ಬೆಂಗಳೂರು (ಅ.11): ಜಾತಿ ರಾಜಕಾರಣ ಚುನಾವಣೆಯಲ್ಲಿ ನಡೆಯುವುದಿದ್ದರೆ, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಮಗನನ್ನು ಯಾಕೆ ಸೋಲಿಸಿದರು. ತುಮಕೂರಿನಲ್ಲಿ ದೇವೆಗೌಡರು ಯಾಕೆ ಸೋತರು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡಲು ಹೊರಟಿದೆ. ಡಿಕೆ ಶಿವಕುಮಾರ್ಗೆ ಜಾತಿ ರಾಜಕಾರಣ ಮಾಡುವಂತೆ ಹೇಳಿಕೊಟ್ಟವರು ಯಾರು ಎಂಬುದು ಗೊತ್ತಿದೆ ಎಂಬ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜಾತಿ ಕಾರ್ಡ್ ಎಲ್ಲ ನಡೆಯಲ್ಲ. ಅಲ್ಲದೇ ಯಾವ ಜಾತಿಯೂ ಒಬ್ಬರ ಹಿಂದೆ ಹೋಗಲ್ಲ. ಒಕ್ಕಲಿಗರೆಲ್ಲಾ ಕುಮಾರಸ್ವಾಮಿ ಜೊತೆ ಹೋಗಲ್ಲ ಎಂದು ತಿಳಿಸಿದರು.
ಉಪ ಚುನಾವಣಾ ಪ್ರತಿ ವಾರ್ಡ್ ನಿಂದ ಒಂದೊಂದು ಟೀಮ್ ಮಾಡಲಾಗಿದೆ. ಪ್ರತಿ ಬೂತ್ ಗೂ ಜವಾಬ್ದಾರಿ ನೀಡಲಾಗಿದೆ. ಶಾಸಕರು, ಮಾಜಿ ಸಚಿವರು ಪ್ರತಿ ಟೀಮ್ ನಲ್ಲಿ ಇರಲಿದ್ದಾರೆ. ಈ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡದಿರುವು ಕುರಿತು ಟೀಕಿಸಿದ ಅವರು, ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಅಭ್ಯರ್ಥಿಗಳನ್ನು ಒಪ್ಪಲು ಇಷ್ಟ ಸ್ಥಳೀಯ ಜನರಿಗೆ ಇಷ್ಟ ಇಲ್ಲ. ಹಾಗಾಗಿ ಅವರ ಪಕ್ಷದಲ್ಲಿ ಮೂಲ ಮತ್ತು ವಲಸಿಗರ ಸಂಘರ್ಷ ನಡೆಯುತ್ತಿದೆ. ಇನ್ನು ಜೆಡಿಎಸ್ನಲ್ಲಿ ಅಭ್ಯರ್ಥಿಯೇ ಇಲ್ಲ ಎಂದು ಇದೇ ವೇಳೆ ಟೀಕಿಸಿದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ; ಡಿಕೆಶಿ
ಡಿಕೆ ಶಿವಕುಮಾರ್ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರೆಯೇ. ಜಾತಿಗಳ ಮೇಲೆ ದಬ್ಬಾಳಿಕೆ ನಡೆಯುವಾಗ ಯಾಕೆ ತಡೆಯುವ ಕೆಲಸ ಮಾಡಲಿಲ್ಲ. ಈಗ ನಮ್ಮ ಜಾತಿಯವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವೆಲ್ಲಾ ಒಂದಾಗಬೇಕು ಎಂದು ಚರ್ಚಿಸುತ್ತಾರೆ ಎಂಬ ಕುಮಾರಸ್ವಾಮಿ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನಾನು ಯಾರನ್ನು ನಿಂದಿಸಲ್ಲ. ತಪ್ಪು ಮಾಡಿರುವವರು ಅನುಭವಿಸುತ್ತಾರೆ. ನಾನೂ ತಪ್ಪು ಮಾಡಿದ್ರೂ ಅನುಭವಿಸುತ್ತೇನೆ. ಕುಮಾರಸ್ವಾಮಿ ದೊಡ್ಡವರು ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಇದೇ ವೇಳೇ ಶಿರಾ ಉಪಚುನಾವಣಾ ಕಣದ ಅಭ್ಯರ್ಥಿಯಾಗಿರುವ ಟಿಬಿ ಜಯಚಂದ್ರ ಅವರಿಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕೃತವಾಗಿ ಬಿ ಫಾರಂ ನೀಡಿದರು. ಡಿಕೆ ಶಿವಕುಮಾರ್ ಮನೆಯಲ್ಲಿ ಅಭ್ಯರ್ಥಿಗೆ ಬಿ ಫಾರಂ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ಎರಡು ಕ್ಷೇತ್ರದ ಅಭ್ಯರ್ಥಿಗಳಿಗೆ ಇಂದು ಬಿ ಫಾರಂ ವಿತರಿಸಲಾಗುವುದು. ಅ.14ರಂದು ಇಬ್ಬರು ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಪಕ್ಷದ ಹಿರಿಯರು ಅವರಿಗೆ ಜೊತೆಯಾಗುತ್ತೇವೆ ಎಂದರು. ಮೂರು ದಿನಗಳ ಹಿಂದೆ ಬಿ ಫಾರಂ ಇಲ್ಲದೇ ಶಿರಾದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇಂದು ಅಧಿಕೃತವಾಗಿ ಬಿ ಫಾರಂ ಪಡೆದಿದ್ದು, ಮತ್ತೊಮ್ಮೆ ಅ.14ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಆರ್ಆರ್ನಗರ ಅಭ್ಯರ್ಥಿ ಕುಸುಮಾ ಹಾಗೂ ಶಿರಾ ಅಭ್ಯರ್ಥಿ ಟಿಬಿ ಜಯಚಂದ್ರ ನಾಮಪತ್ರ ಸಲ್ಲಿಕೆ ವೇಳೆ ತಾವು ಹೋಗುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ