ಸರ್ಕಾರಿ ದಾಖಲೆಗಳನ್ನು ತೆಗೆಯುವ ನಕಲಿ ಕೀ ಈಗ ನನ್ನ ಬಳಿ ಇಲ್ಲ, ಬೀಗ ತೆಗೆಯುವವರನ್ನು ಹುಡುಕುತ್ತಿದ್ದೇನೆ; ಎಚ್.ಡಿ.ರೇವಣ್ಣ

ದೇವೇಗೌಡರ ಕುಟುಂಬದ ವಿಷಯ ಅಂದ್ರೆ ಯಡಿಯೂರಪ್ಪ ಸರ್ಕಾರ ರಾತ್ರಿ 7 ಗಂಟೆಗೆ ಓಪನ್ ಆಗುತ್ತೆ. ಇದನ್ನು ಹೇಗೆ ರಿಪೇರಿ ಮಾಡ್ಬೇಕು ಅನ್ನೋದು ಗೊತ್ತಿದೆ. ನಾನು 5 ಬಾರಿ ಶಾಸಕನಾಗಿದ್ದವನು, ನನಗೆ ಎಲ್ಲವೂ ಗೊತ್ತಿದೆ ಎಂದು ಸಿಎಂ ಬಿಎಸ್​ವೈ ವಿರುದ್ಧ ರೇವಣ್ಣ ಗರಂ ಆದರು.

HR Ramesh | news18-kannada
Updated:December 18, 2019, 4:07 PM IST
ಸರ್ಕಾರಿ ದಾಖಲೆಗಳನ್ನು ತೆಗೆಯುವ ನಕಲಿ ಕೀ ಈಗ ನನ್ನ ಬಳಿ ಇಲ್ಲ, ಬೀಗ ತೆಗೆಯುವವರನ್ನು ಹುಡುಕುತ್ತಿದ್ದೇನೆ; ಎಚ್.ಡಿ.ರೇವಣ್ಣ
ಹೆಚ್.ಡಿ. ರೇವಣ್ಣ
  • Share this:
ಬೆಂಗಳೂರು: ಸರ್ಕಾರಿ ದಾಖಲೆಗಳು ಬೇಕಂದರೆ ನನ್ನ ಕೇಳಿ, ಸರ್ಕಾರಿ ದಾಖಲೆಗಳನ್ನು ತೆಗೆಯುವ ಕೀ ನನ್ನ ಬಳಿ ಇದೆ ಎಂದು ಹೇಳಿಕೊಂಡಿದ್ದ ರೇವಣ್ಣ, ಇದೀಗ ಹೊಸ ಕೀ ಮಾಡಿಸಿಕೊಳ್ಳಬೇಕು. ಯಾರನ್ನಾದರೂ ಹುಡುಕೊಂಡು ಮಾಡಿಸಿಕೊಳ್ಳುತ್ತೇವೆ ಬಿಡಿ  ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ದಾಖಲೆ ಕೊಡುತ್ತಿಲ್ಲ ಅಂತಾ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಆಗ ನಾನು ದಾಖಲೆ ಕೊಡ್ತೀನಿ, ನಕಲಿ ಕೀ ನನ್ ಹತ್ರ ಇದೆ ಅಂತೇಳಿದ್ದೆ. ಈಗ ಡೂಪ್ಲಿಕೇಟ್ ಕೀ ಇಲ್ಲ. ಒಂದು ಕೀ ಮಾಡಿಸ್ಕೋಬೇಕು, ದಾಖಲೆಗಳ ಬೀಗ ತೆಗೆಯುವವರನ್ನು ಹುಡುಕಬೇಕು ಎಂದು ವಿಧಾನಸೌಧದಲ್ಲಿ ಎಚ್.ಡಿ. ರೇವಣ್ಣ ಹೇಳಿದರು.

ಯಡಿಯೂರಪ್ಪ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. 7 ಗಂಟೆಗೆ ಕೆಎಂಎಫ್ ವಿಚಾರವಾಗಿ ಒಂದು ಆದೇಶ ಮಾಡ್ತಾರೆ. ದೇವೇಗೌಡರ ಕುಟುಂಬದ ವಿಷಯ ಅಂದ್ರೆ ಯಡಿಯೂರಪ್ಪ ಸರ್ಕಾರ ರಾತ್ರಿ 7 ಗಂಟೆಗೆ ಓಪನ್ ಆಗುತ್ತೆ. ಇದನ್ನು ಹೇಗೆ ರಿಪೇರಿ ಮಾಡ್ಬೇಕು ಅನ್ನೋದು ಗೊತ್ತಿದೆ. ನಾನು 5 ಬಾರಿ ಶಾಸಕನಾಗಿದ್ದವನು, ನನಗೆ ಎಲ್ಲವೂ ಗೊತ್ತಿದೆ ಎಂದು ಸಿಎಂ ಬಿಎಸ್​ವೈ ವಿರುದ್ಧ ರೇವಣ್ಣ ಗರಂ ಆದರು.

ಉಪ ಚುನಾವಣೆ ಹೇಗೆ ನಡೆಯಿತು ಅಂತ ಗೊತ್ತಿದೆ.‌ ಪ್ರತಿ ಕ್ಷೇತ್ರಕ್ಕೆ 50ರಿಂದ 60 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಶಾಸಕರು ಪಕ್ಷ ಬಿಡುವ ವಿಚಾರ ನನಗೆ ಗೊತ್ತಿಲ್ಲ. ಇದು ದೇವೇಗೌಡರಿಗೆ, ಕುಮಾರಸ್ವಾಮಿಗೆ ಬಿಟ್ಟಿದ್ದು. ಅವರು ಪಕ್ಷ ಉಳಿಸುವ ಕೆಲ್ಸ ಮಾಡ್ತಾರೆ. ನಾನು ಸಾಮಾನ್ಯ ಶಾಸಕ.‌ ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಕುಮಾರಸ್ವಾಮಿ ಯಾಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬಿಟ್ಟುಕೊಡಬೇಕು? ಅವರೇನು ತಪ್ಪು ಮಾಡಿದ್ದಾರೆ? ಎಂದು ಸಹೋದರನ ಪರವಾಗಿ ಮಾತನಾಡಿದರು.

ಇದನ್ನು ಓದಿ: ನಂಬಿಹಳ್ಳಿ ಗಲಭೆ ಪ್ರಕರಣದಲ್ಲಿ ಬಿಜೆಪಿ ಕೈಗೊಂಬೆಯಂತೆ ಅಧಿಕಾರಿಗಳ ವರ್ತನೆ; ರೇವಣ್ಣ ಆರೋಪ

ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಸರ್ಕಾರದ ನ್ಯೂನತೆಯನ್ನು ಸದ್ಯದಲ್ಲೇ ಎಳೆ ಎಳೆಯಾಗಿ ಬಿಡಿಸಿ ಇಡ್ತೀನಿ. ಇತ್ತೀಚೆಗೆ ಸಿಎಂ ರಾಜ್ಯವನ್ನು ಸುವರ್ಣ ಕರ್ನಾಟಕ ಮಾಡ್ತೀನಿ ಅಂತ ಹೇಳಿದ್ದಾರೆ. ಇದಕ್ಕೆ ದೇವೇಗೌಡ ಮತ್ತು ಅವರ ಮಕ್ಕಳು ಅಡ್ಡ ಬರಲ್ಲ. ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಗ್ರೇಡ್-1 ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಈಗಾಗಲೇ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ. ಇದಕ್ಕೆ ಅಂದಾಜು 2 ಕೋಟಿ ಖರ್ಚಾಗಿದೆ. 64 ಸಾವಿರ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಅಕ್ರಮ ಆಗಿದೆ ಎಂಬ ನೆಪ ಒಡ್ಡಿ ನೇಮಕ ಪ್ರಕ್ರಿಯೆಯನ್ನು ಕೆಪಿಎಸ್​ಸಿಗೆ ನೀಡಲು ಸರಕಾರ ಮುಂದಾಗಿದೆ. ಕೆಪಿಎಸ್​ಸಿ ಇತಿಹಾಸ ನನಗೂ ಗೊತ್ತಿದೆ. ಅಲ್ಲಿ ಭ್ರಷ್ಟಾಚಾರ ಇಲ್ಲವೇ? ಆಕಾಂಕ್ಷಿಗಳಿಗೆ ತೊಂದರೆ ನೀಡಿ ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ತರವಲ್ಲ. ಈ ಅಕ್ರಮದಲ್ಲಿ ನನ್ನ ಕೈವಾಡ ಸಹ ಇದೆ ಎಂಬ ಆರೋಪವೂ ಇದೆ. ಇದು ಸತ್ಯಕ್ಕೆ ದೂರವಾದದ್ದು. ಬೇಕಿದ್ದರೆ ಈ ಬಗ್ಗೆ ತನಿಖೆ ನಡೆಸಲಿ ನನ್ನ ಪಾತ್ರ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
 
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ