• Home
  • »
  • News
  • »
  • state
  • »
  • Siddaramaiah: ಉಚಿತ ವಿದ್ಯುತ್, ಮಹಿಳೆಯರಿಗೆ 2000 ರೂಪಾಯಿ ಕೊಡಲಾಗದಿದ್ದರೆ ರಾಜಕೀಯ ನಿವೃತ್ತಿ -ಸಿದ್ದರಾಮಯ್ಯ ಶಪಥ

Siddaramaiah: ಉಚಿತ ವಿದ್ಯುತ್, ಮಹಿಳೆಯರಿಗೆ 2000 ರೂಪಾಯಿ ಕೊಡಲಾಗದಿದ್ದರೆ ರಾಜಕೀಯ ನಿವೃತ್ತಿ -ಸಿದ್ದರಾಮಯ್ಯ ಶಪಥ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಹಾಸನದಲ್ಲಿ ನಡೆದ ಪ್ರಜಾಧ್ವನಿ (Prajadhwani) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಎದುರಾಳಿ ಪಕ್ಷದವರು ಕಾಂಗ್ರೆಸ್​ನ ಹೊಸ ಯೋಜನೆಗಳನ್ನು ಚುನಾವಣ ಗಿಮಿಕ್ ಎನ್ನುತ್ತಿದ್ದಾರೆ. ಆದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಘೋಷಿಸಿ ಮನೆಗೆ ಹೋಗುತ್ತೇನೆ ಎಂದಿದ್ದಾರೆ.

ಮುಂದೆ ಓದಿ ...
  • Share this:

ಹಾಸನ: ಕಾಂಗ್ರೆಸ್​ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election) ಅಧಿಕಾರಕ್ಕೆ ಬಂದರೆ 200 ಯೂನಿಟ್​ ಉಚಿತ ವಿದ್ಯುತ್ (Free electricity), ಪ್ರತಿಮನೆಯ ಯಜಮಾನಿಗೆ 2000 ರೂ ಸಹಾಯಧನ  ಹಾಗೂ 10 ಕೆಜಿ ಅಕ್ಕಿ ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದ್ದೇವೆ. ನಾವು ಅದನ್ನು ಈಡೇರಿಸುತ್ತೇವೆ. ಒಂದು ವೇಳೆ ಈಡೇರಿಸದೇ ಹೋದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ. ಶನಿವಾರ ಹಾಸನದಲ್ಲಿ ನಡೆದ ಪ್ರಜಾಧ್ವನಿ (Prajadhwani) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಎದುರಾಳಿ ಪಕ್ಷದವರು ಕಾಂಗ್ರೆಸ್​ನ ಹೊಸ ಯೋಜನೆಗಳನ್ನು ಚುನಾವಣಾ ಗಿಮಿಕ್ ಎನ್ನುತ್ತಿದ್ದಾರೆ. ಆದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಘೋಷಿಸಿ ಮನೆಗೆ ಹೋಗುತ್ತೇನೆ ಎಂದಿದ್ದಾರೆ.


ಕಾಂಗ್ರೆಸ್​ಗೆ ಅಧಿಕಾರ


ಈ ಹಿಂದೆ ಅನೇಕ ಕಾರ್ಯಕ್ರಮಗಳಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದೆ, ಆದರೆ ಇಂದು ಜನರಲ್ಲಿರುವ ಉತ್ಸಾಹ ಈ ಹಿಂದೆ ಕಂಡಿರಲಿಲ್ಲ. ಇದನ್ನು ನೋಡಿದರೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಗೊತ್ತಾಗುತ್ತಿದೆ ಎಂದರು.


ರಾಜ್ಯ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ.


ರಾಜ್ಯದ ಬಿಜೆಪಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಸರ್ಕಾರ ನಾಡಿನ ಬಡವರು, ದಲಿತರು, ಮಹಿಳೆಯರು, ಮಕ್ಕಳ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ. 2022ರ ಒಳಗಡೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು 2016ರಲ್ಲಿ ನರೇಂದ್ರ ಮೋದಿ ಅವರು ರೈತರಲ್ಲಿ ಭ್ರಮೆಯನ್ನು ಹುಟ್ಟಿಸಿದ್ದರು. ಇದನ್ನು ಹೇಳುತ್ತ ಹೇಳುತ್ತಲೇ 3 ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು. ದೆಹಲಿಯ ಹೊರವಲಯದಲ್ಲಿ ದೇಶದ ರೈತರು ಅನೇಕ ದಿನಗಳ ಕಾಲ ಹೋರಾಟ ಮಾಡಿದರು, ಮೊದಮೊದಲು ಮೋದಿ ಅವರು ಕ್ಯಾರೇ ಎನ್ನಲಿಲ್ಲ, ಕೊನೆಗೆ ಹೋರಾಟದ ಕಾವು ಜಾಸ್ತಿಯಾದ ಮೇಲೆ ಬೇರೆ ದಾರಿಯಿಲ್ಲದೆ 3 ಮಾರಕ ಕಾಯ್ದೆಗಳನ್ನು ವಾಪಾಸು ಪಡೆದರು ಎಂದರು.


ಇದನ್ನೂ ಓದಿ:  Siddaramaiah: ಮೋದಿ ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ! ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ


ಬಿಜೆಪಿಯಲ್ಲಿ ಉಳ್ಳವನೇ ಭೂಮಿಯ ಒಡೆಯ


ರಾಜ್ಯದಲ್ಲಿ ಕೂಡ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು, ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದರು, ಈ ಸರ್ಕಾರ ಭೂಸುಧಾರಣಾ ಕಾಯ್ದೆಯ ಸೆಕ್ಷನ್‌ 79(ಎ), (ಬಿ), (ಸಿ) ಗಳನ್ನು ತೆಗೆದುಹಾಕಿ ಉಳ್ಳವನನ್ನು ಭೂಒಡೆಯನನ್ನಾಗಿ ಮಾಡಿದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ಹಿಡುವಳಿ ಹೊಂದಿರುವ ರೈತರು ನಾಶವಾಗುತ್ತಿದ್ದಾರೆ.
ಒಂದೂ ರೂ. ಸಾಲ ಮನ್ನಾ ಮಾಡಿಲ್ಲ


2018ರ ಪ್ರಣಾಳಿಕೆಯಲ್ಲಿ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಸಾಲ ಮನ್ನಾ ಮಾಡಿದ್ದಾರಾ? ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಮೋದಿ ಅವರು ಪ್ರಧಾನಿಯಾಗಿ 9 ವರ್ಷವಾಗುತ್ತಾ ಬಂತು ಒಂದು ರೂಪಾಯಿಯಾದರೂ ರೈತರ ಸಾಲ ಮನ್ನಾ ಮಾಡಿದ್ರಾ?


ರೈತರ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆಯನ್ನು ನೀಡದ ಹೊರತಾಗಿ ಕೂಡ ಬರಗಾಲ ಬಂದು ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಿರುವಾಗ ಸಹಕಾರಿ ಬ್ಯಾಂಕುಗಳಲ್ಲಿನ 22 ಲಕ್ಷದ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದೆ.


ಜೆಡಿಎಸ್​ ಗೆದ್ದೆತ್ತಿನ ಬಾಲ ಹಿಡಿಯುತ್ತೆ


ಜೆಡಿಎಸ್‌ ಪಕ್ಷ ಇರುವುದೇ ಐದಾರು ಜಿಲ್ಲೆಗಳಲ್ಲಿ. ಕುಮಾರಸ್ವಾಮಿ ಅವರು ತಮಟೆ ಹೊಡೆದುಕೊಂಡು ಪಂಚರತ್ನ ಯಾತ್ರೆ ಎಂದು ಓಡಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಯಾಕೆ ಪಂಚರತ್ನ ಯೋಜನೆ ಮಾಡಿಲ್ಲ? ಈಗ ಕುಮಾರಸ್ವಾಮಿ ಅವರಿಗೆ ಮತ್ತೆ ಅಧಿಕಾರ ಕೊಡಬೇಕಂತೆ, ಇಲ್ಲದಿದ್ದರೆ ಜೆಡಿಎಸ್‌ ಪಕ್ಷವನ್ನು ವಿಸರ್ಜನೆ ಮಾಡುತ್ತಾರಂತೆ. ಜೆಡಿಎಸ್‌ ನವರು ಗೆದ್ದ ಎತ್ತಿನ ಬಾಲ ಹಿಡಿಯುವವರು, ಅವರು ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ನಿಮ್ಮ ಮತಗಳನ್ನು ದಯವಿಟ್ಟು ವ್ಯರ್ಥ ಮಾಡಿಕೊಳ್ಳಬೇಡಿ. ಜೆಡಿಎಸ್‌ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ. ದಯಮಾಡಿ ಜೆಡಿಎಸ್‌ ಪಕ್ಷಕ್ಕೆ ಮತ ನೀಡಬೇಡಿ ಎಂದು ಮನವಿ ಮಾಡಿದರು.


 if congress failed to full fill promise i will take political retirement siddaramaiah
ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು


ನಮ್ಮ ಯೋಜನೆಗಳನ್ನು ನಿಲ್ಲಿಸಿದ್ದಾರೆ


ಬಸವಜಯಂತಿ ದಿನ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ, ನೇರವಾಗಿ ವಿಧಾನಸೌಧದ ಕ್ಯಾಬಿನೆಟ್‌ ಹಾಲ್​ಗೆ ಹೋಗಿ ನಮ್ಮ 5 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಬಡವರ ಸಾಲಮನ್ನಾ ಮತ್ತು ಕೃಷಿಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಈ ಯೋಜನೆಗಳನ್ನು ಯಡಿಯೂರಪ್ಪ ಆಗಲೀ ದೇವೇಗೌಡರು ಆಗಲೀ ಮಾಡಿದ್ರಾ? ನಾವು 2 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿದ್ದೆವು, ಬೊಮ್ಮಾಯಿ ಸರ್ಕಾರ ಇದನ್ನು ನಿಲ್ಲಿಸಿದೆ, ವಿದ್ಯಾಸಿರಿ, ಕೃಷಿಭಾಗ್ಯ, ಮೈತ್ರಿ, ಮನಸ್ವಿನಿ, ಶಾದಿಭಾಗ್ಯ, ಇಂದಿರಾಕ್ಯಾಂಟೀನ್‌ ಈ ಎಲ್ಲಾ ಯೋಜನೆಗಳನ್ನು ಬಂದ್‌ ಮಾಡಿದ್ದಾರೆ. ಇಂಥಾ ಸರ್ಕಾರ ಬೇಕಾ? ಎಂದಿ ಪ್ರಶ್ನೆ ಮಾಡಿದರು.


ಹಾಸನದಲ್ಲಿ 7 ಸ್ಥಾನ ಗೆಲ್ಲಬೇಕು


ಹಾಸನದಲ್ಲಿ 7 ರಲ್ಲಿ ಕನಿಷ್ಠ 5 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಪಣತೊಡಬೇಕು. ಜಿಲ್ಲೆಯ ಎಲ್ಲಾ ಮುಖಂಡರು ಒಂದಾಗಿ ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಮಧು ಮಾದೇಗೌಡ ಅವರು ಈ ಬಾರಿ ಮೇಲ್ಮನೆ ಸದಸ್ಯರಾಗಿದ್ದಾರೆ, ಇಲ್ಲಿ ಕಾಂಗ್ರೆಸ್‌ ಗೆ ಶಕ್ತಿ ಇದೆ. ಇಲ್ಲಿನ ಜನ ಮನಸು ಮಾಡಿದರೆ ಹೊಳೆ ನರಸೀಪುರ, ಅರಕಲಗೂಡು, ಹಾಸನ ಕ್ಷೇತ್ರಗಳನ್ನು ಸಹ ಕಾಂಗ್ರೆಸ್‌ ಪಕ್ಷ ಗೆಲ್ಲಬಹುದು. ತಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್‌ ಅಭ್ಯರ್ಥಿಯ ಮೇಲಿರಲಿ ಎಂದು ಮನವಿ ಮಾಡಿದರು.

Published by:Rajesha B
First published: