ಯಡಿಯೂರಪ್ಪ ದೆಹಲಿಗೆ ಹೋಗಿ ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತು; ಸಿಎಂ ಕುಮಾರಸ್ವಾಮಿ

news18
Updated:August 19, 2018, 10:56 AM IST
ಯಡಿಯೂರಪ್ಪ ದೆಹಲಿಗೆ ಹೋಗಿ ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತು; ಸಿಎಂ ಕುಮಾರಸ್ವಾಮಿ
news18
Updated: August 19, 2018, 10:56 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ.19) : "ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಏನೇನು ಮಾಡುತ್ತಾರೆ ಎಂಬುದೆಲ್ಲಾ ನನಗೆ ಚೆನ್ನಾಗಿ ಗೊತ್ತು," ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಸದ್ದಿಲ್ಲದೆ ಕಸರತ್ತು ನಡೆಸುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

ಕೊಡಗಿನ ಪ್ರವಾಹ ಮತ್ತು ಪರಿಹಾರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೃಹಕಚೇರಿ ಕೃಷ್ಣಾದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದರು. ಆನಂತರ ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆಗೆ ಹೊರಡುವ ಮುನ್ನ ಸುದ್ದಿಗಾರರಿಗೆ ಈ ಹೇಳಿಕೆ ನೀಡಿರುವ ಅವರು, "ಯಡಿಯೂರಪ್ಪ ದೆಹಲಿಯಲ್ಲಿ ನಡೆಸುತ್ತಿರುವ ಕರಾಮತ್ತು ಏನೇನು ಎಂಬುದು ಗೊತ್ತು. ಸಮಯ ಬಂದಾಗ ಈ ಬಗ್ಗೆ ಹೇಳುತ್ತೇನೆ. ಸಾಲ ಮನ್ನಾ ಸೇರಿದಂತೆ ಯಾವ್ಯಾವ ಯೋಜನೆಗೆ ಅಡ್ಡಿ ಮಾಡುತ್ತಿದ್ದಾರೆ ಎಲ್ಲಾ ಗೊತ್ತು. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಭದ್ರವಾಗಿದೆ. ಏನೇ ತಂತ್ರ, ಕುತಂತ್ರ ನಡೆಸಿದರೂ ಸರ್ಕಾರ ಉರುಳಿಸಲು ಸಾಧ್ಯವಿಲ್ಲ,'' ಎಂದು ಹೇಳಿದರು.‘

ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಶೀತಲ ಸಮರದ ವಾತಾವರಣ ಕಂಡು ಬರುತ್ತಿದೆ. ಸಾಲಮನ್ನಾ ವಿಚಾರ, ಪಕ್ಷದೊಳಗಿನ ಅಸಮಾಧಾನವನ್ನು ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹರಸಾಹಸ ಪಡುತ್ತಿದೆ. ಈ ನಡುವೆ ಕಳೆದ ವಾರ ಬಿ.ಎಸ್​.ಯಡಿಯೂರಪ್ಪ ದೆಹಲಿಗೆ ತೆರಳುವ ವಿಮಾನದಲ್ಲಿಯೇ ಕಾಂಗ್ರೆಸ್​ನ ಕೆಲ ಅಸಮಾಧಾನಿತ ಶಾಸಕರು ಪ್ರಯಾಣ ಬೆಳೆಸಿದ್ದರು. ಕಾಂಗ್ರೆಸ್​ನ ಈ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು. ಈ ಬೆಳವಣಿಗೆಗಳ ನಡುವೆ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹೇಳಿಕೆ ನೀಡಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...