ಪತಿಯನ್ನ ತೊರೆದು 2ನೇ ಮದುವೆಯಾದ ಯುವತಿ: ಆಕೆಗೆ ಕೈ ಕೊಟ್ಟು ಬೇರೊಂದು ಮದುವೆಯಾದ 2ನೇ ಪತಿ

ಮದುವೆಯಾಗಿ ಸುಖ ಸಂಸಾರ ಸಾಗಿಸೋಣ ಅನ್ನೋವಷ್ಟರಲ್ಲಿ ಕಂಟಕ ಎದುರಾಗಿದೆ. ಈಕೆಯ ಇತಿಹಾಸ ಗೊತ್ತಿದ್ದ ಮಧುಸೂದನ್ ಪೋಷಕರು ಪುಷ್ಪಲತಾ ಮೊದಲ ಪತಿ ಬಳಿ ಆಸ್ತಿ ತೆಗೆದುಕೊಂಡು ಬಾ ಎಂದು ಪೀಡಿಸಿದರಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊದಲ ಪತಿಯನ್ನು ತೊರೆದು ಪ್ರೀತಿಸಿ ಮದುವೆಯಾದ 2ನೇ ಗಂಡನೂ ಕೈಕೊಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ತನ್ನ 16 ವರ್ಷದಲ್ಲೆ ಪೋಷಕರ ಒತ್ತಡದಿಂದ ಸೋದರ ಮಾವನೊಂದಿಗೆ ಪುಷ್ಪಲತಾಗೆ ಬಾಲ್ಯ ವಿವಾಹ ಆಗಿತ್ತು. ನನಗೆ ಮದುವೆ ಇಷ್ಟ ಇಲ್ಲ ಎಂದು ಗಂಡನನ್ನ ತೊರೆದು ಬಂದವರು ಪ್ರೀತಿಸಿ ಮತ್ತೋರ್ವ ಯುವಕನನ್ನು ವರಿಸಿದ್ದಳು. ಆದರೆ ಈಗ ಮೊದಲ ಮದುವೆಯಾಗಿದ್ದ ಸೋದರ ಮಾವನೂ ಇಲ್ಲ, ಪ್ರೀತಿಸಿ ಕಟ್ಟಿಕೊಂಡ ಗಂಡನೂ ಜೊತೆಗಿಲ್ಲ. ಎರಡು ಮನೆ ನಂಬಿ ದಾಸಯ್ಯ ಕೆಟ್ಟ ಅನ್ನೋ ಆಗಿದೆ ಆಕೆಯ ಪರಿಸ್ಥಿತಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಮೂಲದ ಪುಷ್ಪಲತಾ  ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ತೋಟದಗುಡ್ಡದಹಳ್ಳಿ ನಿವಾಸಿ.  ಈಕೆಗೆ ತನ್ನ ಅದಿನಾರನೇ ವಯಸ್ಸಿನಲ್ಲಿ ದೊಡ್ಡಬಳ್ಳಾಪುರ ಮೂಲದವನೇ ಆದ ಸೋದರ ಮಾವ ಕುಮಾರ್‌ ನೊಂದಿಗೆ ಬಾಲ್ಯ ವಿವಾಹವಾಗಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ನೆಲಮಂಗಲದ ವಾಸವಿ ಸಮುದಾಯ ಭವನದಲ್ಲಿ ಕಳೆದ 8 ವರ್ಷಗಳ ಹಿಂದೆಯಷ್ಟೆ ಮದುವೆ ಮಾಡಿದ್ದರು.

ಆದರೆ ಪುಷ್ಪಲತಾ ತನಗೆ ಮದುವೆ ಇಷ್ಟ ಇಲ್ಲ ಎಂದು ಅಜ್ಜಿ ಮನೆ ಸೇರಿಕೊಂಡಿದ್ದಳು. ನಂತರ ಗ್ರಾಮಸ್ಥರೆಲ್ಲ ನ್ಯಾಯ ಪಂಚಾಯ್ತಿ ಮಾಡಿ ಪ್ರಕರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಂದಿಟ್ಟಿತು. ಆದರೆ ಇದು  ಬಾಲ್ಯ ವಿವಾಹ ಅಸಿಂಧು ಅಂದು ಅಧಿಕಾರಿಗಳು ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿದ್ದರು. ಇಷ್ಟಾದ ನಂತರ ಈಕೆಯ ಮೊದಲ ಗಂಡ ಕುಮಾರ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದರು.

ನಂತರ ಈಕೆ ತನ್ನದೇ ಊರಿನವನಾದ ಮಧುಸುದನ್ ಅವರನ್ನು ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಇದೇ ವರ್ಷ ಜನವರಿಯಲ್ಲಿ ಸವದತ್ತಿ ಯಲ್ಲಮ್ಮನ ದೇವಾಲಯದಲ್ಲಿ ಹರಿಶಿನ ಕೊಂಬು ಕಟ್ಟಿಕೊಂಡು ಇಬ್ಬರು ಮದುವೆಯಾಗಿದ್ದಾರೆ.

ಮದುವೆಯಾಗಿ ಹೇಗೋ ಸುಖ ಸಂಸಾರ ಸಾಗಿಸೋಣ ಅನ್ನೋವಷ್ಟರಲ್ಲಿ ಕಂಟಕ ಎದುರಾಗಿದೆ. ಈಕೆಯ ಇತಿಹಾಸ ಗೊತ್ತಿದ್ದ ಮಧುಸೂದನ್ ಪೋಷಕರು ಪುಷ್ಪಲತಾ ಮೊದಲ ಪತಿ ಬಳಿ ಆಸ್ತಿ ತೆಗೆದುಕೊಂಡು ಬಾ ಎಂದು ಪೀಡಿಸಿದರಂತೆ. ಮದುವೆಯೇ ಅಸಿಂಧುವಾದ ಮೇಲೆ ನಾನು ಅಲ್ಲಿ ಹೋಗಿ ಆಸ್ತಿ ಹೇಗೆ ಕೇಳೋದು ಅಂತ ಪುಷ್ಪಲತಾ ಚಿಂತೆಯಲ್ಲಿದ್ದಳು. ಆದರೆ ಇದೇ ವೇಳೆ  ಗೌರಿಬಿದಬೂರು ಮೂಲದ ಯುವತಿಯೊಂದಿಗೆ ಮಧುಸೂದನ್​ಗೆ ಅವರ ಪೋಷಕರು ಮತ್ತೊಂದು ಮದುವೆ ಮಾಡಿಸಿದ್ದಾರೆ,

ಇದಕ್ಕೂ ಮುನ್ನ ಪುಷ್ಪಲತಾ ಎರಡು ಭಾರಿ ಗರ್ಭ ಧರಿಸಿದ್ದರು. ಆದರೆ ಎರಡು ಬಾರಿಯೂ ಪುಷ್ಪಲತಾ ಅತ್ತೆ ನೀವಿನ್ನು ಜೀವನದಲ್ಲಿ ಒಂದು ಹಂತ ತಲುಪಿ ಆರ್ಥಿಕವಾಗಿ ಅಭಿವೃದ್ದಿ ಆಗಿ ನಂತರ ಮಕ್ಕಳು ಮಾಡಿಕೊಳ್ಳಿ ಎಂದಿದ್ದರು. ಅಲ್ಲದೆ ಎರಡು ಬಾರಿ ಸಹ ಗರ್ಭಪಾತ ಮಾಡಿಸಿದರಂತೆ.

ಅಷ್ಟೆ ಅಲ್ಲ ನಿನಗೆ ಎರಡೂವರೆ ಲಕ್ಷ ಹಣ ಕೊಡ್ತಿನಿ, ನಿನ್ನ ಪಾಡಿಗೆ ನೀನು ಇರು ಎಂದು ಮಧುಸೂದನ್ ಪೋಷಕರು ತಿಳಿಸಿದ್ದಾರಂತೆ.  ಈ ಕುರಿತು ಪುಷ್ಪಲತಾ ಮಾದನಾಯಕನಹಳ್ಳಿ ಠಾಣೆ ಮೆಟ್ಟಿಲೇರಿದ್ದು, ಮೊದಲನೇ ಹೆಂಡತಿಗೆ ಮೋಸ ಮಾಡಿದ್ದ ಆರೋಪಿ ಮಧುಸೂದನ್‌ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಇತ್ತ ಪತಿ ಜೈಲಿಗೆ ಹೋಗುತ್ತಿದ್ದಂತೆ ಪುಷ್ಪಲತಾ ಮತ್ತೆ ಒಂಟಿಯಾಗಿದ್ದಾಳೆ. ಹೀಗಾಗಿ ನನಗೆ ನನ್ನ ಗಂಡ ಬೇಕು, ನನ್ನ ಜೀವನ ನಡಿಬೇಕು, ನಾನು ನನ್ನ ಬದುಕು ಕಟ್ಟಿಕೊಳ್ಳಬೇಕು. ನನ್ನ ಗಂಡನನ್ನೂ ನನಗೆ ವಾಪಸ್ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
Published by:zahir
First published: