ತುಮಕೂರು(ನ.20): ಕ್ಷುಲ್ಲಕ ವಿಚಾರವೊಂದಕ್ಕೆ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಕೊಲೆಗಡುಕನ ದೊಣ್ಣೆ ಏಟಿಗೆ ಪತ್ನಿ ಸ್ಥಳದಲ್ಲೇ ಅಸುನೀಗಿದರೆ, ಮಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಗಂಡನೊಬ್ಬ ತನ್ನ ಹೆಂಡತಿಯನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ. ಕೊರಟಗೆರೆಯ 3ನೇ ವಾರ್ಡ್ ಶ್ರೀನಿವಾಸ ಕಾಲೇಜಿನ ಹಿಂಭಾಗದ ನಿವಾಸಿ 32 ವರ್ಷದ ಹಜರತ್ ಭಾನು ತನ್ನ ಪತಿಯಿಂದಲೇ ಕೊಲೆಗೀಡಾಗಿದ್ದಾಳೆ. ಹಜರತ್ ಭಾನು ಪತಿ, ಆರೋಪಿ ಚಾಂದ್ ಪಾಷಾ ಈಗ ಪೊಲೀಸರ ವಶದಲ್ಲಿದ್ದಾನೆ.
ಸುಮಾ, ಶಂಕರಪ್ಪಗೆ ಸಿಗದ ಬಿಜೆಪಿ ಟಿಕೆಟ್; ರಾಯಚೂರಿಗೆ ಮತ್ತೆ ನಿರಾಸೆ
ಚಾಂದ್ ಪಾಷಾಗೆ ಈ ಮೊದಲೇ ಒಂದು ಮದುವೆಯಾಗಿದ್ದು, ಮೊದಲ ಪತ್ನಿಯನ್ನೂ ಈತನೇ ಸಾಯಿಸಿ, ಬಳಿಕ ಗ್ಯಾಸ್ ಸ್ಟೌವ್ ಸ್ಪೋಟವಾಗಿದೆ ಅನ್ನೋ ನಾಟಕವಾಡಿದ್ದ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈಗ ಮೊದಲ ಪತ್ನಿಯ ಮಗಳ ಮದುವೆಗೆ ಅಂತಾ ನಿವೇಶನ ಮಾರಲು ಹೊಂಚು ಹಾಕಿದ್ದ ಚಾಂದ್ ಪಾಷಾ ಗೆ ಎರಡನೇ ಪತ್ನಿ ಹಜರತ್ ಭಾನು ಸಹಿ ಹಾಕಿರಲಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಚಾಂದ್ ಪಾಷಾ ಹಾಗೂ ಹಜರತ್ ಭಾನು ನಡುವೆ ಜಗಳ ನಡೆಯುತ್ತಿತ್ತು.
ಗಂಡ-ಹೆಂಡತಿ ನಡುವೆ ಮನಸ್ತಾಪ ಹೆಚ್ಚಾಗಿ, ತಡರಾತ್ರಿ ಮನೆಯಲ್ಲಿ ಮಲಗಿದ್ದ ಹೆಂಡತಿ ಹಜರತ್ ಭಾನು ಮತ್ತು ಮಗ ಮಹಮ್ಮದ್ ಅಲಿ ಮೇಲೆ ಆರೋಪಿ ಚಾಂದ್ ಪಾಷಾ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ರಭಸಕ್ಕೆ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ, ಪುತ್ರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಆರೋಪಿ ಚಾಂದ್ ಪಾಷಾನನ್ನ ಕೊರಟಗೆರೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಬೆಳ್ಳಂಬೆಳಗ್ಗೆ ನಡೆದ ಮಹಿಳೆಯ ಕೊಲೆ ಕೊರಟಗೆರೆ ಜನತೆಯನ್ನು ಬೆಚ್ಚಿ ಬೀಳಿಸಿದೆ. ಪತ್ನಿಯ ಜೊತೆ ಮಲಗಿದ್ದ ಮಗನನ್ನೂ ಕರುಣೆ ಇಲ್ಲದೇ ಕೊಲೆ ಮಾಡಲು ಯತ್ನಿಸಿದ್ದ ಪಾಪಿ ತಂದೆಗೆ ತಕ್ಕ ಶಿಕ್ಷೆಯಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ