ಮೂವರು ಹೆಂಡತಿಯರನ್ನು ಸುಖದ ಸುಪ್ಪತ್ತಿಗೆಯಲ್ಲಿಡಲು ದರೋಡೆಗಿಳಿದ ಗಂಡ


Updated:August 17, 2018, 8:55 PM IST
ಮೂವರು ಹೆಂಡತಿಯರನ್ನು ಸುಖದ ಸುಪ್ಪತ್ತಿಗೆಯಲ್ಲಿಡಲು ದರೋಡೆಗಿಳಿದ ಗಂಡ

Updated: August 17, 2018, 8:55 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಆ.17): ಮೂವರು ಹೆಂಡಿರ ಮುದ್ದಿನ ಗಂಡ ಅವರನ್ನು ಸುಖದ ಸುಪ್ಪತ್ತಿಗೆಯಲ್ಲಿಡಲು ಮಾಡಿದ್ದೇನು ಗೊತ್ತೆ? ಯಾರೂ ಊಹಿಸದ ರೀತಿಯಲ್ಲಿ ದರೋಡೆಗೆ ಇಳಿದು, ಕಲಬುರ್ಗಿಯ ಪೊಲೀಸರ ಕೈಗೆ ಸಿಕ್ಕು ಈಗ ಕಂಬಿ ಎಣಿಸುತ್ತಿದ್ದಾನೆ. ಕೇವಲ ಈತನೊಂದೆ ಸಿಕ್ಕಿಲ್ಲ. ಈತನ ಜೊತೆ ಇನ್ನೂ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದು, ಒಂದು ಪಿಸ್ತೂಲ್ ಸೇರಿ 18 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಹಾಗೆ ಪೊಲೀಸರ ಅತಿಥಿಯಾದ ಮುದ್ದಿನ ಗಂಡ ಮಹಾರಾಷ್ಟ್ರ ಸೋಲಾಪುರದ ಹುಸೇನ್ ಶಿವಾಜಿ ಗಾಯಕವಾಡ ಯಾನೆ ಸಾಗರ್ ದಾದಾ.

ದರೋಡೆಕೋರರ ಬೆನ್ನು ಹತ್ತಿರುವ ಕಲಬುರ್ಗಿ ಪೊಲೀಸರು ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಮುವ್ವರು ಮತ್ತು ಕರ್ನಾಟಕದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಒಂದು ಪಿಸ್ತೂಲ್, ಒಂಬತ್ತು ಜೀವಂತ ಗುಂಡು, 550 ಗ್ರಾಮ್ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿ ಆಭರಣ, ಒಂದು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದರೋಡೆಕೋರರ ತಂಡದ ಮುಖ್ಯಸ್ಥ ಮುವ್ವರು ಹೆಂಡಿರನ್ನು ಸಾಕಲು, ಶೋಕಿ ಜೀವನಕ್ಕಾಗಿ ದರೋಡೆ ಕೃತ್ಯಗಳನ್ನು ಎಸಗುತ್ತಿದ್ದ ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕಳ್ಳರ ಪಡೆಯ ಬೆನ್ನು ಹತ್ತಿರುವ ಕಲಬುರ್ಗಿ ಪೊಲೀಸರು ಹಲವು ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನಾಲ್ವರು ಅಂತರ್​ ರಾಜ್ಯ ದರೋಡೆಕೋರರನ್ನು ಬಂಧಿಸಿರುವ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸೋಲಾಪುರ ಪಟ್ಟಣದ ನಿವಾಸಿಗಳಾದ ಹುಸೇನ್ ಶಿವಾಜಿ ಗಾಯಕವಾಡ ಯಾನೆ ಸಾಗರ್ ದಾದಾ, ಶೀತಲ್, ಶಂಕರ್ ಮತ್ತು ಕಮಲಾಪುರದ ನಾಗರಾಜ್ ಬಂಧಿತ ಆರೋಪಿಗಳು.

ಮಹಾರಾಷ್ಟ್ರದಿಂದ ಕಾರಿನಲ್ಲಿ ಬರುತ್ತಿದ್ದ ದರೋಡೆಕೋರರು, ಕಳ್ಳನ ಮಾಡಿಕೊಂಡು ಕದ್ದ ವಸ್ತುಗಳೊಂದಿಗೆ ಮತ್ತೆ ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದರು. ಕಮಲಾಪುರದ ನಾಗರಾಜ್ ಕಳ್ಳತನ ಎಲ್ಲಿ ಮಾಡಬೇಕೆಂದು ಮನೆಗಳನ್ನು ಪತ್ತೆ ಹಚ್ಚಿ ಕೊಡುತ್ತಿದ್ದ. ಕಳ್ಳತನ ನಡೆದ ದಿನಗಳಂದು ಟೋಲ್ ವಾಹನ ಸಂಚಾರದ ಮಾಹಿತಿ ಪಡೆದುಕೊಂಡಾಗ ಪೊಲೀಸರಿಗೆ ದರೋಡೆಕೋರರ ಸುಳಿವು ಸಿಕ್ಕಿದೆ. ಕಳ್ಳತನ ನಡೆದ ದಿನದಂದು ದರೋಡೆಕೋರರ ಕಾರು ಬಂದು ವಾಪಸ್ಸಾಗಿರುವುದನ್ನು ಗಮನಿಸಿದ ಪೊಲೀಸರು ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಂದು ಪಿಸ್ತೂಲ್, 9 ಜೀವಂತ ಗುಂಡು, 550 ಗ್ರಾಮ್ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಕಾರು, ಮತ್ತಿತರ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಹುಸೇನ್ ಶಿವಾಜಿ ಗಾಯಕವಾಡ್ ಮುವ್ವರು ಹೆಂಡಂದಿರನ್ನು ಹೊಂದಿದ್ದು ಅವರನ್ನು ಐಷಾರಾಮಿಯಾಗಿಡಲು ಕಳ್ಳತನ ಕೃತ್ಯಗಳನ್ನು ಮಾಡುತ್ತಿದ್ದ. ಅವರಿಗಾಗಿ ದೊಡ್ಡ ದೊಡ್ಡ ಬಂಗಲೆ ನಿರ್ಮಿಸಿದ್ದನಲ್ಲದೆ, ದರೋಡೆಯಿಂದ ಬಂದ ಹಣದಿಂದ ಮೋಜಿ-ಮಸ್ತಿ ಮಾಡುತ್ತಿದ್ದ. ಈತನ ವಿರುದ್ಧ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ 8 ರಿಂದ 10 ಪ್ರಕರಣಗಳಿವೆ ಎಂದು ಕಲಬುರ್ಗಿ ಎಸ್.ಪಿ. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನಾಲ್ವರು ದರೋಡೆಕೋರರನ್ನು ಬಂಧಿಸಿರುವ ಪೊಲೀಸರು ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ ನಡೆದಿದ್ದ 16 ಮನೆಗಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಕೋರರ ತಂಡದ ನಾಯಕ ಎನಿಸಿಕೊಂಡಿದ್ದ ಹುಸೇನ್ ಶಿವಾಜಿ ಗಾಯಕವಾಡ್, ಸೋಲಾಪುರದ ಸೆಟಲ್‌ ಮೆಂಟ್ ಪ್ರದೇಶದ ನಿವಾಸಿ. ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡು, ಅದಕ್ಕಾಗಿ ತಂಡವನ್ನೂ ರಚಿಸಿಕೊಂಡಿದ್ದ ಎನ್ನಲಾಗಿದೆ. ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿಕೊಂಡು ತಂಡ ಪರಾರಿಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಾನು ಕಳ್ಳತನ ಕೃತ್ಯ ಬಿಟ್ಟಿರುವುದಾಗಿ ಬಂಧಿತ ಆರೋಪಿ ಮತ್ತು ಮೂವರು ಹೆಂಡಿರ ಮುದ್ದಿನ ಗಂಡ ಹುನೇಸ್ ಶಿವಾಜಿ ಗಾಯಕವಾಡ್ ತಿಳಿಸಿದ್ದಾನೆ. ನಾನು ಈ ಕಳ್ಳತನಗಳನ್ನು ಮಾಡಿಯೇ ಇಲ್ಲ ಎಂದಿದ್ದಾನೆ.
Loading...

ಪ್ರಕರಣದಲ್ಲಿ ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ಕುರಿತು ಕಲಬುರ್ಗಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...