ಬೆಂಗಳೂರು: ಭಾರತ ಸರ್ಕಾರದಿಂದ (Government of India) ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna) ಅವರು ಪದ್ಮವಿಭೂಷಣ (Padma Vibhushan) ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದರು ಅವರು ಪದ್ಮ ವಿಭೂಷಣೆ ಸಂದಿರುವುದಕ್ಕೆ ಬಹಳ ಸಂತೋಷ ಆಗುತ್ತಿದೆ. ನಾನು ರಾಜಕೀಯ ನಿವೃತ್ತಿ ಜೀವನ ಆರಂಭಿಸುತ್ತಿರುವ ಘಟ್ಟದಲ್ಲಿ ಈ ಗೌರವ ಬಂದಿರುವುದು ಬಯಸದೇ ಬಂದ ಭಾಗ್ಯವಾಗಿದೆ. ಮತ್ತು ಈ ಪ್ರಶಸ್ತಿಯನ್ನು ಕಳೆದ 6 ದಶಕಗಳಿಂದ ನನ್ನನ್ನು ಬೆಂಬಲಿಸಿದ 7 ಕೋಟಿ ಕನ್ನಡಿಗರಿಗೆ ನಮ್ರತೆಯಿಂದ ಅರ್ಪಿಸುತ್ತೇನೆ ಎಂದು ಎಸ್. ಎಂ ಕೃಷ್ಣ ಹೇಳಿದ್ದಾರೆ.
ಗುರುವಾರ ಭಾರತ ಸರ್ಕಾರ 2023ರ ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿತ್ತು. ಕರ್ನಾಟಕದ 8 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಎಸ್ಎಂ ಕೃಷ್ಣರಿಗೆ ಪದ್ಮವಿಭೂಷಣ, ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ (Sudha Murthy) ಮತ್ತು ಸಾಹಿತಿ ಎಸ್ಎಲ್ ಭೈರಪ್ಪರಿಗೆ (SL Bhyrappa) ಪದ್ಮಭೂಷಣೆ ಪ್ರಶಸ್ತಿ ಲಭಿಸಿತ್ತು.
ಪ್ರಧಾನಿ ಮೋದಿಯವರಿಗೆ ಋಣಿಯಾಗಿದ್ದೇನೆ
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಶಸ್ತಿಗಳನ್ನು ನಿವೃತ್ತಿ ಅದವರಿಗೆ ಕೊಡಬೇಕು ಎನ್ನುವ ನಿಯಮ ಏನಿತ್ತು? ಆದರೂ ನನಗೆ ಕೊಟ್ಟಿದ್ದಾರೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಋಣಿಯಾಗಿದ್ದೇನೆ. ನಾನು ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಈ ಸಮೀಪದಲ್ಲೇ ಈ ಪ್ರಶಸ್ತಿ ಬಂದಿದೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ಆರು ದಶಕಗಳಿಂದ ನನ್ನನ್ನು ಸಾಕಿ ಸಲುಹಿದ ಕನ್ನಡದ ಏಳು ಕೋಟಿ ಜನರಿಗೆ ನಮ್ರತೆಯಿಂದ ಈ ಪ್ರಶಸ್ತಿ ಸಮರ್ಪಣೆ ಮಾಡುತ್ತೇನೆ ಎಂದರು.
ಪ್ರಶಸ್ತಿಗೆ ಅರ್ಹನಲ್ಲ ಎಂಬ ಅಳುಕಿತ್ತು
ನನಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಇಷ್ಟು ದೊಡ್ಡ ಪ್ರಶಸ್ತಿ ಪಡೆಯಲು ನಾನು ಅರ್ಹನು ಅಲ್ಲ ಎಂಬ ಅಳುಕಿತ್ತು. ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಸಾಕಷ್ಟು ಜನರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಮಸ್ತ ಏಳೂವರೆ ಕೋಟಿ ಕನ್ನಡಿಗರಿಗೆ ಸಿಕ್ಕ ಗೌರವ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷದವರಿಂದ ಅಭಿನಂದನೆ
ಈಗಾಗಲೇ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ. ಈ ಸಂದರ್ಭದಲ್ಲಿ ನನಗೆ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿರುವುದರಿಂದ ಎಲ್ಲಾ ಪಕ್ಷದ ನಾಯಕರು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿವೃತ್ತಿಯ ಬಳಿಕ ನಾನೂ ಕೂಡ ಯಾವುದೇ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮೇಲೆ ಪರ-ವಿರೋಧ ಅಭಿಪ್ರಾಯಗಳು ಇದ್ದೇ ಇರುತ್ತವೆ ಎಂದು ಅಭಿಪ್ರಾಯಪಟ್ಟರು.
ಎಸ್ಎಂ ಕೃಷ್ಣ ರಾಜಕೀಯ ಜೀವನ
ಎಸ್‌ಎಂ ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಇವರು ಮೂಲ ಕಾಂಗ್ರೆಸಿಗರಾಗಿದ್ದು, ನಾಲ್ಕೈದು ದಶಕಗಳನ್ನು ಅದೇ ಪಕ್ಷದಲ್ಲಿ ಕಳೆದರೂ 2017ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಎಸ್ ಎಂ ಕೃಷ್ಣ ಅವರು 1999ರಿಂದ 2004ರ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ನಂತರ 2004ರಿಂದ 2008ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 2009ರಿಂದ ಅಕ್ಟೋಬರ್ 2012ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
SM Krishna after being Conferred with #PadmaVibhushan Award says ,"I want to dedicate this award for people of #Karnataka because they have nurtured me for the last 6 decades"...@BJP4India @BJP4Karnataka pic.twitter.com/WIZF1NeLHt
— Yasir Mushtaq (@path2shah) January 26, 2023
ಐವರಿಗೆ ಪದ್ಮಶ್ರೀ ಗೌರವ
ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ , ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್‌ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು. ಹೀಗೆ ಕರ್ನಾಟಕದ ಒಟ್ಟು ಎಂಟು ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ