‘15 ಕೇಸ್​ ಇರುವುದು ನಿಜ; ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ‘: ಸಚಿವ ಆನಂದ್​​ ಸಿಂಗ್​​​​​

ರಾಜಕೀಯ ಪಿತೂರಿಯಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ತಾವು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಈ ಕುರಿತು ಚುನಾವಣಾ ಆಯೋಗಕ್ಕೂ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ಗಣಿ ಕಂಪನಿಯ ಎಂಟು ಜನರಲ್ಲಿ ತಮ್ಮ ತಂದೆ ಕೂಡ ಒಬ್ಬರು. ತಂದೆ ನಿವೃತ್ತಿ ಬಳಿಕ ಆ ಕೆಲಸ ವಹಿಸಿಕೊಂಡಿದ್ದೇ ಎಂದರು.


Updated:February 14, 2020, 6:03 PM IST
‘15 ಕೇಸ್​ ಇರುವುದು ನಿಜ; ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ‘: ಸಚಿವ ಆನಂದ್​​ ಸಿಂಗ್​​​​​
ಆನಂದ್​ ಸಿಂಗ್​​
  • Share this:
ಬೆಂಗಳೂರು(ಫೆ.14): ನೂತನ ಸಚಿವ ಆನಂದ್ ಸಿಂಗ್​​ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಪಕ್ಷಗಳು ಖ್ಯಾತೆ ತೆಗೆದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ತರಾಟೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್​​​​​ಗೆ ಹೇಗೆ ಅರಣ್ಯ ಖಾತೆ ನೀಡಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ. ಹೀಗೆ ನೂತನ ಅರಣ್ಯ ಸಚಿವ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಆನಂದ್​ ಸಿಂಗ್​​ ಖಾತೆಯನ್ನು ಮತ್ತೊಮ್ಮೆ ಬದಲಾಯಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.

ಇಂದು ಸಿಎಂ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದ ಕೂಡಲೇ ನೂತನ ಸಚಿವ ಆನಂದ್ ಸಿಂಗ್ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದರು. ಬಿ.ಎಸ್​​ ಯಡಿಯೂರಪ್ಪ ಜತೆ ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಾನು ಅರಣ್ಯ ಖಾತೆ ಕೇಳಲಿಲ್ಲ. ಮೊದಲು ನನಗೇ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಿದ್ದೀರಿ. ನಂತರ ನೀವೇ ಖಾತೆ ಬದಲಾಯಿಸಿ ಅರಣ್ಯ ಇಲಾಖೆ ಜವಾಬ್ದಾರಿ ಕೊಟ್ಟಿರಿ. ಈಗ ಪುನಃ ಖಾತೆ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.

ನಂತರ ಈ ಸಂಬಂಧ ವಿಧಾನಸೌಧದಲಿ ಸುದ್ದಿಗಾರರೊಂದಿಗೆ ಮಾತಾಡಿದ ಆನಂದ್​ ಸಿಂಗ್, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ನನ್ನ ಮೇಲೆ ನೇರ ಅರಣ್ಯ ನಾಶದ ಆರೋಪ ಇಲ್ಲ. ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ. ಈ ಆರೋಪಗಳಿಗಾಗಿ ನನ್ನ ಅರಣ್ಯ ಖಾತೆ ಹಿಂಪಡೆಯಲು ಬಯಸಿದರೆ ಬಿಟ್ಟು ಕೊಡಲು ಸಿದ್ಧ ಎಂದರು.

ಇದನ್ನೂ ಓದಿ: ಆನಂದ್​ ಸಿಂಗ್​ ಮೇಲೆ ಅರಣ್ಯ ಒತ್ತುವರಿ, ನಾಶ ಸೇರಿದಂತೆ ಒಂದೇ ಒಂದು ಪ್ರಕರಣವಿಲ್ಲ: ಡಿಸಿಎಂ ಸವದಿ

ರಾಜಕೀಯ ಪಿತೂರಿಯಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ತಾವು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಈ ಕುರಿತು ಚುನಾವಣಾ ಆಯೋಗಕ್ಕೂ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ಗಣಿ ಕಂಪನಿಯ ಎಂಟು ಜನರಲ್ಲಿ ತಮ್ಮ ತಂದೆ ಕೂಡ ಒಬ್ಬರು. ತಂದೆ ನಿವೃತ್ತಿ ಬಳಿಕ ಆ ಕೆಲಸ ವಹಿಸಿಕೊಂಡಿದ್ದೇ ಎಂದರು.

ಖಾತೆ ಬದಲಾವಣೆ ಮಾಡುವುದಾದರೆ ಮಾಡಲಿ. ಇದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯಗೆ ರಾಜಕೀಯದಲ್ಲಾದ ಅನುಭವದಷ್ಟೂ ನನಗೆ ವಯಸಾಗಿಲ್ಲ. ಅವರು ಬೆಳೆದಷ್ಟು ತಾವು ಬೆಳೆಯಲು ಆಗುವುದಿಲ್ಲ. ಅವರ ಮಾತುಗಳಿಗೆ ಉತ್ತರ ನೀಡುವಷ್ಟು ದೊಡ್ಡವ ನಾನಲ್ಲ. ಅವರ ಆರೋಪ ಸರಿಯಾಗಿದೆ. ತಮ್ಮ ಮೇಲೆ 15 ಪ್ರಕರಣಗಳು ದಾಖಲಾಗಿರುವುದು ನಿಜ. ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವುದಿಲ್ಲ. ನನ್ನ ಮೇಲೆ ದಾಖಲಿಸಿರುವ ಆರೋಪಗಳನ್ನು ಪರಿಶೀಲಿಸಲಿ. ನೇರ ಆರೋಪ ಇದ್ದರೆ ಹೇಳಲಿ. ತಮ್ಮಿಂದ ರಾಜ್ಯದ ಅರಣ್ಯ ಲೂಟಿ ಆಗುತ್ತದೆ ಎಂದು ಭಾವಿಸಿ ಖಾತೆ ಬದಲಾವಣೆ ಮಾಡಿದರೆ ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ