ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (CM Bsavaraj Bommai), ಮೀಸಲಾತಿ (Reservation) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ ಪ್ರತಿಪಕ್ಷಗಳು (Opposition Party) ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಒಳ ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದ ಇತ್ತು. ಆದರೆ ಕಾಂಗ್ರೆಸ್ ನವರು (Congress) ಮೂಗಿಗೆ ತುಪ್ಪ ಹಚ್ಚಿ ಕೊನೆ ಘಳಿಗೆಯಲ್ಲಿ ಕೈಕೊಟ್ಟಿತ್ತು. ನಮಗೆ ಬದ್ಧತೆ ಇದೆ. ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಮಾಡಿದ್ದೇವೆ. ನಾವು ಮಾಡಲು ಆಗದ್ದನ್ನು ಬಿಜೆಪಿಯವರು (BJP) ಮಾಡಿದ್ದಾರೆ ಅಂತ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ವಿಪಕ್ಷಗಳ ಮಾತಿಗೆ ಅದ್ಯಾವುದಕ್ಕೂ ಬೆಲೆ ಇಲ್ಲ. ಅವರು ಯಾವಾಗಲೂ ಎಸ್ಸಿ, ಎಸ್ಟಿ. ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದರು. ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿ ಈ ಚುನಾವಣೆಯಲ್ಲಿಯೂ ಯಾಮಾರಿಸಬಹುದು ಎಂದುಕೊಂಡಿದ್ದರು. ಸಾಮಾಜಿಕ, ಅಭಿವೃದ್ಧಿ ವಿಚಾರದಲ್ಲಿ ಸಂಘ ಸಂಸ್ಥೆಗಳ ಜೊತೆ ಚರ್ಚಿಸಿ ಹಲವಾರು ತೀರ್ಮಾನ ಮಾಡಿದ್ದೇವೆ. ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನಮ್ಮ ಬದ್ಧತೆ ಕಾರಣ ಎಂದು ಹೇಳಿದರು.
ಜೇನಿನ ಹನಿ ಕೊಡುವೆ
ಆ ಜನಾಂಗಕ್ಕೆ ನ್ಯಾಯ ಕೊಡಿಸೋವರೆಗೂ ವಿಶ್ರಮಿಸಲ್ಲ. ಇವರೆಲ್ಲ ಜೇನುಗೂಡಿಗೆ ಕೈಹಾಕ್ತಿದಾರೆ ಅಂತ ಹೇಳ್ತಿದ್ದರು. ಜೇನು ಗೂಡಿಗೆ ಕೈ ಹಾಕದೇ ಇದ್ದಲ್ಲಿ ಜೇನು ಸಿಗಲ್ಲ ಅಂತ ಗೊತ್ತಿತ್ತು. ನಾನು ಜೇನುಗೂಡಿಗೆ ಕೈಹಾಕ್ತೇನೆ, ಜೇನು ನೊಣದಿಂದ ಕಚ್ಚಿಸಿಕೊಂಡರೂ ಪರವಾಗಿಲ್ಲ. ಆ ಜನಾಂಗಕ್ಕೆ ಜೇನಿನ ಹನಿಯನ್ನು ಕೊಡಿಸಲು ಸಿದ್ಧ ಅಂತ ಹೇಳಿದ್ದೆ. ಈಗ ಅದನ್ನು ಮಾಡಿದ್ದೇನೆ ಎಂದರು.
ಅದು ಹೇಗೆ ಅನ್ಯಾಯ?
ಇದೇ ವೇಳೆ ಮುಸ್ಲಿಮರನ್ನು EWS ಸೇರ್ಪಡೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮೊದಲು 4 ಪರ್ಸೆಂಟ್ ಮೀಸಲಾತಿ ಇತ್ತು. ಈಗ ಶೇ.10 ರಷ್ಟು ಮೀಸಲಾತಿ ಇರುವ ಕಡೆ ಹಾಕಿದ್ದೇವೆ. ಅಲ್ಪಸಂಖ್ಯಾತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದು ಹೇಗೆ ಅನ್ಯಾಯ ಆಗುತ್ತೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Davanagere : ಮೋದಿ ಕಾರ್ಯಕ್ರಮದಲ್ಲಿ ಭದ್ರತಾಲೋಪ; ಪ್ರಧಾನಿ ಬಳಿ ಓಡಿ ಬಂದ ಯುವಕನ್ಯಾರು?
ಮಹದಾಯಿಗೆ ಚುನಾವಣೆ ಅಡ್ಡಿಯಾಗಲ್ಲ
ಮಹಾದಾಯಿ ಯೋಜನೆ ಕಾಮಗಾರಿ ಆರಂಭಕ್ಕೆ ಚುನಾವಣಾ ಪ್ರಕ್ರಿಯೆ ತೊಡಕಾಗಲ್ಲ. ನೀತಿ ಸಂಹಿತೆ ಜಾರಿಯಾದ್ರೂ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅಷ್ಟರೊಳಗಾಗಿ ಅರಣ್ಯ ಇಲಾಖೆ ಕ್ಲಿಯರೆನ್ಸ್ ಸಿಗುವ ವಿಶ್ವಾಸವಿದೆ. ಚುನಾವಣೆ ನಂತರ ಕಾಮಗಾರಿ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದರು.
ಚುನಾವಣೆ ಘೋಷಣೆ ಆದ ನಂತರವೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ. ಸರಿಯಾದ ಸಮಯದಲ್ಲಿ ನಮ್ಮ ಪಟ್ಟಿ ಬಿಡುಗಡೆಯಾಗುತ್ತದೆ. ಇವತ್ತಿನ ಕೋರ್ ಕಮಿಟಿಯಲ್ಲಿ ಚುನಾವಣಾ ನಿರ್ವಹಣೆ ಬಗ್ಗೆ ಚರ್ಚೆಯಾಗುತ್ತದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ