ದಾವಣಗೆರೆ (ಡಿ. 4): ವಾಟಾಳ್ ನಾಗರಾಜ್ ನನಗೆ ನಾಯಿ ಎಂದು ಕರೆದಿದ್ದಾರೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೂ ಇಲ್ಲ. ನಾನು ನನ್ನ ದೇಶ, ರಾಜ್ಯ, ನನ್ನ ಮತಕ್ಷೇತ್ರವನ್ನು ಕಾಯುವ ನಿಯತ್ತಿನ ನಾಯಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿರುವ ಎಂ.ಪಿ. ರೇಣುಕಾಚಾರ್ಯ, ನಾನು ನಿಯತ್ತಿನ ನಾಯಿ. ನನ್ನ ದೇಶ, ರಾಜ್ಯ, ನನ್ನ ಮತಕ್ಷೇತ್ರವನ್ನು ಕಾಯುವ ನಿಯತ್ತಿನ ನಾಯಿ ನಾನು. ಮತಕ್ಷೇತ್ರದ ರಕ್ಷಣೆಗಾಗಿ ನಾನು ನಿಯತ್ತಿನ ನಾಯಿಯಾಗಿದ್ದೇನೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೂ ಇಲ್ಲ. ವಾಟಾಳ್ ನಾಗರಾಜ್ ಒಬ್ಬ ಬ್ಲಾಕ್ ಮೇಲ್ ವ್ಯಕ್ತಿ. ಅವರು ಶಾಸಕರಾಗಿದ್ದಾಗ ವರ್ತಕರಿಗೆ ಕಣ್ಣೀರು ಹಾಕಿಸಿದ್ದಾರೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ವಾಟಾಳ್ ನಾಗರಾಜ್, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರೇಣುಕಾಚಾರ್ಯ ನಾಯಿಗಳು. ನಾಯಿಗಳು ಬೊಗಳಿದರೆ ನಾನು ಉತ್ತರ ಕೊಡುವುದಿಲ್ಲ. ಕನ್ನಡ ಹೋರಾಟಗಾರರ ಬಗ್ಗೆ ಮಾತನಾಡಲು ಅವರು ಯಾರು? ಎಂದು ಏಕವಚನದಲ್ಲಿ ಮಾತನಾಡಿದ್ದರು.
ಇದನ್ನೂ ಓದಿ: Karnataka Rain: ಬುರೇವಿ ಚಂಡಮಾರುತದ ಪರಿಣಾಮ; ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ
ಅದಕ್ಕೆ ತಿರುಗೇಟು ನೀಡಿರುವ ರೇಣುಕಾಚಾರ್ಯ, ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಿದೆ. ಅವರ ಅಭಿವೃದ್ಧಿಗೆ ನಿಗಮ ಸ್ಥಾಪನೆಯಾಗಿದೆ. ಆದರೆ, ವಾಟಾಳ್ ನಾಗರಾಜ್ ಭುವನೇಶ್ವರಿ ಹೆಸರಲ್ಲಿ ಸ್ವಾರ್ಥಕ್ಕೆ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಿಮ್ಮ ಸ್ವಂತ ಸಂಪಾದನೆ ಬಳಸಿ ಕನ್ನಡ ರಾಜ್ಯೋತ್ಸವ ಆಚರಿಸಿ. ಬೀದಿ ಬದಿ ವ್ಯಾಪಾರಿಗಳು, ಜನರು ಬಂದ್ಗೆ ವಿರೋಧಿಸುತ್ತಿದ್ದಾರೆ. ನಾಡು, ಗಡಿ, ನುಡಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ದಾವಣಗೆರೆಯಲ್ಲಿ ವಾಟಾಳ್ ನಾಗರಾಜ್ ವಿರುದ್ದ ಕಿಡಿ ಕಾರಿದ್ದಾರೆ
ಈ ಹಿಂದೆ ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಬಾರದು ಎಂಬ ಹೇಳಿಕೆ ನೀಡಿದ್ದ ಎಂ.ಪಿ. ರೇಣುಕಾಚಾರ್ಯ ಇಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಪದೇಪದೆ ಒಂದು ವಿಷಯದ ಬಗ್ಗೆ ಮಾತನಾಡಿದರೆ ನನ್ನ ವರ್ಚಸ್ಸು ಕಡಿಮೆ ಆಗುತ್ತದೆ. ಆಗ ಆ ಬಗ್ಗೆ ಯಾರೂ ಯಾವುದೇ ಮಹತ್ವ ಕೊಡುವುದಿಲ್ಲ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು, ವರಿಷ್ಠರು ಸಚಿವ ಸ್ಥಾನದ ಬಗ್ಗೆ ತೀರ್ಮಾನ ಮಾಡ್ತಾರೆ. ನಮ್ಮ ಗುರಿ ಗ್ರಾಮ ಪಂಚಾಯಿತಿ ಚುನಾವಣೆ. ಆ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಕಾರ್ಯಕರ್ತರನ್ನು ಅಧಿಕಾರಕ್ಕೆ ತರುವುದು ನನ್ನ ಜಬಾಬ್ದಾರಿ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ