ಕೊಚ್ಚಿ ಮಾದರಿಯಲ್ಲಿ ಆದೇಶ ಬಂದರೆ ಬೆಂಗಳೂರಿನಲ್ಲಿ ನೆಲಕ್ಕುರುಳುತ್ತವೆ ಸಾವಿರಾರು ಅಕ್ರಮ ಕಟ್ಟಡಗಳು!

ಬಿಲ್ಡರ್ಸ್ ಕೊಡುವ ಲಂಚದ ಹಣಕ್ಕೆ ಕೈ ಚಾಚುವ ಅಧಿಕಾರಿಗಳೇ ಅಕ್ರಮದಿಂದ ಬಚಾವ್ ಆಗಲು ಬೇಕಾದ ಎಲ್ಲಾ ರಕ್ಷಣಾತ್ಮಕ ಮಾರ್ಗಗಳ ಬಗ್ಗೆ ಸಲಹೆ ಕೊಡ್ತಿದ್ದಾರೆ.ಇದರಿಂದಾಗಿ ಇವತ್ತು ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ಕಣ್ಣಿಗೆ ಗೋಚರಿಸುತ್ತಿವೆ.

news18-kannada
Updated:January 12, 2020, 12:29 PM IST
ಕೊಚ್ಚಿ ಮಾದರಿಯಲ್ಲಿ ಆದೇಶ ಬಂದರೆ ಬೆಂಗಳೂರಿನಲ್ಲಿ ನೆಲಕ್ಕುರುಳುತ್ತವೆ ಸಾವಿರಾರು ಅಕ್ರಮ ಕಟ್ಟಡಗಳು!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ.12): ನಿಯಮ ಬಾಹೀರವಾಗಿ ನಿರ್ಮಾಣ ಮಾಡಿದ ಬಹುಮಹಡಿ ಕಟ್ಟಡಗಳನ್ನು ಕೊಚ್ಚಿಯಲ್ಲಿ ನೆಲಸಮ ಮಾಡಲಾಗಿತ್ತು. ಅದೇರೀತಿ ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಆಗಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ನೆಲಕ್ಕುರುಳುವ ಕಟ್ಟಡಗಳು ಎಷ್ಟು ಗೊತ್ತಾ? ಒಂದಲ್ಲಾ ಎರಡಲ್ಲಾ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು!

ಹೌದು, ಒಂದು ಲೆಕ್ಕದ ಪ್ರಕಾರ ಸುಮಾರು ಸಾವಿರಕ್ಕೂ ಅಧಿಕ ಬಹುಮಹಡಿ ಕಟ್ಟಡಗಳು ಬೆಂಗಳೂರಿನಲ್ಲಿ ತಲೆ ಎತ್ತಿವೆ.  ಅಕ್ರಮವನ್ನೆಲ್ಲಾ ಮುಚ್ಚಿ ಹಾಕಿದ ಹೊರತಾಗ್ಯೂ ಬಿಬಿಎಂಪಿಯೇ ಮಾಡಿಟ್ಟಿರುವ ಒಂದು ಅಂದಾಜಿನ  ಪಟ್ಟಿ ಪ್ರಕಾರ 980 ಅಕ್ರಮ ಕಟ್ಟಡಗಳಿವೆ. ಆದರೆ, ಈವರೆಗೆ ಪಟ್ಟಿ ಸಿದ್ಧವಾಗಿದೆಯೇ ಹೊರತು ಅವುಗಳತ್ತ ಸುಳಿಯುವ ಧೈರ್ಯವನ್ನೂ ಬಿಬಿಎಂಪಿ ತೋರಿಲ್ಲ.

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಕ್ರಮವಾಗಿ ಕಟ್ಟಿ, ಅದನ್ನು ಉರುಳಿಸಿದ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರಾ? ಕೇಳಿರೊಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಆ ರೀತಿ ಕೆಲಸ ಆಗಿಯೇ ಇಲ್ಲ. ಬಿಬಿಎಂಪಿ ಅಧಿಕಾರಿಗಳು ತಮಗೆ ಅನ್ನ ಕೊಡುವ ಕೆಲಸಕ್ಕೆ ನೀಯತ್ತಾಗಿ ಇದ್ದಿದ್ದೇ ಆದಲ್ಲಿ,ಆದಲ್ಲಿ 198 ವಾರ್ಡ್ ಗಳ ವ್ಯಾಪ್ತಿಯಲ್ಲಿ  ಕಣ್ಣಳತೆಯಲ್ಲೇ ಸಾವಿರಾರು ಅಕ್ರಮ ಕಟ್ಟಡಗಳು ಗೋಚರಿಸುತ್ತವೆ.

ಇದನ್ನೂ ಓದಿ: ಕೇರಳದ ಮರಡು ಬಳಿ 4 ಐಷಾರಾಮಿ ಬಹುಅಂತಸ್ತಿನ ಕಟ್ಟಡಗಳ ನೆಲಸಮ; ಸುಪ್ರೀಂ ಸೂಚನೆಯಂತೆ ಕಾರ್ಯಾಚರಣೆ

ಕೆರೆ-ರಾಜಕಾಲುವೆಯ ಬಫರ್ ಜೋನ್(ನಿಷೇಧಿತ ವಲಯ), ಅತಿಕ್ರಮಿಸಿ ಕಟ್ಟಿರೋ ಕಟ್ಟಡಗಳು ಒಂದು ಕಡೆಯಾದ್ರೆ, ತೆಗೆದುಕೊಂಡ ಅನುಮತಿಗೆ ವ್ಯತಿರಿಕ್ತವಾಗಿ ನಿರ್ಮಿಸಲಾದ ಕಟ್ಟಡಗಳು ಇನ್ನೊಂದುಕಡೆ. ಅವುಗಳ ಮಾಹಿತಿ ವಾರ್ಡ್ ಇಂಜಿನಿಯರ್ಸ್​​ಗೆ ಇದ್ದರೂ ಬಿಲ್ಡರ್ಸ್​ಗಳ ಜತೆ ಶಾಮೀಲಾಗಿ ಅವರು ಕೊಡುವ ಲಂಚದ ಹಣ ಪಡೆದುಕೊಂಡು ತೆಪ್ಪಗೆ ಉಳಿದಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯಲ್ಲ.

ಬಿಲ್ಡರ್ಸ್ ಕೊಡುವ ಲಂಚದ ಹಣಕ್ಕೆ ಕೈ ಚಾಚುವ ಅಧಿಕಾರಿಗಳೇ ಅಕ್ರಮದಿಂದ ಬಚಾವ್ ಆಗಲು ಬೇಕಾದ ಎಲ್ಲಾ ರಕ್ಷಣಾತ್ಮಕ ಮಾರ್ಗಗಳ ಬಗ್ಗೆ ಸಲಹೆ ಕೊಡ್ತಿದ್ದಾರೆ.ಇದರಿಂದಾಗಿ ಇವತ್ತು ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ಕಣ್ಣಿಗೆ ಗೋಚರಿಸುತ್ತಿವೆ.

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗ್ತಿರುವ  ಅಕ್ರಮ ಕಟ್ಟಡಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೆ ದುರಂತಗಳಾದಾಗ ಅವುಗಳ ಸಂಖ್ಯೆ ಕಲೆ ಹಾಕುವ ಕೆಲಸ ನಡೆಯುತ್ತದೆ. ಅದರ ಕಾವು ಕಡಿಮೆ ಆಗುತ್ತಿದ್ದಂತೆ ಅಧಿಕಾರಿಗಳು ಅದರ ಗೋಜಿಗೆ ಹೋಗುತ್ತಿಲ್ಲ. ನಿರ್ಮಾಣ ಹಂತದ ಕಟ್ಟಡಗಳನ್ನು ಪತ್ತೆ ಮಾಡಿ ಅವುಗಳನ್ನು ನಿಲ್ಲಿಸುವ ಕೆಲಸವೂ  ಆಗುತ್ತಿಲ್ಲ.ಬಿಬಿಎಂಪಿ ಕೊಡ್ತಿರುವ 980 ಅಕ್ರಮ ಕಟ್ಟಡಗಳ ಲೆಕ್ಕವೂ ಸುಳ್ಳಂತೆ. ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್ ಅವ್ರೇ ಹೇಳುವಂತೆ ಒಂದಲ್ಲಾ ಒಂದು ಕಾರಣದಿಂದ ರೂಲ್ಸ್ ವಯಲೇಟ್ ಮಾಡಿ ಕಟ್ಟಲಾಗಿರುವ ಕಟ್ಟಡಗಳು ಹತ್ತಿರತ್ತಿರ ಲಕ್ಷದಷ್ಟಿವೆ. ಅದೆಲ್ಲವೂ ಪ್ರತಿಷ್ಟಿತ ಬಿಲ್ಡರ್ಸ್ ಗಳದ್ದಾಗಿರುವುದರಿಂದ ಯಾವುದೂ ಹೊರ ಬರ್ತಿಲ್ಲ. ಅದಕ್ಕೆ ಫೈನಾನ್ಸ್ ಮಾಡ್ತಿರುವವರು ಶಾಸಕರು, ಸಚಿವರು ಹಾಗೂ ಕಾರ್ಪೊರೇಟರ್ಸ್​. ಹೀಗಾಗಿ ಅದೆಲ್ಲವೂ ಹೊರಬಾರದೆ ಮುಚ್ಚಲ್ಪಡುತ್ತಿದೆ. ಹಾಗಾಗಿಯೇ ಬೆಂಗಳೂರಿಗರ ಕಣ್ಣಿಗೆ ಮಣ್ಣೆರಚುವುದಕ್ಕೆ ಬಾಯಿಗೆ ಬಂದ ಲೆಕ್ಕ ಕೊಡ್ತಿದ್ದಾರೆ. ನ್ಯಾಯಾಲಯಕ್ಕೂ ತಪ್ಪು ಮಾಹಿತಿ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ತಿದ್ದಾರೆ.

ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರಿಗೇನೆ ವಲಯದ ಜಂಟಿ ಆಯುಕ್ತರು ಈವರೆಗೂ 8 ವಲಯಗಳ ವ್ಯಾಪ್ತಿಯಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ ಮಾಹಿತಿ ಕೊಡಿ ಎಂಬ ಆದೇಶಕ್ಕೆ ಕಿಮ್ಮತ್ತಿನ ಬೆಲೆ ಕೊಟ್ಟಿಲ್ಲ. ಇನ್ನು ಈ ಬಗ್ಗೆ ಮೇಯರ್​ಗೆ ಕೇಳಿದರೆ ಅವರು ಕಮಿಷನರ್ ಕಡೆ ಬೊಟ್ಟು ಮಾಡಿ ತೋರಿಸ್ತಾರೆ.

ಈ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಮಧ್ಯ ಪ್ರವೇಶಿಸಿ ಕೊಚ್ಚಿ ಮಾದರಿಯಲ್ಲೇ ಖಡಕ್ ಆದೇಶವನ್ನು ಕೊಡುವಂಥ ಸ್ಥಿತಿ ನಿರ್ಮಾಣವಾದರೆ ಒಂದಷ್ಟು ಅಕ್ರಮ ಕಟ್ಟಡಗಳು ನೆಲಕ್ಕೆ ಉರಳಲಿವೆ. ಒಂದೊಮ್ಮೆ ಕೊಚ್ಚಿಯಂಥ ಘಟನೆ ಬೆಂಗಳೂರಿನಲ್ಲಿ ನಡೆದರೆ ಇಡೀ ನಗರದಲ್ಲಿ ತಲ್ಲಣ ಸೃಷ್ಟಿಸಿಯಾಗುವುದಂತೂ ಸತ್ಯ.
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ