ನಾನು ಸಿಎಂ ಆಗಿದ್ದವನು; ನೂತನ ಸಂಪುಟದಲ್ಲಿ ಸಚಿವನಾಗಿ ಮುಂದುವರೆಯಲ್ಲ: ಜಗದೀಶ್​ ಶೆಟ್ಟರ್​

ಮಾಜಿ ಸಿಎಂ ಆಗಿದ್ದವರು ಮತ್ತೆ ಮಂತ್ರಿಯಾಗುತ್ತಾರೆಯೇ ಎನ್ನುವ ಅನುಮಾನ ಆಗಲೂ ಕಾಡಿತ್ತು. ಆದರೆ ಅವರು ಎಲ್ಲಾ ಊಹಾಪೋಹಗಳನ್ನು ಬುಡಮೇಲು ಮಾಡಿ ಸಚಿವರಾಗಿದ್ದರು. ಆದರೆ ಈಗ ಪಕ್ಷದಲ್ಲಿ ತನಗಿಂತ ಕಿರಿಯನಾದ ಹಾಗೂ ವಲಸಿಗ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿರುವುದು ಇವರ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

 • Share this:
  ಬೆಂಗಳೂರು: ನಾನು ಸಿಎಂ ಆಗಿದ್ದವನು, ಹಾಗಾಗಿ ನೂತನ ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ  ಸಚಿವ ನಾಗಿ ಕೆಲಸ ಮಾಡೋದು ಬೇಡ ಎಂಬುದಾಗಿ ನಿರ್ಧಾರ ಮಾಡಿದ್ದೀನಿ ಎಂದು ಸಚಿವ, ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸ್ಪೋಟಕ ಹೇಳಿಕೆ ನೀಡಿದ್ದಾರೆ.

  ಈ ಬಾರಿಯ ಸಂಪುಟದಲ್ಲಿ ಸೇರ್ಪಡೆಯಾಗಬಾರದೆಂಬ ನಿರ್ಧಾರ ಮಾಡಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಈ ಹಿಂದೆ ಯಡಿಯೂರಪ್ಪನವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ಮಾಜಿ ಸಿಎಂ ಆಗಿದ್ದರೂ ಕಳೆದ ಬಾರಿ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವನಾಗಿದ್ದೆ. ಇದು ನನ್ನ ವೈಯಕ್ತಿಯ ನಿರ್ಧಾರವಾಗಿದ್ದು, ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ನನ್ನ ಅಭಿಪ್ರಾಯವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ನಳೀನ್​ ಕುಮಾರ್​ ಕಟೀಲ್​  ಮತ್ತು ಹೈಕಮಾಂಡ್ ಗೆ ಈಗಾಗಲೇ ತಂದಿದ್ದೇನೆ ಎಂದು ಹೇಳಿದರು.

  ನಾನೊಬ್ಬ ಹಿರಿಯ ನಾಯಕನಾದ ಕಾರಣ ಬೊಮ್ಮಾಯಿ ಅವರ ಸಂಪುಟ ಸೇರ್ಪಡೆಯಾಗದಿರಲು ತೀರ್ಮಾನಿಸಿದ್ದೇನೆ. ಬೇರೆ ಯಾವ ಹುದ್ದೆಯ ಮೇಲೂ ನಾನು ಕಣ್ಣಿಟ್ಟಿಲ್ಲ. ಒಂದು ವೇಳೆ ಪಕ್ಷದ ಹೈಕಮಾಂಡ್ ಇಂತಹ ಕೆಲಸ ಮಾಡಿ ಎಂದು ಸೂಚಿಸಿದರೆ ಆ ಕೆಲಸ ಮಾಡಲು ನಾನು ಸಿದ್ದ.

  ಹೊಸ ಸಿಎಂ ಬೊಮ್ಮಾಯಿ ಅವರ ಸಂಪುಟ ರಚನೆ ಪ್ರಕ್ರಿಯೆ ಆರಂಭಗೊಂಡಿದೆ. ಆದು ಯಾವಾಗಾ ಪೂರ್ಣಗೊಳ್ಳುತ್ತೋ ಗೊತ್ತಿಲ್ಲ. ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ನಾನು ಸಚಿವನಾಗಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಪುನಃರುಚ್ಚರಿಸಿದ್ದಾರೆ.

  ಈಗ ಬೊಮ್ಮಯಿ ಮುಖ್ಯಮಂತ್ರಿ ಆಗಿದ್ದಾರೆ. ಈಗ ಆ ಬಗ್ಗೆ ಮಾತಾಡಲು ನಾನು ಹೋಗುವುದಿಲ್ಲ. ಅಲ್ಲದೇ  ರಾಜ್ಯಪಾಲ, ಸ್ಪೀಕರ್​ ಹೀಗೆ ಯಾವುದೇ ಹುದ್ದೆಯ ಮೇಲೆ ನನಗೆ ಕಣ್ಣಿಲ್ಲ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿರೋ ಬಗ್ಗೆ ತೃಪ್ತಿ ಅತೃಪ್ತಿ ಪ್ರಶ್ನೆ ಈಗ ಬರುವುದಿಲ್ಲ ಆದರೆ ನಾನು ಪಕ್ಷದ ಆದೇಶಕ್ಕೆ ಬದ್ದನಾಗಿರುತ್ತೇನೆ ಎಂದು ನುಡಿದರು.

  ಸಿಎಂ ರೇಸ್ ನಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೂಡ ಪ್ರಸ್ತಾಪವಾಗಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಾಗ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಅಲ್ಲದೇ ಕೊನೆಯದಾಗಿ ಜಗದೀಶ್​ ಶೆಟ್ಟರ್​ ಬಿಜೆಪಿ ಸರ್ಕಾರವನ್ನು ಮುನ್ನಡೆಸಿದ್ದರು.

  ಇದನ್ನೂ ಓದಿ: ಕೊರೋನಾ ನಡುವೆಯೂ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ಬರೆದ ಭಾರತ: ಆಹಾರ ಶೃಂಗಸಭೆಗೆ ಶೋಭಾ ಕರಂದ್ಲಾಜೆ ಸಿದ್ಧತೆ

  ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದಾಗಲೂ ಸಹ ಜಗದೀಶ್​ ಶೆಟ್ಟರ್​ ಸಚಿವ ಸ್ಥಾನವನ್ನು ಒಪ್ಪಿಕೊಳ್ಳುತ್ತಾರ ಎನ್ನುವ ಅನುಮಾನ ಕಾಡಿತ್ತು. ಮಾಜಿ ಸಿಎಂ ಆಗಿದ್ದವರು ಮತ್ತೆ ಮಂತ್ರಿಯಾಗುತ್ತಾರೆಯೇ ಎನ್ನುವ ಅನುಮಾನ ಆಗಲೂ ಕಾಡಿತ್ತು. ಆದರೆ ಅವರು ಎಲ್ಲಾ ಊಹಾಪೋಹಗಳನ್ನು ಬುಡಮೇಲು ಮಾಡಿ ಸಚಿವರಾಗಿದ್ದರು. ಆದರೆ ಈಗ ಪಕ್ಷದಲ್ಲಿ ತನಗಿಂತ ಕಿರಿಯನಾದ ಹಾಗೂ ವಲಸಿಗ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿರುವುದು ಇವರ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಲಿಂಗಾಯತ ಸಮುದಾಯಕ್ಕೆ ಸೇರಿದ ಶೆಟ್ಟರ್​ ಹುಬ್ಬಳ್ಳಿ ಭಾಗದಲ್ಲಿ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: