ಸಿದ್ದರಾಮಯ್ಯ-ಡಿಕೆಶಿ ಒಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್​ಗೆ ಗೆಲುವು ಕಟ್ಟಿಟ್ಟಬುತ್ತಿ; ಕೋಳಿವಾಡ ಭವಿಷ್ಯ

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಳಿವಾಡ ಸಾಕಷ್ಟು ವಿಚಾರಗಳ ಬಗ್ಗೆ ಮಾಧ್ಯಮದ ಜೊತೆ ಹಂಚಿಕೊಂಡರು.

Rajesh Duggumane | news18-kannada
Updated:October 27, 2019, 4:31 PM IST
ಸಿದ್ದರಾಮಯ್ಯ-ಡಿಕೆಶಿ ಒಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್​ಗೆ ಗೆಲುವು ಕಟ್ಟಿಟ್ಟಬುತ್ತಿ; ಕೋಳಿವಾಡ ಭವಿಷ್ಯ
ಸಿದ್ದರಾಮಯ್ಯ-ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಅ.27): ರಾಜ್ಯ ಕಾಂಗ್ರೆಸ್​ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಅತ್ಯಂತ ಪ್ರಭಾವಿಗಳು. ಇವರ ನಾಯಕತ್ವದಲ್ಲಿ ಹೋದರೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್​​ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್​ ನಾಯಕ ಕೆಬಿ ಕೋಳಿವಾಡ ಭವಿಷ್ಯ ನುಡಿದಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ನನಗೂ ಸಹ ಕಾಂಗ್ರೆಸ್​​ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇತ್ತು. ಆದರೆ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರು ನನ್ನ ಮನೆಗೆ ಬಂದು ಮಾತುಕತೆ ನಡೆಸಿದ್ದರು. ಈಗ ಭಿನ್ನಾಭಿಪ್ರಾಯ ಶಮನವಾಗಿದೆ. ಈಗ ನನಗೆ ಟೆಕೆಟ್ ಕೊಡುವುದು ಮಾತ್ರವಲ್ಲ, ಗೆಲ್ಲಿಸಿಕೊಂಡು ಬರುವುದಾಗಿಯೂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಿದ್ದು ಮತ್ತೆ ಡಿಕೆಶಿ ಒಟ್ಟಿಗೆ ಹೋದರೆ ಕಾಂಗ್ರೆಸ್ ಗೆಲ್ಲಬಹುದು,” ಎಂದು ಅಭಿಪ್ರಾಯಪಟ್ಟ ಅವರು, “ಡಿ.ಕೆ. ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೂ ತಪ್ಪೇನಿಲ್ಲ,” ಎಂದರು.

ಅನರ್ಹರ ವಿಚಾರವಾಗಿ ಮಾತನಾಡಿದ ಅವರು, “ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತದೆಯೋ ಅಥವಾ ಇಲ್ಲವೋ ಎನ್ನುವ ಚರ್ಚೆ ನಡೆಯುತ್ತಿದೆ. ಬಿಜೆಪಿಯವರ ಒತ್ತಾಯಕ್ಕೆ ಶಾಸಕರು ಗುಂಪು ಗುಂಪಾಗಿ ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರು ರಾಜೀನಾಮೆ ಕೊಟ್ಟ ನಂತರ ಅದನ್ನು ಅಂಗೀಕಾರ ಮಾಡಬೇಕು ಎಂಬ ನಿಯಮ ಏನು ಇಲ್ಲ. ಶಾಸಕರ ರಾಜೀನಾಮೆ ಪರ್ವದ ಹಿಂದೆ ಬಿಜೆಪಿ ಕೈವಾಡ ಇರುವುದರಿಂದ ಸ್ಪೀಕರ್ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡದೆ, ಅವರನ್ನು ಅನರ್ಹ ಮಾಡಿದ್ದಾರೆ. ಸ್ಪೀಕರ್​ ನಿರ್ಧಾರ ಸರಿಯಾಗಿದೆ,” ಎಂದು ಸ್ಪೀಕರ್​ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.

ಅನರ್ಹರ ವಿಚಾರದಲ್ಲಿ ಚುನಾವಣಾ ಆಯೋಗದ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೋಳಿವಾಡ, “ನ್ಯಾಯಾಂಗ ಪರಾಮರ್ಶೆಯ ವ್ಯಾಪ್ತಿ ಕೇವಲ ಹೈಕೋರ್ಟ್​ಗೆ ಇದೆ ಹೊರತು ಸುಪ್ರಿಂಕೋರ್ಟ್​​ಗೆ ಇಲ್ಲ. ಈ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗದ ಹಸ್ತಕ್ಷೇಪ ಆಕ್ಷೇಪಾರ್ಹ. ಚುನಾವಣಾ ಆಯೋಗದ ನಡೆ ಅನುಮಾನಾಸ್ಪದವಾಗಿದೆ,” ಎಂದರು.

ಇದನ್ನೂ ಓದಿ: ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಪಕ್ಷ ಭೇದ ಮರೆತು ಬೆಂಬಲ ನೀಡಿದ್ದೀರಿ; ಭಾವುಕರಾದ ಡಿಕೆಶಿ

ಶಂಕರ್​​ ಅನರ್ಹತೆ ಬಗ್ಗೆ ಸ್ಪಷ್ಟನೆ:

ಕೆಪಿಜೆಪಿ ಪಕ್ಷದ ಶಾಸಕನಾಗಿದ್ದ ಆರ್​. ಶಂಕರ್​ ಕೂಡ ಅನರ್ಹಗೊಂಡಿದ್ದು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಶಂಕರ್​, “ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಯಾವುದೇ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಶಾಸಕರು ಒಪ್ಪಿಗೆ ನೀಡಿದರೆ ಆ ಪಕ್ಷವನ್ನು ಮತ್ತೊಂದು ಪಕ್ಷದೊಡನೆ ವಿಲೀನಗೊಳಿಸಬಹುದು. ರಾಣಿಬೆನ್ನೂರು ಶಾಸಕ ಶಂಕರ್ ತಾವಾಗಿಯೇ ಕಾಂಗ್ರೆಸ್ ಜತೆ ವಿಲೀನಗೊಳ್ಳುವುದಾಗಿ ಶಾಸಕಾಂಗ ಪಕ್ಷದ ನಾಯಕರಿಗೆ ಹಾಗೂ ಸ್ಪೀಕರ್​ಗೆ ಪತ್ರಕೊಟ್ಟಿದ್ದಾರೆ. ಮಾರನೆಯ ದಿನ  ಕಾಂಗ್ರೆಸ್ ಕಚೇರಿಗೆ ಭೇಟಿಕೊಟ್ಟು,ಮಾಧ್ಯಮಗಳಿಗೂ ಹೇಳಿಕೆ ಕೊಟ್ಡಿದ್ದಾರೆ. ಹಾಗಾಗಿ ಸ್ಪೀಕರ್ ಆದೇಶದ ಪ್ರಕಾರ ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಕೂರುವಲ್ಲಿ ಆಸನದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿತ್ತು. ಹಾಗಾಗಿ ಶಂಕರ್ ಕಾಂಗ್ರೆಸ್ ಶಾಸಕರೆಂದೇ ಪರಿಗಣಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸೂಚನೆಯಂತೆ ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ,” ಎಂದರು.ಸರ್ಕಾರ ಬೀಳುತ್ತೆ:

ಉಪ ಚುನಾವಣೆ ಬಳಿಕ ಯಡಿಯೂರಪ್ಪ ರಾಜೀನಾಮೆ ಕೊಡೋದು ಖಚಿತ ಎಂದು ಕೋಳಿವಾಡ ಭವಿಷ್ಯ ನುಡಿದರು. ಮುಂಬರುವ ರಾಜ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನ ಗೆಲ್ಲಲಿದೆ. ಜೆಡಿಎಸ್ ಮೂರು ಸ್ಥಾನ ಕಬಳಿಸಲಿದೆ. ಅನರ್ಹರ ವಿರುದ್ಧ ಜನಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಸರ್ಕಾರ ಬೀಳಲಿದೆ,” ಎಂದರು.

(ವರದಿ: ಕೃಷ್ಣ ಜಿವಿ)

First published: October 27, 2019, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading