ನಾನು ಸಿಎಂ ಆಗೋಕೆ ರಾಜಪ್ಪ ಮೇಷ್ಟ್ರು ಕಾರಣ: ಶಿಕ್ಷಕರ ದಿನಾಚರಣೆಯಂದು ಗುರುಗಳನ್ನು ನೆನೆದ ಸಿದ್ದರಾಮಯ್ಯ

ರಾಜಪ್ಪ ಮೇಷ್ಟ್ರು ಶಾಲೆಗೆ ಸೇರದೇ ಇರೋ ಮಕ್ಕಳನ್ನು ಮನೆ ಮನೆಗೆ ಹೋಗಿ ಕರೆದುಕೊಂಡು ಬರುತ್ತಿದ್ರು. ಹಾಗೆಯೇ ಈಶ್ವರಾಚಾರ್ಯ ಮೇಷ್ಟ್ರು ನಮಗೆ ಕನ್ನಡ ವ್ಯಾಕರಣ ಹೇಳಿಕೊಡುತ್ತಿದ್ದರು. ಶಾಲೆ ಬಿಟ್ಟ ಬಳಿಕ ಅವರ ಬಳಿ ಮನೆಪಾಠಕ್ಕೆಂದು ಹೋಗ್ತಿದ್ದೆ. ಅವರು ಹೇಳಿಕೊಟ್ಟ ವ್ಯಾಕರಣ ಯಥಾವತ್ತಾಗಿ ಹೇಳಿದೆ ಎಂದು ತಮ್ಮ ಮೆಚ್ಚಿನ ಗುರುಗಳೊಂದಿಗಿನ ಒಡನಾಟದ ನೆನಪನ್ನು ಸಿದ್ದರಾಮಯ್ಯ ಹಂಚಿಕೊಂಡರು.

G Hareeshkumar | news18
Updated:September 6, 2019, 9:40 AM IST
ನಾನು ಸಿಎಂ ಆಗೋಕೆ ರಾಜಪ್ಪ ಮೇಷ್ಟ್ರು ಕಾರಣ: ಶಿಕ್ಷಕರ ದಿನಾಚರಣೆಯಂದು ಗುರುಗಳನ್ನು ನೆನೆದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: September 6, 2019, 9:40 AM IST
  • Share this:
ಬಾಗಲಕೋಟೆ (ಸೆ. 05): ತಾನು ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆಯಲು ತಮ್ಮ ಗುರುಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿಕ್ಷಕರ ದಿನಾಚರಣೆಯಂದು ಅವರು ತಮ್ಮ ಮೆಚ್ಚಿನ ಮೇಷ್ಟ್ರನ್ನು ಹಾಗೂ ತಾವು ಶಾಲೆಗೆ ಸೇರಿದ ಘಳಿಗೆಯನ್ನು ನೆನಪಿಸಿಕೊಂಡರು. ಆ ಮೇಷ್ಟ್ರು ಇಲ್ಲದೇ ಹೋಗಿದ್ದರೆ ತಾನು ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ತಮ್ಮ ಹಿಂದಿನ ಗುರುಶಕ್ತಿಯನ್ನು ಸ್ಮರಿಸಿಕೊಂಡರು.

ನಮ್ಮ ಮನೆಗೆ ರಾಜಪ್ಪ ಮೇಷ್ಟ್ರು ಬಂದು ತಂದೆಗೆ ಹೇಳಿ ಶಾಲೆಗೆ ಕರೆದುಕೊಂಡು ಹೋದರು. ನನ್ನನ್ನು ಸೇರಿ ಮೂವರನ್ನು ಸರ್ಕಾರದಿಂದ ಅನುಮತಿ ಪಡೆದು ನೇರವಾಗಿ ಐದನೇ ಕ್ಲಾಸಿಗೆ ಸೇರಿಸಿದ್ರು‌‌. ನನ್ನನ್ನು ನೇರವಾಗಿ ಐದನೆ ತರಗತಿಗೆ ಸೇರಿಸಿ, ವಿದ್ಯಾವಂತರಂತಾಗುವಂತೆ ಮಾಡಿದರು. ಇಲ್ಲದಿದ್ದರೆ ನಾನು ಓದಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾನು ಮುಖ್ಯಮಂತ್ರಿ ಆಗುವುದಕ್ಕೆ ರಾಜಪ್ಪ ಮೇಷ್ಟ್ರೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ರಾಜಪ್ಪ ಮೇಷ್ಟ್ರು ಶಾಲೆಗೆ ಸೇರದೇ ಇರೋ ಮಕ್ಕಳನ್ನು ಮನೆ ಮನೆಗೆ ಹೋಗಿ ಕರೆದುಕೊಂಡು ಬರುತ್ತಿದ್ರು. ಹಾಗೆಯೇ ಈಶ್ವರಾಚಾರ್ಯ ಮೇಷ್ಟ್ರು ನಮಗೆ ಕನ್ನಡ ವ್ಯಾಕರಣ ಹೇಳಿಕೊಡುತ್ತಿದ್ದರು. ಶಾಲೆ ಬಿಟ್ಟ ಬಳಿಕ ಅವರ ಬಳಿ ಮನೆಪಾಠಕ್ಕೆಂದು ಹೋಗ್ತಿದ್ದೆ. ಅವರು ಹೇಳಿಕೊಟ್ಟ ವ್ಯಾಕರಣ ಯಥಾವತ್ತಾಗಿ ಹೇಳಿದೆ ಎಂದು ತಮ್ಮ ಮೆಚ್ಚಿನ ಗುರುಗಳೊಂದಿಗಿನ ಒಡನಾಟದ ನೆನಪನ್ನು ಸಿದ್ದರಾಮಯ್ಯ ಹಂಚಿಕೊಂಡರು.

ಇದನ್ನೂ ಓದಿ : ಕಾಂಗ್ರೆಸ್​ ಕಾರ್ಯಕರ್ತನಿಗೆ ಕಪಾಳಮೋಕ್ಷ; ಸ್ಪಷ್ಟನೆ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ಅಧಿವೇಶನದಲ್ಲಿ ನಡೆದ ವ್ಯಾಕರಣ ಪಾಠದ ಸಂದರ್ಭವನ್ನು ಸ್ಮರಿಸಿಕೊಂಡ ಸಿದ್ದರಾಮಯ್ಯ, ಸಂಧಿ ಅಂದ್ರೆ ಏನು ಅಂತ ಅಧಿವೇಶನದಲ್ಲಿ ಕೇಳಿದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರಿಗೂ ಸಂಧಿ ವಿಚಾರ ಗೊತ್ತಿರಲಿಲ್ಲ. ಎಂಎಲ್​ಸಿ ಪುಟ್ಟಸ್ವಾಮಿಯನ್ನು ಸಂಧಿ  ಅಂದ್ರೆ ಏನು ಕೇಳಿದ್ರೆ, ನಮ್ಮ ಮನೆ ಇನ್ನೊಬ್ಬರ ಮನೆ ಮಧ್ಯೆ ಇರೋದು ಸಂಧಿ ಅಂತ ಹೇಳಿದ್ರು. ಆಗ ಎಲ್ಲರೂ ನಕ್ಕುಬಿಟ್ಟರು ಎಂದು ತಮಾಷೆ ಮಾಡಿದರು.

ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ  ಮಹತ್ವವಾದುದ್ದು

ಸಮಾಜದಲ್ಲಿ  ಶಿಕ್ಷಕರ ಪಾತ್ರ ಬಹಳ  ಮಹತ್ವದ್ದು. ರೈತರು, ಶಿಕ್ಷಕರು, ಸೈನಿಕರು ಮೂವರ ಪಾತ್ರ ಅತೀ ಮುಖ್ಯವಾಗುತ್ತದೆ. ಈ ಮೂರು ವರ್ಗದ ಜನರು ತಮ್ಮ ಸೇವೆ ಮೂಲಕ ಸಮಾಜಕ್ಕೆ ಬಹಳ ಮಹತ್ತರ ಕೊಡುಗೆ ಕೊಟ್ಟಿದ್ದಾರೆ. ಶಿಕ್ಷಕರು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಶಿಕ್ಷಕರನ್ನು ದೇವರ ಸ್ಥಾನದಲ್ಲಿಡ್ತಾರೆ. ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ ಅಂತ ಹೇಳಿದ್ದಾರೆ ಎಂದು ಶಿಕ್ಷಕರ ಮಹತ್ವದ ಬಗ್ಗೆ ಬಾದಾಮಿ ಕ್ಷೇತ್ರದ ಶಾಸಕರು ಮಾತನಾಡಿದರು.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನೇ ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಲಾಗುತ್ತಿದೆ. ರಾಧಾಕೃಷ್ಣನ್ ಅವರು ನಮ್ಮ ಮೈಸೂರಿನಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿದ್ದರು. ದೇಶದ ಮೊದಲ ಉಪರಾಷ್ಟ್ರಪತಿಯಾಗಿದ್ದರು. ರಾಧಾಕೃಷ್ಣನ್ ಓರ್ವ ಮಹಾನ್ ತತ್ವಜ್ಞಾನಿ. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದುಕೊಂಡಿದ್ರು. ದೇಶಾದ್ಯಂತ ಇವತ್ತು ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಕಾನೂನು ಕಾಲೇಜಿನಲ್ಲಿ ಪಾಠ ಮಾಡಿದ್ದ ಸಿದ್ದರಾಮಯ್ಯ

ನಾನು ಸ್ವಲ್ಪ ದಿನ ಶಿಕ್ಷಕನಾಗಿದ್ದೆ. ಕಾನೂನು ಕಾಲೇಜಿನಲ್ಲಿ ಮೂರು ವರ್ಷ ಕಾಲ ಪಾಠ ಮಾಡಿದ್ದೆ. ಅರೆಕಾಲಿಕ ಮೇಷ್ಟ್ರು ಆಗಿದ್ದೆ. ನಾನು ನಿಮ್ಮ ವರ್ಗಕ್ಕೆ ಸೇರಿಹೋಗಿದ್ದೇನೆ. ವಕೀಲ ವೃತ್ತಿಗಿಂತಲೂ  ಶಿಕ್ಷಕ ವೃತ್ತಿ ಹೆಚ್ಚು ಖುಷಿ ಕೊಡ್ತಿತ್ತು. ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡ್ತೇವೆ. ಇದಕ್ಕಿಂತ ಖುಷಿ ಬೇರೆಯಿಲ್ಲ. ಶಿಕ್ಷಕರು ಯಾವ ರೀತಿ ಹೇಳುತ್ತಾರೋ ಹಾಗೆ ಮಕ್ಕಳು ಕಲೀತಾರೆ. ಶಿಕ್ಷಕರ ಗುಣಗಳನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. ಶಿಕ್ಷಕರು ಸಾಧ್ಯವಾದ ಮಟ್ಟಿಗೆ ಒಳ್ಳೆಯ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಕರಿಗೆ ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.

ಬಡವರ ಮಕ್ಕಳು ಶೂ ಹಾಕಿಕೊಳ್ಳಬೇಕೆಂದು ಶೂ ಭಾಗ್ಯ ತಂದಿದ್ದೆ

ಶಾಲೆಯಲ್ಲಿ ಮಕ್ಕಳಿಗೆ  ಉಚಿತ ಹಾಲು ಕೊಟ್ಟಿದ್ದು, ಮಕ್ಕಳು ಆರೋಗ್ಯಕರ ವಾಗಿರಬೇಕು ಎಂಬ ಉದ್ದೇಶದಿಂದ. ಮಕ್ಕಳು ಆರೋಗ್ಯಕರವಾಗಿದ್ರೆ ಓದಲು ಅನುಕೂಲವಾಗುತ್ತೆ. ನಾನು ಸಿಎಂ ಆಗಿದ್ದಾಗ ಮಕ್ಕಳಿಗೆ ಶೂ ಕೊಟ್ಟೆ. ನಾನು ಹೈಸ್ಕೂಲ್​ನಲ್ಲಿದ್ದಾಗ ಬರಿಗಾಲಿನಲ್ಲಿ ಓಡಾಡಿದೆ. ಬಳಿಕ ಎರಡು ಚಪ್ಪಲಿ ಹೊಲಿಸಿಕೊಂಡು ಶಾಲೆಗೆ ಹೋದೆ. ಬಡವರ ಮಕ್ಕಳು ಶೂ ಹಾಕಿಕೊಳ್ಳಬೇಕೆಂದು ಶೂ ಭಾಗ್ಯ ತಂದಿದ್ದೆ ಎಂದು ಹೇಳಿದ ಸಿದ್ದರಾಮಯ್ಯ, ಶಾಲೆಗಳಲ್ಲಿ ಈಗಲೂ ಶೂ ಕೊಡ್ತಿದ್ದಾರಾ ಎಂದು ಕೇಳಿದರು.

ಸಿಎಂ ಆಗಿದ್ದಾಗ 6ನೇ ವೇತನ ಆಯೋಗ ಜಾರಿಗೆ ಮಾಡಿದೆ

ನಾನು ಸಿಎಂ ಆಗಿದ್ದಾಗ ಶಿಕ್ಷಕರಿಗೆ ವೇತನ ಹೆಚ್ಚಿಸಲು 6ನೇ ವೇತನ ಆಯೋಗ ಜಾರಿ ಮಾಡಿದೆ. ನಮ್ಮಪ್ಪನ ಮನೆಯಿಂದ ದುಡ್ಡೇನು ನಾನು ಕೊಡಲಿಲ್ಲ. ಸರ್ಕಾರದಿಂದ 6ನೇ ವೇತನ ಆಯೋಗ ವರದಿ ಜಾರಿ ಮಾಡಿದೆ. ಶಿಕ್ಷಕರಿಗೆ ಸಂಬಳ ಬಿಟ್ಟು ಬೇರೆಯೇನು ಇಲ್ಲವಲ್ಲ. ಅವರೂ ಬದುಕಬೇಕಲ್ಲ. ಆದರೆ ಶಿಕ್ಷಕರ ಸಂಬಳದಲ್ಲೂ ಬೇರೆಯವರು ಕಿತ್ತು ಕೊಳ್ತಾರೆಂದು ನನಗೆ ಗೊತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ವಿಷಾದಿಸಿದರು.

ಇದನ್ನೂ ಓದಿ : ಬಿಎಸ್ ವೈ ಹಿಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ : ಸಿದ್ದರಾಮಯ್ಯ

ಶಿಕ್ಷಕರ ಸೇವೆ ಮಾಡೋದೇ ನಮಗೆ ಸೌಭಾಗ್ಯವಾಗಿತ್ತು. ಈಗಲೂ ಈ ಭಾಗದಲ್ಲಿ ಶಿಕ್ಷಕರಿಗೆ ಮರ್ಯಾದೆ, ಗೌರವ ಕೊಡುತ್ತಾರೆ. ಶಿಕ್ಷಕರು ಮಕ್ಕಳಲ್ಲಿ ಜಾತ್ಯತೀತ ಮನೋಭಾವ ಬೆಳಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading