ಮೈಸೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳ (Bajrang Dal) ನಿಷೇಧದ ಪ್ರಸ್ತಾಪಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ. ಶಿವ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್ (DK Shivakumar) ಮತ್ತು ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯ(Siddaramaiah) ಅವರಿಂದ ಏನೂ ನಿರೀಕ್ಷೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತೆ ಎಂದು ಸಂಸದರು ಕಿಡಿಕಾರಿದರು.
ಘಜ್ನಿ ಮಹಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಪಿಎಫ್ಐ ಸತ್ತ ಹಾವು. ಪಿಎಫ್ಐ ಬ್ಯಾನ್ ತೆಗೆದು ಭಜರಂಗದಳವನ್ನ ಬ್ಯಾನ್ ಮಾಡುತ್ತಾರೆ. ಸೀತೆ ಹುಡುಕಿಕೊಂಡು ಹೋದ ಭಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದುತ್ವಕ್ಕಾಗಿ, ಗೋಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ಅನ್ನು ಹಾಕಿ ಹೊಸಕಿ ಹಾಕುತ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಮಾತನಾಡಿ ಎಂದು ಗುಡುಗಿದರು.
ಇಬ್ಬರು ದೇಶದ ಅಸ್ಮಿತೆಯ ಪ್ರತೀಕ
ಶ್ರೀ ರಾಮಚಂದ್ರ, ಹನುಮಂತ ಮೇಲೆ ಕಾಂಗ್ರೆಸಿಗರಿಗೆ ಯಾಕೆ ಇಷ್ಟು ಕೋಪ? ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರಕಾರ ರಚನೆ ಆಗಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎಂದು ಹೇಳಿದರು.
ಭಜರಂಗದಳದವರು ಯಾರನ್ನು ಅಪಹರಣ ಮಾಡಿದ್ದಾರೆ? ಯಾರನ್ನು ಕೊಲೆ ಮಾಡಿದ್ದಾರೆ? ಅಶಾಂತಿ ಕದಡುವು ಕೆಲಸ ಏನೂ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿಟ್ಟರು.
ಅವರಿಗೂ ಇವರಿಗೂ ಯಾವ ಹೋಲಿಕೆ?
ಪಿಎಫ್ಐ, ಕೆಎಫ್ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆ? ಗೋಮಾತೆ ರಕ್ಷಣೆಗೆ ಹಿಂದುತ್ವದ ರಕ್ಷಣೆಗೆ ಕರ್ನಾಟಕದ ಹಿತ ರಕ್ಷಣೆಗೆ ಭಜರಂಗದಳ ಹೋರಾಟ ಮಾಡುತ್ತಿದೆ.
ತಾಲಿಬಾನ್ ಸರಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದುಗಳಿಗೆ ಮತ್ತು ಹಿಂದುತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ