆ ಒದಗಿಸಿದಂತಾಗಿದೆ.

(ವರದಿ: ವಿಠ್ಠಲ್)

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ