ಮಂಗಳೂರು(ಸೆ.18): ಕೆಲವೊಂದು ಸಲ ನಾವು ಅಂದುಕೊಳ್ಳುವುದು ಒಂದು, ಆದ್ರೆ ಆಗೋದೆ ಇನ್ನೊಂದು. ಇಲ್ಲಿಯೂ ಕೂಡಾ ವ್ಯಕ್ತಿಯೊಬ್ಬರನ್ನು ಉಳಿಸಿಕೊಳ್ಳುವುದಕ್ಕೆ ಶತ ಪ್ರಯತ್ನ ಮಾಡಿದರೂ ವಿಧಿಯಾಟವೇ ಬೇರೆಯಾಗಿತ್ತು. ಗಂಡನನ್ನು ಉಳಿಸಿಕೊಳ್ಳಲು ಹೆಂಡತಿ ಮಾಡಿದ ಹೋರಾಟಕ್ಕೆ ಸೋಲಾಗಿದೆ. ನೆರವಿಗಾಗಿ ದಾನಿಗಳು ಮಿಡಿದರೂ ವಿಧಿ ಬೇರೊಂದು ಆಟವನ್ನು ಹೂಡಿ ನಿಷ್ಕರುಣೆ ತೋರಿದೆ. ಹೌದು, ಗಂಡನ ಚಿಕಿತ್ಸೆಗಾಗಿ ಮಹಿಳೆಯೊಬ್ಬರು ಮೊರೆಯಿಟ್ಟ ವಿಡಿಯೋವೊಂದು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನನ್ನು ಉಳಿಸಲು ಹೆಂಡತಿ ಗೀತಾ ದಾನಿಗಳ ಮೊರೆ ಹೋಗಿದ್ದರು. ದುರಂತವೆಂದರೆ ಚಿಕಿತ್ಸೆಗೆ ಬೇಕಾದ ಹಣ ಕೈಗೆ ಬರುವ ವೇಳೆಗೆ ಗಂಡನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಮೂಲ್ಕಿ ತಾಲೂಕಿನ ಸುರತ್ಕಲ್ನ ರಂಜೇಶ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಹೃದ್ರೋಗಕ್ಕೆ ತುತ್ತಾಗಿ 10 ಲಕ್ಷ ಖರ್ಚಾಗಿತ್ತು.
ಮತ್ತೆ ಕೆಲ ದಿನಗಳ ಹಿಂದೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದರು, ಐಸಿಯು ಶುಲ್ಕ ಭರಿಸಲು ಸಹ ಹಣವಿರಲಿಲ್ಲ. ಪತ್ನಿ ಗೀತಾ ತನ್ನಲ್ಲಿದ್ದ ಚಿನ್ನವನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಅತ್ತ ಗಂಡನ ಅನಾರೋಗ್ಯ ಉಲ್ಭಣಿಸುತಿದ್ದಂತೆ ತನ್ನ ಕಷ್ಟವನ್ನು ಸಾಮಾಜಿಕ ಕಾರ್ಯಕರ್ತ ಆಸೀಫ್ ಅಪತ್ಬಾಂಧವರಿಗೆ ತಿಳಿಸಿದ್ದರು. ಇವರ ಕಷ್ಟವನ್ನು ವಿಡಿಯೋ ಮಾಡಿ ಮಾಂಗಲ್ಯ ಉಳಿಸಲು ಸಹಾಯ ಮಾಡಿ ಎಂದು ಹೇಳಲಾಗಿತ್ತು. ವಿಡಿಯೋ ವೈರಲ್ ಆಗಿ ಹೃದಯವಂತರೂ ತಮ್ಮಿಂದಾದ ನೆರವು ನೀಡಿ 14 ಲಕ್ಷ ಆಗುವಂತೆ ಮಾಡಿದ್ದರು. ಆದ್ರೆ ಹಣದ ವ್ಯವಸ್ಥೆ ಆಗುವ ವೇಳೆಗೆ ರಂಜೇಶ್ ಶೆಟ್ಟಿ ಅವರ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.
ಪುಲ್ವಾಮಾ ಮಾದರಿಯಲ್ಲೇ ಮತ್ತೊಂದು ದಾಳಿಗೆ ಉಗ್ರರ ಸಂಚು?; 52 ಕೆ.ಜಿ ಸ್ಪೋಟಕಗಳನ್ನು ವಶಪಡಿಸಿಕೊಂಡ ಸೇನೆ
ವಿಡಿಯೋದಲ್ಲಿ ಗೀತಾ ಅವರು ತುಳುವಿನಲ್ಲಿ ನನ್ನ ಪತಿ ಐಸಿಯುನಲ್ಲಿದ್ದಾರೆ. ಆಸ್ಪತ್ರೆಗೆ ಕಟ್ಟಲು ಹಣ ಇಲ್ಲ, ಹಣ ಕಟ್ಟದಿದ್ದರೆ ಚಿಕಿತ್ಸೆ ಸಿಗಲಾರದು. ನನಗೊಂದು ಮಗು ಕೂಡಾ ಇದೆ. ನನಗೆ ಸಹಾಯ ಮಾಡಿ ಎಂದು ಎರಡು ಕೈ ಮುಗಿದು ಬೇಡಿಕೊಂಡಿದ್ದರು. ಈ ಮನಕಲಕುವ ದೃಶ್ಯಕ್ಕೆ ಜನರು ಮನ ಮಿಡಿದಿದ್ದರು. 10 ರೂಗಳಿಂದ ಶುರುವಾಗಿ ಲಕ್ಷದವರೆಗೂ ಹಣ ಜಮಾ ಮಾಡಿದರು. ಆಸ್ಪತ್ರೆ ಐಸಿಯು ಖರ್ಚು ಸುಮಾರು 5 ಲಕ್ಷ ತನಕ ಬರಬಹುದು ಎಂದು ಅಂದಾಜಿಸಿ 7 ಲಕ್ಷ ರೂ ತನಕ ಸಂಗ್ರಹ ಆಗಬಹುದೆಂದು ಸಾಮಾಜಿಕ ಕಾರ್ಯಕರ್ತರು ಅಂದುಕೊಂಡಿದ್ದರು. ಆದ್ರೆ ಆಶ್ಚರ್ಯ ಎಂಬಂತೆ ಅರ್ಧ ದಿನದಲ್ಲೇ 14 ಲಕ್ಷ ರೂ ಹರಿದು ಬಂತು. ದುರಂತ ಅಂದ್ರೆ ಚಿಕಿತ್ಸೆಗೆ ಬೇಕಾದ ಹಣ ಕೈಗೆ ಬರುವ ವೇಳೆಗೆ ರಂಜೇಶ್ ಇಹದ ಯಾತ್ರೆ ಮುಗಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ