ಬೆಂಗಳೂರು; ಐಪಿಎಸ್ ರೂಪಾ (IPS Officer D Roopa) ಮತ್ತು ಐಎಎಸ್ ರೋಹಿಣಿ ಸಿಂಧೂರಿ (IAS Officer Rohini Sindhuri) ಜಟಾಪಟಿ ಮುಗಿಯುವ ಮುನ್ನವೇ, ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮೈಸೂರಿನ (Mysuru) ಆರ್ ಟಿಐ ಕಾರ್ಯಕರ್ತ ಗಂಗರಾಜುರ (Activist Gangaraju) ಜೊತೆ ರೂಪಾ ಮಾತಾಡಿರುವ ಆಡಿಯೋ ಹೊರ ಬಂದಿದ್ದು, ಹೊಸ ಟ್ವಿಸ್ಟ್ ಸಿಕ್ಕಿದೆ. ಇದರ ನಡುವೆಯೇ ಇಂದು ಐಜಿಪಿ ಡಿ. ರೂಪಾ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ರೋಹಿಣಿ ಸಿಂಧೂರಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ (City Civil Court ) ಅರ್ಜಿ ಹಾಕಿದ್ದಾರೆ. ಅರ್ಜಿ ಪರ ವಕೀಲರ ವಾದ ಆಲಿಸಿರುವ ಕೋರ್ಟ್ (Court) ನಾಳೆಗೆ ಆದೇಶವನ್ನ ಕಾಯ್ದಿರಿಸಿದೆ. ಇದರ ನಡುವೆ ರೋಹಿಣಿ ಸಿಂಧೂರಿ, ಡಿ ರೂಪಾ ಅವರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಒಟ್ಟು 21 ಅಂಶಗಳನ್ನ ಮುಂದಿಟ್ಟು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೊಟೀಸ್
ರೋಹಿಣಿ ಸಿಂಧೂರಿ ತಮ್ಮ ಪರ ವಾದಿಸುತ್ತಿರುವ ಹಿರಿಯ ವಕೀಲ ಸಿ ವಿ ನಾಗೇಶ್ ಮೂಲಕ ಲೀಗಲ್ ನೋಟಿಸ್ ಅನ್ನು ಡಿ ರೂಪಾ ಅವರಿಗೆ ಕಳುಹಿಸಿದ್ದು, 21 ಅಂಶಗಳನ್ನ ಪಾಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಮಧ್ಯಂತರ ಆದೇಶಕ್ಕೆ ಮನವಿ
ಇನ್ನು, ಇಂದು ಐಜಿಪಿ ಡಿ. ರೂಪಾ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದ ಸಿಂಧೂರಿ ಪರ ವಕೀಲರು, ಡಿ ರೂಪಾ ಅವರು ಸೈಬರ್ ವಿಭಾಗದಲ್ಲಿ ಕೆಲಸ ಮಾಡಿದ್ದರು. ಇದರಿಂದ ಅವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ನಿರ್ಬಂಧಕಾಜ್ಞೆಗೆ ನೀಡಿ, ರೂಪ ಅಧಿಕಾರ ದುರುಪಯೋಗವಾಗಿದೆ ಎಂದು ಕೋರ್ಟ್ ಅಲ್ಲಿ ವಾದ ಮಂಡಿಸಿದ್ದರು. ಅಲ್ಲದೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ. ಅಷ್ಟದರೂ ಚೌಕಟ್ಟು ಮೀರಿ ಮಾತನಾಡುತ್ತಾ ಇದ್ದಾರೆ ಎಂದು ಮಧ್ಯಂತರ ಆದೇಶಕ್ಕೆ ಮನವಿ ಮಾಡಿದ್ದರು.
ನನ್ನ ಗಂಡನ ಜೊತೆ ಚಾಟ್ ಮಾಡುತ್ತಾಳೆ ಅಂತಾ ಕಿಡಿ
ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಗಳ ಮತ್ತೊಂದು ಲೆವೆಲ್ಗೆ ಹೋಗಿತ್ತು. ಈಗಾಗಲೇ ಸರ್ಕಾರ ಇವರಿಬ್ಬರಿಗೂ ವರ್ಗಾವಣೆ ಶಿಕ್ಷೆ ನೀಡಿದರೂ ಇವರಿಬ್ಬರ ವಾರ್ ಮಾತ್ರ ನಿಂತಿರಲಿಲ್ಲ. ರೋಹಿಣಿ ವಿರುದ್ಧ ಸ್ಫೋಟಕ ಆರೋಪ ಮಾಡಿರುವ ರೂಪಾ ಆಡಿಯೋ ವೈರಲ್ ಆಗಿತ್ತು.
RTI ಕಾರ್ಯಕರ್ತ ಗಂಗರಾಜು ಜೊತೆ ಡಿ.ರೂಪಾ ಮಾತನಾಡುವ ವೇಳೆ ಸಿಂಧೂರಿ ವಿರುದ್ಧ ಅವಾಚ್ಯ ಶಬ್ದ ಬಳಸಿರುವುದು ಆಡಿಯೋದಲ್ಲಿ ಕೇಳಿ ಬಂದಿತ್ತು. ಅಲ್ಲದೆ ಸಿಂಧೂರಿ ಆದಾಯದ ಬಗ್ಗೆಯೂ ಗಂಗಾರಾಜು ಜೊತೆ ಡಿ ರೂಪಾ ಮಾತಾಡಿದ್ದರು. ಜಾಲಹಳ್ಳಿಯಲ್ಲಿ ಸಿಂಧೂರಿ ದೊಡ್ಡ ಮನೆ ಕಟ್ಟಿಸುತ್ತಿದ್ದಾರೆ. ಈ ಬಗ್ಗೆಯೂ ನನ್ನ ಗಂಡನ ಜೊತೆ ಚಾಟ್ ಮಾಡುತ್ತಾಳೆ ಅಂತಾ ರೋಹಿಣಿ ವಿರುದ್ಧ ಕಿಡಿಕಾರಿದ್ದರು.
ಆಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಫೇಸ್ಬುಕ್ ಪೋಸ್ಟ್!
ಆಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಪೋಸ್ಟ್ ಮಾಡಿದ್ದ ಡಿ ರೂಪಾ ಅವರು, ಭ್ರಷ್ಟಾಚಾರದ ಬಗ್ಗೆ ಫೋಕಸ್ ಮಾಡಿ, ನಾನು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವವರನ್ನ ತಡೆದಿಲ್ಲ. ಒಬ್ಬ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದರು. ಐಎಎಸ್ ದಂಪತಿ ವಿಚ್ಚೇದನ ಪಡೆದಿದ್ದಾರೆ. ಆದರೆ ನಾನು ನನ್ನ ಗಂಡ ಇನ್ನೂ ಒಟ್ಟಿಗೆ ಇದ್ದೇವೆ. ಕುಟುಂಬಕ್ಕೆ ಅಡ್ಡಿಯಾಗುತ್ತಿರುವವರನ್ನ ಪ್ರಶ್ನಿಸಿ, ಇಲ್ಲವಾದರೆ ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಾದ ಮಹಿಳೆ, ನಾನು ಹೋರಾಡುತ್ತೇನೆ ಎಂದಿದ್ದರು.
ಇನ್ನು ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಇವರಿಬ್ಬರ ವಿಷಯ ಪ್ರಸ್ತಾಪಿಸಿದ್ದರು. ಆದರೆ ಸಭಾಪತಿಗಳು ನಾಳೆ ಚರ್ಚೆಗೆ ಅವಕಾಶ ಕೊಡುತ್ತೇನೆ ಅಂತ ಹೇಳಿದರು. ಈ ವೇಳೆ ಡಿ.ರೂಪಾ ಪತಿ ಮನೀಶ್ ಮೌದ್ಗಿಲ್ ಗ್ಯಾಲರಿಯಲ್ಲೆ ಕುಳಿತಿದ್ದರು. ರೂಪಾ, ರೋಹಿಣಿ ಸಿಂಧೂರಿ ವಿವಾದದಲ್ಲಿ ಒಂದು ವಿಚಾರ ಮುಗಿಯೋ ಮುನ್ನ ಮತ್ತೊಂದು ಹೊಸ ವಿಚಾರ ಹೊರ ಬರ್ತಾ ಇದೆ, ಇದು ಯಾವ ಹಂತಕ್ಕೆ ತಲುಪುತ್ತೊ ಅನ್ನೋದು ಸದ್ಯದ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ