ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ಚುರುಕಾಗಿ ಕೆಲಸ ಮಾಡಲು ಮುಂದಾಗಿದ್ದು, ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಈ ಸಭೆಯಲ್ಲಿ ಅಧಿಕಾರಿಗಳ ಬೆವರು ಇಳಿಸಿದ ಸಿಎಂ ಒಂದಷ್ಟು ಕಿವಿ ಮಾತು ಹೇಳಿದರು.
ನನ್ನ ಈ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರವಾಗಿ ಕೆಲಸ ಮಾಡಬೇಕು ಹಾಗೂ ಇದಕ್ಕೆ ಅಧಿಕಾರಿಗಳು ಸೂಕ್ತ ಸಹಕಾರ ಕೊಡುವಂತೆ ಬೊಮ್ಮಾಯಿ ಸಭೆಯಲ್ಲಿ ತಾಕೀತು ಮಾಡಿದರು. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಕ್ಕೆ ಕೈ ಹಾಕಬಾರದು, ಭ್ರಷ್ಟಾಚಾರ ರಹಿತ ಸರ್ಕಾರ ನಡೆಸಲು ಸಹಕಾರ ಕೊಡಿ ಎಂಬು ಮಾತನ್ನು ಸಭೆಯಲ್ಲಿ ಸಿಎಂ ಬೊಮ್ಮಾಯಿ ಪುನಃರುಚ್ಚರಿಸಿದರು.
ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಈ ಮೂಲಕ ಯಾರಿಗೆ ಈ ಸಂದೇಶ ಕೊಟ್ಟರು ಎನ್ನುವುದು ಈ ಚರ್ಚೆಯ ವಿಷಯವಾಗಿದೆ.
’’ನಾನು ರಬ್ಬರ್ ಸ್ಟಾಂಪ್ ಅಲ್ಲ ಜನರ ಸ್ಟಾಂಪ್’’ ಎಂದ ಬೊಮ್ಮಾಯಿ ಈ ಮಾತಿನ ಮೂಲಕ ಯಾರಿಗೆ ಸಂದೇಶ ತಲುಪಿಸಿದರು ಎನ್ನುವುದು ಮುಖ್ಯವಾಗಿದೆ. ಏಕೆಂದರೆ ಬಿಎಸ್ವೈ ಅವರ ಬಣದಲ್ಲೇ ಗುರುತಿಸಿಕೊಂಡಿದ್ದ ಬೊಮ್ಮಾಯಿ ಅವರನ್ನ ಮಾಜಿ ಸಿಎಂ ಬಿಎಸ್ವೈ ಅವರೇ ಹೈಕಮಾಂಡ್ ಮೇಲೆ ಸಾಕಷ್ಟು ಒತ್ತಡ ಹೇರಿ ತಮ್ಮ ಬಣದ ಆಪ್ತನನ್ನೇ ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು ಎಂದು ಹೇಳಲಾಗುತ್ತಿದೆ. ಅಲ್ಲದೇ ಬಿಜೆಪಿ ಹೈಕಮಾಂಡ್ ಸಹ ಈ ಹಿಂದೆ ಯಡಿಯೂರಪ್ಪ ಅವರ ಮೇಲೆ ಸವಾರಿ ಮಾಡಿದ್ದು ಸೇರಿದಂತೆ, ಹೈಕಮಾಂಡ್ ನೀಡಿದ ಕಿರುಕುಳವನ್ನು ಹತ್ತಿರದಿಂದಲೇ ನೋಡಿದವರು. ಆದರೆ ಯಡಿಯೂರಪ್ಪ ಅವರು ಕೇಂದ್ರದ ವಿರುದ್ದ ತುಟಿ ಬಿಚ್ಚಿರಲಿಲ್ಲ, ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರಾ ಬಸವರಾಜ ಬೊಮ್ಮಾಯಿ?
ತಮ್ಮ ಬಣದ ಶಾಸಕನೇ ಮುಖ್ಯಮಂತ್ರಿಯಾದರೆ ಪಕ್ಷದ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟಂತೆ ಆಗುವುದಿಲ್ಲ ಹಾಗೂ ವಿಜಯೇಂದ್ರ ಬೆಳವಣಿಗೆಗೆ ಇದು ಸಾಕಷ್ಟು ಪೂರಕವಾಗುತ್ತದೆ ಎನ್ನುವುದರಿಂದಲೇ ಬಿಎಸ್ವೈ ಆಪ್ತನನ್ನೇ ಸಿಎಂ ಸ್ಥಾನದಲ್ಲಿ ಕೂರಿಸಿದ್ದು ಎನ್ನುವ ಕಳಂಕದಿಂದ ತಪ್ಪಿಸಿಕೊಳ್ಳಲು ಬೊಮ್ಮಾಯಿ ಏನಾದರೂ ತಂತ್ರ ಹೂಡಿದರೆ?
ಇಷ್ಟೇ ಅಲ್ಲದೇ ’’ಇದು ಕೇವಲ ಒಬ್ಬನ ಸರ್ಕಾರವಲ್ಲ, ಜನರ ಸರ್ಕಾರ ಆದ ಕಾರಣ ನಾವೆಲ್ಲಾ ಟೀಂ ವರ್ಕ್ ಆಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಬೊಮ್ಮಾಯಿ ಕಿವಿ ಮಾತು ಹೇಳಿದ್ದಲ್ಲದೆ, ಜನರ ಸುತ್ತ ಆಡಳಿತ ಇರಬೇಕು, ಆಡಳಿತದ ಸುತ್ತ ಜನರು ಇರಬಾರದು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ದೇಶದಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ಹೊಂದಿರ ಬಾರದು ಎನ್ನುವ ಖಡಕ್ ಎಚ್ಚರಿಕೆಯ ಜೊತೆಗೆ, ಎಲ್ಲಾ ಇಲಾಖೆಯ ಅನಗತ್ಯ ಖರ್ಚುಗಳು ಶೇ. 5% ರಷ್ಟು ಇಳಿಕೆಯಾಗಬೇಕು ಮತ್ತು ಜನ ಸಮಾನ್ಯರಿಗೆ ಸರ್ಕಾರದ ಕಾರ್ಯಕ್ರಮ ಮುಟ್ಟುವ ಎಲ್ಲಾ ಯೋಜನೆಗಳನ್ನೂ ಕೈಗೊಳ್ಳಬೇಕು. ಸರ್ಕಾರದ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಇರಬೇಕು.. ಜೊತೆಗೆ ಕೆಲಸ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಆದ ಕೂಡಲೇ ಬೊಮ್ಮಾಯಿ ಬಂಪರ್ ಕೊಡುಗೆ; ರೈತರ ಮಕ್ಕಳಿಗೆ ಸ್ಕಾಲರ್ಶಿಪ್, ವಿಧವಾ ವೇತನ ಹೆಚ್ಚಳ
ಕಾರವಾರಕ್ಕೆ ಗುರುವಾರ ಭೇಟಿ ನೀಡಿ, ಪ್ರವಾಹದ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಹಾಗೂ ಪ್ರಧಾನಿಯವರ ಭೇಟಿಗೆ ಸಮಯ ಕೇಳಿದ್ದೇನೆ, ಭೇಟಿಗೆ ಅವಕಾಶ ಸಿಕ್ಕ ತಕ್ಷಣ ತೆರಳುತ್ತೇನೆ. ಭೇಟಿಯ ಮೊದಲಿಗೆ ಅಭಿನಂದನೆ ಸಲ್ಲಿಸಲು ಹೋಗುತ್ತಿದ್ದೇನೆ , ನಂತರ ಇಲ್ಲಿಗೆ ಬಂದು ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ನೆರೆ ಪರಿಹಾರದ ಬಗ್ಗೆ ಮಾತನಾಡುತ್ತೇನೆ. 629 ಕೋಟಿಯಷ್ಟು ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ, ಅದನ್ನ ಸಂಕಷ್ಟಕ್ಕೊಳಗಾದವರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ