ಮೈಸೂರು: ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ. ನಾನು ಮಾತನಾಡುವುದಕ್ಕೆ ಮಾಧ್ಯಮವರು ಬಣ್ಣ ಹಚ್ಚಿದ್ರೆ, ಆರ್ಎಸ್ಎಸ್ನವರು ರಂಗು ರಂಗಿನ ಬಣ್ಣ ಹಾಕುತ್ತಾರೆ. ಹಾಗಾಗಿ ನಾನು ಮಾತನಾಡುವ ಕೆಲ ವಿಚಾರಗಳು ವಿವಾದಗಳಾಗಿ ಬಿಡುತ್ತವೆ ಎಂದು ಮೈಸೂರಿನ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ನೇರವಾಗಿ ಮಾತನಾಡುವವನು ಸಾಧ್ಯವಾದಷ್ಟು ಸತ್ಯ ಹೇಳೋಕೆ ಪ್ರಯತ್ನ ಮಾಡುತ್ತೀನಿ. ಒರಟಾದ ಹಳ್ಳಿ ಭಾಷೆಯಲ್ಲಿ ಮಾತನಾಡ್ತಿನಿ. ಅದಕ್ಕೆ ವಿವಾದ ಆಗುತ್ತದೆ ಎಂದರು.
ರಾಜಕಾರಣದಲ್ಲಿ ಹೆಚ್ಚು ವಿವಾದಕ್ಕೆ ಒಳಗಾಗೋಗಿರೋದು ನಾನೇ. ಇತ್ತೀಚಿನ ವಿವಾದ ಅಂದರೆ ಹನುಮ ಹುಟ್ಟಿದ ದಿನದ ವಿವಾದ. ಹನುಮ ಹುಟ್ಟಿದ್ದು ನನಗೆ ಗೊತ್ತಿರಲಿಲ್ಲ ಅದನ್ನ ಕೇಳಿದೆ. ನಿಮಗೆ ಯಾರಿಗಾದರೂ ಗೊತ್ತಾ ಹೇಳಿ ಅಂದೆ ಅದಕ್ಕೆ ಅದನ್ನೆ ವಿವಾದ ಮಾಡಿಬಿಟ್ಟರು ಆ ಆರ್ಎಸ್ಎಸ್ನವರು. ಸಾಮಾಜಿಕ ಜಾಲತಾಣದಲ್ಲಿ ರಂಗುರಂಗಿನ ಬಣ್ಣ ಹಾಕಿ ಹರಿಬಿಟ್ಟರು ಎಂದು ಸಿದ್ದರಾಮಯ್ಯನವರು ಹೇಳಿದರು.
ಇನ್ನೊಂದು ವಿವಾದ ಗೋಮಾಂಸ, ಗೋಮಾಂಸ ಅದು ಆಹಾರ ಹಕ್ಕು ಎಂದು ಹೇಳಿದ್ದೆ. ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದಿದ್ದೆ ಅದನ್ನು ವಿವಾದ ಮಾಡಿದ್ದರು. ಒಂದು ಹಸು, ಎಮ್ಮೆ, ಎತ್ತು ,ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ತಿಂಗಳಿಗೆ 3000 ಹಣ ಬೇಕು. ಇದನ್ನ ಆಲೋಚಿಸಿ ಹೇಳಿದ್ದರೆ ವಿವಾದ ಮಾಡುತ್ತಾರೆ ಎಂದು ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯನವರು ಗುಡುಗಿದರು.
ಕೊಬ್ಬಿದ ಹಸು ತಿನ್ನುವ ಬಗ್ಗೆ ಶ್ಲೋಕ ಇದೆ ಕೊಡಮ್ಮ ಅಂತ ಮಲ್ಲಿಕಾ ಘಂಟಿಗೆ ಕೇಳಿದ್ದೇನೆ. ಹೇ ಮಾಲಗತ್ತಿ ನಿಮಗೂ ಸಿಕ್ಕಿದ್ರೆ ನೀವು ಕೊಡಿ ಅದರಲ್ಲಿ ಇರೋದನ್ನೆ ಹೇಳುತ್ತೀನಿ. ಬೇರೆ ಹೇಳಿದ್ರೆ ಆರ್ಎಸ್ಎಸ್ನವರು ವಿವಾದ ಮಾಡುತ್ತಾರೆ, ರಂಗು ರಂಗಿನ ಬಣ್ಣ ಹಾಕ್ತಾರೆ. ಇಂತಹ ವಿಚಾರಗಳನ್ನ ನೀವು ಹೇಳಿದ್ರೆ ವಿವಾದ ಆಗೋಲ್ಲ ಅನ್ನಿಸುತ್ತೆ. ನಿಮ್ಮಲ್ಲೂ ಕೆಲವರು ಹೇಳಿದ್ರೆ ವಿವಾದ ಆಗಬಹುದು ಎಂದು ಮಾಜಿ ಸಿಎಂ ಸಿದ್ದು ಹೇಳಿದರು.
ಕೆಲವು ಸಾಹಿತಿಗಳ ಮೇಲೂ ಆರ್ಎಸ್ಎಸ್ನವರ ಕಣ್ಣಿದೆ. ಅದರಲ್ಲಿ ಅರವಿಂದ ಮಾಲಗತ್ತಿ, ಮಲ್ಲಿಕಾ ಘಂಟಿಯೂ ಇದ್ದಾರೆ. ಹಾಗಾಗಿ ಆ ಶ್ಲೋಕ ಸಿಕ್ಕಿದ್ರೆ ಕೊಡಿ ನಂಗೆ ನಾನೇ ಹೇಳ್ತಿನಿ. ಒಟ್ಟಿನಲ್ಲಿ ನನ್ನ ಇಮೇಜ್ ಕಡಿಮೆ ಮಾಡೋದು, ಸಾರ್ವಜನಿಕ ಜೀವನದಲ್ಲಿ ನನ್ನನ್ನ ಖಳನಾಯಕನನ್ನಾಗಿ ಬಿಂಬಿಸುವುದೇ ಇವರ ಉದ್ದೇಶ. ಆದರೂ ಸತ್ಯ ಹೇಳದೆ ಇದ್ದರೆ ಆತ್ಮದ್ರೋಹ ಆಗುತ್ತದೆ. ಹಾಗಾಗಿ ನಾನು ಸಾಧ್ಯವಾದಷ್ಟು ಸತ್ಯವನ್ನ ಎಲ್ಲರ ಮುಂದೆ ಹೇಳುತ್ತೀನಿ ಎಂದು ತಿಳಿಸಿದರು.
ಇವ ನಮ್ಮವ ನಮ್ಮವ ಅಂತಾರೆ ಆದರೆ ನೀ ಯಾವ ಜಾತಿ ಅಂತ ಕೇಳುತ್ತಾರೆ. ಯಾರಿಗೆ ಮನುಷ್ಯತ್ವ ಇರೋಲ್ವಾ ಅವರು ಮಾತ್ರ ಅವಮಾನ ಆಗುವಂತ ಮಾತನಾಡೋದು. ಯೂನಿವರ್ಸಿಟಿಯಲ್ಲಿ ಓದಿದವರೇ ಹೆಚ್ಚೆಚ್ಚು ಜಾತಿ ವಾದಿಗಳಾಗಿದ್ದಾರೆ, ರಾಜಕೀಯದಲ್ಲಿ ಓಟು ಕೇಳಲು ಹೋದಾಗ ಇವೇಲ್ಲವು ಗೊತ್ತಾಗುತ್ತೆ. ವಿದ್ಯೆ ಕಲಿಯೋದು ಮನುಷ್ಯತ್ವ ಬೆಳೆಸಿಕೊಳ್ಳೊದಕ್ಕೆ ಪುರೋಹಿತರನ್ನ ತಲೆ ಬಗ್ಗಿಸಿ ನಮಸ್ಕಿರಿಸುತ್ತೇವೆ. ಅದೆ ದಲಿತರನ್ನ ಕಂಡರೆ ಏನ್ಲಾ ಅಂತೀವಿ. ಈ ನಡವಳಿಕೆಯೇ ಗುಲಮಾಗಿರಿಯ ಸಂಕೇತವಾಗಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.
ಒಂದೊಂದು ಜಯಂತಿ ಮಾಡೋರನ್ನ ಒಂದೊಂದು ವರ್ಗ ಮಾಡಿಬಿಟ್ಟಿದ್ದಾರೆ. ಇದು ನಿಲ್ಲಬೇಕು, ಸಾಮಾಜಿಕ ಆರ್ಥಿಕ ಶಕ್ತಿ ನಮಗೆ ಬಂದರಷ್ಟೆ ಇದೆಲ್ಲಾ ನಿಲ್ಲುತ್ತೆ. ನಾವು ಇದನ್ನ ಕಲಿಯದಿದ್ದರೆ ಸಮಾಜ ಬದಲಾವಣೆ ಆಗುವುದಿಲ್ಲ. ವಿದ್ಯಾವಂತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ನಾನು ಯಾವತ್ತು ಸಲಾಂ ಹೊಡೆದು ರಾಜಕಾರಣ ಮಾಡೋಲ್ಲ, ಅಧಿಕಾರ ಬರುತ್ತೆ ಹೋಗುತ್ತೆ. ಇನ್ನೊಬ್ಬರನ್ನ ಪ್ರೀತಿಸುವುದೇ ಧರ್ಮ, ಅದನ್ನ ಬಿಟ್ಟರೆ ಧರ್ಮಕ್ಕೆ ಬೇರೆ ವ್ಯಾಖ್ಯಾನವೇ ಇಲ್ಲ. ಬೇರೆಯವರಿಗೆ ಕೆಡಕು ಬಯಸದಿದ್ದರೆ ಅದೇ ಧರ್ಮ. ನಾನು ಸಲಾಂ ಹೋಡೆದು ರಾಜಕಾರಣ ಮಾಡೋಲ್ಲ ಎಂದು ಸಿದ್ದರಾಮಯ್ಯನವರು ಖಡಕ್ ಸಂದೇಶ ನೀಡಿದರು.
ಕನಕ ಜಯಂತಿ ಕಾರ್ಯಕ್ರಮ ಕೊರೋನಾ ಇಮ್ಯೂನಿಟಿ ಪಾಠ ಮಾಡಿದ ಮಾಜಿ ಸಿಎಂ ಸಿದ್ದು, ಹಳ್ಳಿಯವರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತೆ. ಯಾರಿಗೆ ಇಮ್ಯೂನಿಟಿ ಕಡಿಮೆ ಇರುತ್ತವೊ ಅವರಿಗೆ ಕೋವಿಡ್ ಬರುತ್ತದೆ. ನನಗೂ ಕೋವಿಡ್ ಬಂದಿತ್ತು ನಾನು ಹುಷಾರಾಗಿ ಬಂದೆ. ಇಲ್ಲಿ ನೋಡಿ ಕಾರ್ಯಕ್ರಮದಲ್ಲಿ ತುಂಬಾ ಜನ ಮಾಸ್ಕ್ ಹಾಕಿಲ್ಲ ಯಾಕಂದ್ರೆ ಇವರಲ್ಲಿ ಬಹುತೇಕರು ಹಳ್ಳಿಯವರು ಅವರಿಗೆ ಕೊರೊನಾ ಬರೋಲ್ಲ. ನಾವು ಚಿಕ್ಕವರಾಗಿದ್ದಾಗಾ ಬಾವಿ ನೀರು, ಕೆರೆ ನೀರು ಕುಡಿಯುತ್ತಿದ್ದೆವು.
ನೀರನ್ನು ವಾಪಸ್ ಉಗುಳಿದರೆ ಮಣ್ಣು ಹೊರಗೆ ಬರುತ್ತಿತ್ತು. ಆಗ ನಮಗೆ ಯಾವ ಖಾಯಿಲೆಯೂ ಬರುತ್ತಿರಲಿಲ್ಲ. ಈಗ ನನಗೆ ಬೋರ್ವೆಲ್ ನೀರು ಕುಡಿಯೋಕೆ ಆಗುತ್ತಿಲ್ಲ. ಬಿಸ್ಲರಿ ನೀರನ್ನೆ ಕಾಯಿಸಿ ಕುಡಿಯೋ ಪರಿಸ್ಥಿತಿಗೆ ಬಂದಿದ್ದೇನೆ ಅಂತ ತಮ್ಮ ಆರೋಗ್ಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿಕೊಂಡರು ಸಿದ್ದರಾಮಯ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ