ಕೌಟುಂಬಿಕ ಕಲಹ: ಬೆಳಗಾವಿಯಲ್ಲಿ ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಗಂಡ

ಹಿರಿಯ ಮಗಳಿಗೆ ಏಳು ವರ್ಷ ವಯಸ್ಸು. ಇನ್ನು ಕಳೆದ ಆರು ತಿಂಗಳ ಹಿಂದೆಯಷ್ಟೇ ಈ ದಂಪತಿಗೆ ಎರಡನೇ ಮಗುವಾಗಿತ್ತು. ಹೆರಿಗೆ ಬಳಿಕ ತವರು ಮನೆಯಲ್ಲಿ ವಾಸವಿದ್ದ ಪತ್ನಿ ಕವಿತಾ ತಾನು ತವರುಮನೆಯಲ್ಲಿದ್ದರೆ, ಗಂಡನಿಗೆ ಊಟಕ್ಕೆ ತೊಂದರೆಯಾಗುತ್ತೆ ಎಂದು ಎರಡು ತಿಂಗಳ ಹಿಂದೆಯಷ್ಟೇ ಬೆಳಗಾವಿಗೆ ಬಂದಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಫೆ.14): ಗಂಡನೋರ್ವ ಹೆಂಡತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಎಂಟು ವರ್ಷಗಳ ಹಿಂದೆ ಈ ದಂಪತಿಗೆ ಮದುವೆ ಆಗಿತ್ತು. ಎರಡು ಮುದ್ದಾದ ಹೆಣ್ಣುಮಕ್ಕಳು ಕೂಡ ಇದ್ದಾರೆ. ಎರಡನೇ ಮಗಳಿಗೆ ಜವಳ ತಗೆಯುವ ಕಾರ್ಯಕ್ರಮ ಆಯೋಜಿಸಿದ್ದ ಈ ದಂಪತಿ ನಿನ್ನೆಯಷ್ಟೇ ಸಂಬಂಧಿಕರಿಗೆಲ್ಲಾ ಫೋನ್ ಮಾಡಿ ಆಹ್ವಾನ ನೀಡಿದ್ದರು. ಆದರೆ, ರಾತ್ರಿಯೇನಾಯ್ತೋ ಗೊತ್ತಿಲ್ಲ ಗಂಡನೇ ಹೆಂಡತಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಮೃತ ಮಹಿಳೆ ಹೆಸರು ಕವಿತಾ ಪೀಸೆ (30). ಕಲಬುರಗಿಯ ನಿವಾಸಿಯಾದ ಈಕೆ ಕಳೆದ ಎಂಟು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ತಾಳಿಕೋಟೆ ಮೂಲದ ಪರಶುರಾಮ ಪೀಸೆ ಎಂಬುವವನ ಜೊತೆ ವಿವಾಹವಾಗಿತ್ತು. ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ ಇಲ್ಲಿನ ಹೊರವಲಯ ವಿಜಯನಗರದಲ್ಲಿ ಪತ್ನಿ ಹಾಗೂ ಇಬ್ಬರ ಹೆಣ್ಣುಮಕ್ಕಳ ಜೊತೆ ವಾಸವಾಗಿದ್ದರು.

ಹಿರಿಯ ಮಗಳಿಗೆ ಏಳು ವರ್ಷ ವಯಸ್ಸು. ಇನ್ನು ಕಳೆದ ಆರು ತಿಂಗಳ ಹಿಂದೆಯಷ್ಟೇ ಈ ದಂಪತಿಗೆ ಎರಡನೇ ಮಗುವಾಗಿತ್ತು. ಹೆರಿಗೆ ಬಳಿಕ ತವರು ಮನೆಯಲ್ಲಿ ವಾಸವಿದ್ದ ಪತ್ನಿ ಕವಿತಾ ತಾನು ತವರುಮನೆಯಲ್ಲಿದ್ದರೆ, ಗಂಡನಿಗೆ ಊಟಕ್ಕೆ ತೊಂದರೆಯಾಗುತ್ತೆ ಎಂದು ಎರಡು ತಿಂಗಳ ಹಿಂದೆಯಷ್ಟೇ ಬೆಳಗಾವಿಗೆ ಬಂದಿದ್ದಳು.

ಮುಂದಿನ ಸೋಮವಾರ ಎರಡನೇ ಹೆಣ್ಣು ಮಗಳಿಗೆ ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ಸನ್ನಿಧಿಯಲ್ಲಿ ಜವಳ ತಗೆಯಲು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಹಾಗಾಗಿ ನಿನ್ನೆಯಷ್ಟೇ ಎಲ್ಲ ಸಂಬಂಧಿಕರಿಗೆ ಫೋನ್ ಮಾಡಿ ಜವಳ ತಗೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಅದೇನಾಯ್ತೋ ಗೊತ್ತಿಲ್ಲ ನಿನ್ನೆ ಸಂಜೆ ಪತಿ ಪತ್ನಿಯ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕತ್ತುಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ: ಗಂಡನಿಂದಲೇ ವರದಕ್ಷಿಣೆಗಾಗಿ ಕೊಲೆ; ಮೃತನ ಕುಟುಂಬ ಆರೋಪ

ಬಳಿಕ ಕವಿತಾಳ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಹಲವು ಮಾತ್ರೆಗಳನ್ನು ನುಂಗಿ ಮಲಗಿಬಿಟ್ಟಿದ್ದಾಳೆ ಏಳುತ್ತಿಲ್ಲ ಅಂತಾ ಕಥೆ ಹೇಳಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಪೋಷಕರು ಹೇಳಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಅಂತಾ ಕಥೆ ಕಟ್ಟಿದ್ದಾನೆ. ಕೊನೆಗೆ ಮಗಳು ಮೃತಪಟ್ಟಿರುವ ಸುದ್ದಿ ತಿಳಿದು ಕಲಬುರಗಿಯಿಂದ ಬೆಳಗಾವಿಗೆ ಕವಿತಾ ಪೋಷಕರು ಆಗಮಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಕವಿತಾಳ ಪೋಷಕರ ದೂರಿನ ಮೇರೆಗೆ ಕ್ಯಾಂಪ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯನಗರದಲ್ಲಿರುವ ಮನೆಗೆ ತೆರಳಿ ನಿನ್ನೆ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ. ಇನ್ನು ತನ್ನ ತಾಯಿ ತಂದೆಯಿಂದಲೇ ಕೊಲೆಗೀಡಾಗಿದ್ದಾಳೆ ಎಂಬ ವಿಷಯ ಮುಗ್ಧ ಮಕ್ಕಳಿಗೆ ಗೊತ್ತಿಲ್ಲ. ಇನ್ನು ಸಂಬಂಧಿಗಳು ಹೇಳುವ ಪ್ರಕಾರ ಮೃತ ಕವಿತಾ ಉನ್ನತ ವ್ಯಾಸಂಗ ಮಾಡಿದ್ದಳು. ಪತಿಯ ಜೊತೆ ಆರಾಮಾಗಿಯೇ ಇದ್ದಳು. ನಿನ್ನೆ ನಮಗೆ ಫೋನ್ ಮಾಡಿ ಎರಡನೇ ಮಗಳ ಜವಳ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಳು. ಆದರೆ, ಇಂದು ಹೀಗಾಗಿದೆ. ಆರೋಪಿ ಪರಶುರಾಮನಿಗೆ ಕಠಿಣ ಶಿಕ್ಷೆಯಾಗಬೇಕು ಅಂತಾ ಆಗ್ರಹಿಸಿದ್ದಾರೆ.
First published: