ಬೆಂಗಳೂರು(ನವೆಂಬರ್. 04): ಕೋವಿಡ್ ಕಾಲದಲ್ಲಿ ಬೆಂಗಳೂರಿನಲ್ಲಿ ಪಿಜಿಗಳು ಬಂದ್ ಆಗಿ ಸಂಕಷ್ಟದಲ್ಲಿದ್ದವು. ಈಗಲೂ ಅರ್ಧಕ್ಕರ್ಧ ಪಿಜಿಗಳು ಸಹಜಸ್ಥಿತಿ ಬರಲು ಹರಸಾಹಸ ಪಡುತ್ತಿವೆ. ಇಂಥ ಸಂಕಷ್ಟ ಕಾಲದಲ್ಲಿ ತಮ್ಮ ಪಿಜಿಯಲ್ಲಿರುವ ಐಎಎಸ್ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಉಚಿತವಾಗಿ ನುರಿತ ತಜ್ಞರಿಂದ ಕ್ಲಾಸ್, ಪಿಜಿ ಸೆಂಟರ್ ನಲ್ಲಿ ಪ್ರತ್ಯೇಕ ಸ್ಟಡಿ ರೂಮ್, ಗ್ರಂಥಾಲಯ ವ್ಯವಸ್ಥೆ ಮಾಡಿ ಪಿಜಿ ಮಾಲಿಕ ನೆರವಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಪಿಜಿಗಳೆಲ್ಲ ಬಂದ್ ಆಗಿದ್ದವು. ಆನಂತರ ಅನ್ ಲಾಕ್ ನಲ್ಲಿ ಪಿಜಿಗಳು ತೆರೆದವಾದರು ಸಹಜಸ್ಥಿತಿಗೆ ಮರಳು ಇನ್ನೂ ಕಷ್ಟಪಡುತ್ತವೆ. ಇಂಥ ಸಂದರ್ಭದಲ್ಲಿ ಪಿಜಿಯಲ್ಲಿದ್ದುಕೊಂಡು ಐ ಎ ಎಸ್ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಪಿಜಿ ಮಾಲಿಕ ಅರುಣ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ. ಎಲ್ಲರಂತೆ ಕಮರ್ಷಿಯಲ್ ಆಗಿ ಯೋಚಿಸದೇ ಕೊವಿಡ್ ಸಂಕಷ್ಟ ಕಾಲದಲ್ಲಿ ಪ್ರತಿಭಾವಂತರಿಗೆ ನೆರವಾಗಲು ಮುಂದಾಗಿದ್ದಾರೆ.
ವಿಜಯನಗರದಲ್ಲಿರುವ ತಮ್ಮ ಆಶ್ರಯ ಪಿಜಿ ಲೇಡಿಸ್ ಹಾಸ್ಟೆಲ್ ನಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನು ಮಾಡಿದ್ದಾರೆ. ಇಲ್ಲಿರುವ ವಿದ್ಯಾರ್ಥಿನಿಯರಿಗೆ ಪಿಜಿಯ ಕೆಳಮಹಡಿಯಲ್ಲಿ ಸ್ಟಡಿ ರೂಮ್ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 45 ವಿದ್ಯಾರ್ಥಿಗಳು ಏಕಕಾಲದಲ್ಲಿ ವಿದ್ಯಾಭ್ಯಾಸ ಮಾಡಲು ಸ್ಟಡಿ ಹಾಲ್ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿ ಪ್ರತಿ ವಿದ್ಯಾರ್ಥಿನಿಗೆ ಪ್ರತ್ಯೇಕ ಕಂಪಾರ್ಟಮೆಂಟ್ ಟೇಬಲ್, ವೈಫೈ ವ್ಯವಸ್ಥೆಯೂ ಇದೆ. ಇಷ್ಟು ಮಾತ್ರವಲ್ಲ ಪಿಜಿ ವಿದ್ಯಾರ್ಥಿನಿಯರಿಗೆ ತಿಂಗಳಿಗೊಮ್ಮೆ ನುರಿತ ತಜ್ಞರಿಂದ ತರಬೇತಿ ಕೊಡಿಸುತ್ತಾರೆ. ಕೇವಲ ಐಎಎಸ್ ಮಾತ್ರವಲ್ಲ ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೇಕಾದ ಪುಟ್ಟದಾದ ಲೈಬ್ರರಿಯನ್ನು ಸಹ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ : ಕುಸಿದ ಮೈಸೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ರೂಂಗಳ ಮೇಲ್ಛಾವಣಿ; ಜೀವ ಭಯದಲ್ಲಿ ವಿದ್ಯಾರ್ಥಿಗಳು
ರಾಜ್ಯದ ನಾನಾ ಮೂಲೆಗಳಿಂದ ಬಂದ ಪ್ರತಿಭಾವಂತ ಬಡ ವಿದ್ಯಾರ್ಥಿನಿಯರಿಗೆ ಸ್ಟಡಿ ರೂಮ್, ಲೈಬ್ರರಿ ಉಚಿತ ಮಾತ್ರವಲ್ಲದೆ ಅತ್ಯಂತ ಕಡಿಮೆ ದರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಿದ್ದಾರೆ. ಪ್ರತಿ ವರ್ಷ ಶೇ.2ರಷ್ಟು ಬಡ ವಿದ್ಯಾರ್ಥಿನಿಯರಿಗೆ ಆಶ್ರಯ ಪಿಜಿ ವತಿಯಿಂದ ಸಂಪೂರ್ಣ ತರಬೇತಿ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ