ಜಲಸಂಪನ್ಮೂಲ ಖಾತೆ ನಿಭಾಯಿಸಿ ತೋರಿಸುತ್ತೇನೆ : ಸಚಿವ ರಮೇಶ್ ಜಾರಕಿಹೊಳಿ

ಮಹೇಶ್ ಕುಮಟಳ್ಳಿಯಿಂದ ಬಿಜೆಪಿ ಸರ್ಕಾರ ಬಂದಿದೆ. ಮಹೇಶ್ ಕುಮಟಹಳ್ಳಿಗೆ ಉನ್ನತ ಹುದ್ದೆ ಸಿಗಲಿದೆ. ಅವರಿಗೆ ಅನ್ಯಾಯ ಮಾಡಲ್ಲ. ಅನ್ಯಾಯ ಆಗಿದೆ ಅಂತ ಒಂದು ಮಾತು ಹೇಳಿದ್ರೆ ನಾನು ಸಚಿವ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ

ರಮೇಶ್​ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ

  • Share this:
ಬೆಳಗಾವಿ(ಫೆ. 22): ನೀರಾವರಿ ಖಾತೆಯಲ್ಲಿ ಪಕ್ಷ, ಜಾತಿ ಬರಲ್ಲ. ನಮ್ಮ ಭಾಗಕ್ಕೆ ಅನುಕೂಲ ಆಗುವಂತೆ ಕೆಲಸ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಮಹದಾಯಿ ವಿಚಾರದಲ್ಲಿ ಗೆಜೆಟ್ ನೋಟಿಫಿಕೇಷನ್ ಬಗ್ಗೆ ಇದೇ 26 ರಂದು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ‌ ಚರ್ಚೆ ನಡೆಸುತ್ತೇನೆ ಎಂದರು

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಜೆಟ್​ನಲ್ಲಿ 200 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಇನ್ನೂ ಹೆಚ್ಚಿನ ಹಣ ನೀಡಲು ಸರ್ಕಾರ ಬದ್ಧವಾಗಿದೆ. ಮಹದಾಯಿ ವಿಚಾರದಲ್ಲಿ ಕುಡಿಯುವ ನೀರಿನ ಯೋಜನೆಗೆ ಯಾವುದೇ ಅನುಮತಿ ಬೇಕಿಲ್ಲ. ಗೋವಾ ಸುಪ್ರೀಂ ಕೋರ್ಟ್​ಗೆ ಹೋದರೆ ಹೋಗಲಿ. ನಾವು ಕಾನೂನಿನ ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ್ ಶೆಟ್ಟರ್ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್ ಇದ್ದರೆ ನಾನು ಇದ್ದ ಹಾಗೆಯೇ. ಅವರು ಒಳ್ಳೆಯವರು, ಅವರೇ ಇರಲಿ. ಅವರು ಆಗಲ್ಲ ಅಂದ ಮೇಲೆ ನಾನು ಜಿಲ್ಲಾ ಉಸ್ತುವಾರಿ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜಲ ಸಂಪನ್ಮೂಲ ಇಲಾಖೆ ದೊಡ್ಡದಾಗಿದೆ. ತನ್ನ ಕೈಯಲ್ಲಿ ಇದನ್ನು ನಿಭಾಯಿಸಲು ಆಗಲ್ಲ ಎಂದು ವಿರೋಧಿಗಳು ಹೇಳುತ್ತಾರೆ. ಆದರೆ, ನಾನು ಇದನ್ನು ನಿಭಾಯಿಸಿ ತೋರಿಸುತ್ತೇನೆ ಎಂದು ನೂತನ ಜಲಸಂಪನ್ಮೂಲ ಸಚಿವರು ಪಣತೊಟ್ಟರು.

ಕುಮಟಳ್ಳಿಗೆ ಅನ್ಯಾಯವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಜಾರಕಿಹೊಳಿ

ಮಹೇಶ್ ಕುಮಟಳ್ಳಿಯಿಂದ ಬಿಜೆಪಿ ಸರ್ಕಾರ ಬಂದಿದೆ. ಮಹೇಶ್ ಕುಮಟಹಳ್ಳಿಗೆ ಉನ್ನತ ಹುದ್ದೆ ಸಿಗಲಿದೆ. ಅವರಿಗೆ ಅನ್ಯಾಯ ಮಾಡಲ್ಲ. ಅನ್ಯಾಯ ಆಗಿದೆ ಅಂತ ಒಂದು ಮಾತು ಹೇಳಿದ್ರೆ ನಾನು ಸಚಿವ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಗೋಕಾಕ್ ಶಾಸಕರೂ ಆದ ಅವರು ಹೇಳಿದರು.

ಮಹೇಶ್ ಕುಮಟಳ್ಳಿ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಡಿಸಿಸಿ ಬ್ಯಾಂಕ್​ನಲ್ಲಿ ಬದಲಾವಣೆ ಬಗ್ಗೆ ಬಾಲಚಂದ್ರ, ಉಮೇಶ್ ಕತ್ತಿ ತೀರ್ಮಾನ ಕೈಗೊಳ್ಳುತ್ತಾರೆ. ಜಾರಕಿಹೊಳಿ ಕುಟುಂಬ ಮತ್ತು ಕತ್ತಿ ಕುಟುಂಬ ಯಾವಾಗಲೂ ಒಂದೇ ಎಂದು ಹೇಳಿದ ರಮೇಶ್ ಜಾರಕಿಹೊಳಿ, ತನಗೆ ಡಿಸಿಎಂ ಲಕ್ಷ್ಮಣ ಸವದಿಯ ಮುಂದಿನ ನಡೆ ಬಗ್ಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ನನ್ನ ಹಾಗೂ ಸವದಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಕುಮಟಳ್ಳಿ

ಲಕ್ಷ್ಮಣ್ ಸವದಿ ರಾಜಕೀಯ ಭವಿಷ್ಯಕ್ಕಾಗಿ ತಾನು ಬಲಿಯಾಗುತ್ತಿದ್ದೇನೆ ಎಂಬ ಆರೋಪಗಳನ್ನು ಕುಮಟಳ್ಳಿ ಅವರ ಬಲವಾಗಿ ನಿರಾಕರಿಸಿದರು. "ನನ್ನ ಹಾಗೂ ಲಕ್ಷ್ಮಣ್ ಸವದಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಮತ್ತು ಲಕ್ಷ್ಮಣ್ ಸವದಿ ಒಗ್ಗಟ್ಟಾಗಿದ್ದೇವೆ. ಸಾಕಷ್ಟು ಸಮಯ ಭೇಟಿಯಾಗಿದ್ದೇವೆ. ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಇಬ್ಬರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಒಂದು ಮನೆತನದಲ್ಲಿ ನಾಲ್ಕು ಮಂದಿ ಅಣ್ಣ ತಮ್ಮಂದಿರಿದ್ದರೆ ಭಿನ್ನಾಭಿಪ್ರಾಯ ಬರುವುದು ಸಹಜ" ಎಂದು ಮಹೇಶ್ ಕುಮಟಳ್ಳಿ ವ್ಯಾಖ್ಯಾನಿಸಿದರು.

ಮುಂದಿನ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಒಂದು ಜವಾಬ್ದಾರಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ನನಗೆ ಎಂಎಸ್‌ಐಎಲ್ ಕೊಟ್ಟಿದ್ದರು. ಲ್ಯಾಂಡ್ ಆರ್ಮಿ ಕೊಡಿ ಎಂದಿದ್ದೇನೆ. ಸಿವಿಲ್ ಇಂಜಿನಿಯರ್ ಆಗಿರುವುದರಿಂದ ಲ್ಯಾಂಡ್ ಆರ್ಮಿ ಕೊಡಿ ಎಂದು ಹೇಳಿದ್ದೇನೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು

ಇದನ್ನೂ ಓದಿ ;  ರಾಜ್ಯದ ಅಭಿವೃದ್ದಿ ಬಗ್ಗೆ ಕೇಳಿ - ಒಂದೇ ವಿಚಾರಕ್ಕೆ ಸೀಮಿತವಾಗಬೇಡಿ ; ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಸರ್ಕಾರದಿಂದ ನಾಮನಿರ್ದೇಶನ ಮಾಡಿ ಅಂತಾ ನಾನು ಕೇಳಿಲ್ಲ. ನಾನು ಯಾವುದೇ ಸೊಸೈಟಿಯ ಸದಸ್ಯನಿಲ್ಲ, ಅಧ್ಯಕ್ಷನೂ ಇಲ್ಲ. ಡಿಸಿಸಿ ಬ್ಯಾಂಕ್ ಎಲೆಕ್ಷನ್​ಗೆ ನನಗೆ‌ ನಿಲ್ಲುವುದಕ್ಕೆ ಬರಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿಗೆ ಬೆಂಬಲ ಕೊಡುತ್ತೇವೆ ಎಂದು ಕುಮಟಳ್ಳಿ ಸ್ಪಷ್ಟನೆ ನೀಡಿದರು.
First published: